ಐಸಿಸಿ ವಿಶ್ವಕಪ್ 2023: ಗೆಲುವಿನ ನಡುವೆಯೂ ಹೀನಾಯ ದಾಖಲೆ ಬರೆದ ಭಾರತ

ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯ ತನ್ನ ಮೊದಲಿನ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆದ್ದಿದ್ದರೂ ಅದೇ ಪಂದ್ಯದಲ್ಲಿ ಹೀನಾಯ ದಾಖಲೆಯೊಂದನ್ನು ಕೂಡ ಬರೆದಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯ ತನ್ನ ಮೊದಲಿನ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆದ್ದಿದ್ದರೂ ಅದೇ ಪಂದ್ಯದಲ್ಲಿ ಹೀನಾಯ ದಾಖಲೆಯೊಂದನ್ನು ಕೂಡ ಬರೆದಿದೆ.

ನಿನ್ನೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 200ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಕೆಎಲ್ ರಾಹುಲ್ (ಅಜೇಯ 97 ರನ್) ಮತ್ತು ವಿರಾಟ್ ಕೊಹ್ಲಿ (85ರನ್) ಅಮೋಘ ಬ್ಯಾಟಿಂಗ್ ನೆರವಿನಿಂದ 41.2 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 201ರನ್ ಕಲೆ ಹಾಕಿ 6 ವಿಕೆಟ್ ಅಂತರದಲ್ಲಿ ಗೆದ್ದು ಬೀಗಿತು. ಆದರೆ ಇದೇ ಪಂದ್ಯದಲ್ಲಿ ಆರಂಭಿಕ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಭಾರತ ಹೀನಾಯ ದಾಖಲೆಯೊಂದಕ್ಕೆ ಪಾತ್ರವಾಗಿದೆ.

ಭಾರತದ ಇನ್ನಿಂಗ್ಸ್ ನ ಮೊದಲ 2 ಓವರ್ ನಲ್ಲಿಯೇ ಭಾರತದ ಅಗ್ರ ಕ್ರಮಾಂಕದ ಮೂವರು ಬ್ಯಾಟರ್ ಗಳು ಔಟಾಗಿದ್ದರು. ಅದೂ ಕೂಡ ಎಲ್ಲರೂ ಶೂನ್ಯಕ್ಕೆ.. ಆರಂಭಿಕ ಆಟಗಾರ ಇಶಾನ್ ಕಿಶನ್ ಮೊದಲ ಓವರ್ ನ 4ನೇ ಎಸೆತದಲ್ಲಿ ಸ್ಟಾರ್ಕ್ ಬೌಲಿಂಗ್ ನಲ್ಲಿ ಔಟಾದರೆ, ಅವರ ನಂತರ 2ನೇ ಓವರ್ ನಲ್ಲಿ ಹೇಜಲ್ ವುಡ್ ಬೌಲಿಂಗ್ ನಲ್ಲಿ ನಾಯಕ ರೋಹಿತ್ ಶರ್ಮಾ ಎಲ್ ಬಿ ಬಲೆಗೆ ಬಿದ್ದರು. ಅದೇ ಓವರ್ ನ ಕೊನೆಯ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಕೂಡ ಔಟಾದರು. ಆಗ ಭಾರತ ತಂಡದ ಮೊತ್ತ ಕೇವಲ 2ರನ್ ಗಳು ಮಾತ್ರ.. ಇದೇ ಅಂಕಿ ಸಂಖ್ಯೆ ಇದೀಗ ಭಾರತ ತಂಡದ ಹೀನಾಯ ದಾಖಲೆಗೆ ಕಾರಣವಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಮೊದಲ 3 ವಿಕೆಟ್ ಗೆ ಕನಿಷ್ಠ ಮೊತ್ತ
ಟೀಂ ಇಂಡಿಯಾ ಕೇವಲ 2 ರನ್ ಗೆ 3 ವಿಕೆಟ್ ಕಳೆದುಕೊಂಡಿತ್ತು. ಇದು ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ತಂಡವೊಂದು 3 ವಿಕೆಟ್ ನಷ್ಟಕ್ಕೆ ಗಳಿಸಿದ್ದ ಕನಿಷ್ಟ ಮೊತ್ತ ಇದಾಗಿದೆ. ಇದಕ್ಕೂ ಮೊದಲು 2007ರಲ್ಲಿ ಬ್ರಿಡ್ಜ್ ಟೌನ್ ನಲ್ಲಿ ಐರ್ಲೆಂಡ್ ತಂಡ ಕೂಡ 2ರನ್ ಗೆ 3 ವಿಕೆಟ್ ಕಳೆದುಕೊಂಡಿತ್ತು. ಅದಕ್ಕಿಂತ ಮೊದಲು 2003ರಲ್ಲಿ ಡರ್ಬನ್ ನಲ್ಲಿ ನಡೆದ ಪಂದ್ಯದಲ್ಲಿ ಕೀನ್ಯಾ ತಂಡ 3 ರನ್ ಗೆ 3 ವಿಕೆಟ್ ಕಳೆದುಕೊಂಡಿತ್ತು.

Lowest scores at the fall of 3rd wkt vs Australia
2/3 - IRE, Bridgetown, 2007
2/3 - IND, Chennai, 2023*
3/3 - Kenya, Durban, 2003

ವಿಶ್ವಕಪ್ ನಲ್ಲಿ ಆರಂಭಿಕರಿಬ್ಬರೂ ಶೂನ್ಯಸುತ್ತಿದ 2ನೇ ಪ್ರಸಂಗ
ಇನ್ನು ಇದೇ ಪಂದ್ಯದಲ್ಲಿ ಭಾರತ ತಂಡದ ಆರಂಭಿಕರಾದ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾಗಿದ್ದರು. ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಭಾರತದ ಆರಂಭಿಕರಿಬ್ಬರೂ ಶೂನ್ಯಸುತ್ತಿದ 2ನೇ ಪ್ರಸಂಗ ಇದಾಗಿದೆ. ಇದಕ್ಕೂ ಮೊದಲು 1983ರಲ್ಲಿ ಟನ್‌ಬ್ರಿಡ್ಜ್ ವೆಲ್ಸ್ ಕ್ರೀಡಾಂಗಣದಲ್ಲಿ ನಡೆದ ಪ್ರುಡೆನ್ಶಿಯಲ್ ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತದ ಆರಂಭಿಕರಾದ ಸುನಿಲ್ ಗವಾಸ್ಕರ್ ಮತ್ತು ಕ್ರಿಸ್ ಶ್ರೀಕಾಂತ್ ಕೂಡ ಶೂನ್ಯಕ್ಕೆ ಔಟಾಗಿದ್ದರು. ಆ ಪಂದ್ಯದಲ್ಲಿ ಭಾರತ ತಂಡ ನಿಗಧಿತ 60 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿದ್ದರು.

ಅಂದು ತಂಡದ ನಾಯಕ ಕಪಿಲ್ ದೇವ್ 138 ಎಸೆತಗಳಲ್ಲಿ 6 ಸಿಕ್ಸರ್, 16 ಬೌಂಡರಿಗಳ ಸಹಿತ ಅಜೇಯ 175 ರನ್ ಗಳಿಸಿದ್ದರು. ಮಾತ್ರವಲ್ಲದೇ ಬೌಲಿಂಗ್ ನಲ್ಲಿ 1 ವಿಕೆಟ್ ಪಡೆದು ಅಂದು ಭಾರತದ ಗೆಲುವಿನ ರೂವಾರಿಯಾಗಿದ್ದರು. ಈ ಪಂದ್ಯ ಭಾರತೀಯ ಕ್ರಿಕೆಟ್ ಇತಿಹಾಸದ ಅಚ್ಚಳಿಯದ ಘಟನೆಯಾಗಿದೆ. ಇದೇ ಪಂದ್ಯ ಕಪಿಲ್ ದೇವ್ ಅವರ ಜೀವನಧಾರಿತ ಚಿತ್ರ 83ಯಲ್ಲೂ ಚಿತ್ರಿಸಲಾಗಿದೆ.

Both Indian openers out for duck in ODI WC
vs ZIM, Tunbridge, 1983
vs AUS, Chennai, 2023

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com