ICC Champions Trophy 2025: ಮುಂದಿದೆ ಚಾಂಪಿಯನ್ಸ್ ಟ್ರೋಫಿ ಕದನ; ಪಾಕಿಸ್ತಾನಕ್ಕೆ ಭಾರತ ಪ್ರಯಾಣಿಸುವ ಸಾಧ್ಯತೆ ಇಲ್ಲ!

ಏಷ್ಯಾಕಪ್ ಟೂರ್ನಿ ವಿಚಾರದಲ್ಲಿ ಪರಸ್ಪರ ಸಂಘರ್ಷಕ್ಕಿಳಿದಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಮತ್ತು ಭಾರತ ಕ್ರಿಕೆಟ್ ಮಂಡಳಿ (Board of Control for Cricket in India) ನಡುವೆ ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 (ICC Champions Trophy 2025) ಟೂರ್ನಿ ಆಯೋಜನೆ ವಿಚಾರವಾಗಿ ಮತ್ತೊಂದು ಸುತ್ತಿನ ಕದನ ಏರ್ಪಡುವ ಸಾಧ್ಯತೆ ಇದೆ
ಚಾಂಪಿಯನ್ಸ್ ಟ್ರೋಫಿ-ಪಿಸಿಬಿ vs ಬಿಸಿಸಿಐ
ಚಾಂಪಿಯನ್ಸ್ ಟ್ರೋಫಿ-ಪಿಸಿಬಿ vs ಬಿಸಿಸಿಐ

ನವದೆಹಲಿ: ಏಷ್ಯಾಕಪ್ ಟೂರ್ನಿ (Asia Cup 2023) ವಿಚಾರದಲ್ಲಿ ಪರಸ್ಪರ ಸಂಘರ್ಷಕ್ಕಿಳಿದಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಮತ್ತು ಭಾರತ ಕ್ರಿಕೆಟ್ ಮಂಡಳಿ (Board of Control for Cricket in India) ನಡುವೆ ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 (ICC Champions Trophy 2025) ಟೂರ್ನಿ ಆಯೋಜನೆ ವಿಚಾರವಾಗಿ ಮತ್ತೊಂದು ಸುತ್ತಿನ ಕದನ ಏರ್ಪಡುವ ಸಾಧ್ಯತೆ ಇದೆ.

ಹೌದು.. ಹಾಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ (ICC Cricket World Cup 2023)ಯೇ ಇನ್ನೂ ಮುಗಿದಿಲ್ಲ.. ಅದಾಗಲೇ ಪಿಸಿಬಿ (PCB) ಮತ್ತು ಬಿಸಿಸಿಐ (BCCI) ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 (ICC Champions Trophy 2025) ಕದನ ಆರಂಭವಾಗಿದ್ದು, ಪಾಕಿಸ್ತಾನ (Pakistan)ದಲ್ಲಿ ಆಯೋಜನೆಯಾಗಿರುವ ಈ ಮಹತ್ವದ ಟೂರ್ನಿಗೆ ಬಿಸಿಸಿಐ ಭಾರತ ತಂಡ (Team India)ವನ್ನು ಕಳುಹಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

ಪಾಕಿಸ್ತಾನವು ICC ಚಾಂಪಿಯನ್ಸ್ ಟ್ರೋಫಿ 2025 ರ ಆತಿಥ್ಯ ವಹಿಸುತ್ತಿದ್ದು, ರಾಜಕೀಯವಾಗಿ ಭಾರತ ಮತ್ತು ಪಾಕಿಸ್ತಾನ (India vs Pakistan) ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಯಾಗಿಲ್ಲದ ಕಾರಣ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವ ಯಾವುದೇ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

ಒಂದೆರಡು ತಿಂಗಳ ಹಿಂದೆ, ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ನಿರಾಕರಿಸಿದ್ದರಿಂದ ಬಿಸಿಸಿಐ ವಿರುದ್ಧ ಪಿಸಿಬಿ ಹೋರಾಟವು ತೀವ್ರವಾಗಿತ್ತು. ಪಾಕಿಸ್ತಾನವು ಪಂದ್ಯಾವಳಿಯ ಆತಿಥ್ಯ ವಹಿಸಿತ್ತು, ಆದರೆ ಭಾರತ ಸರ್ಕಾರವು ತಡೆ ಒಡ್ಡಿದ್ದರಿಂದ ಪಂದ್ಯಾವಳಿಯ ಸ್ವರೂಪವನ್ನು ಬದಲಾಯಿಸಲು ACC (Asian Cricket Council) ಗೆ ಒತ್ತಾಯಿಸಲಾಯಿತು. ಇದರ ಪರಿಣಾಮವಾಗಿ, ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು ಮತ್ತು ಪಾಕಿಸ್ತಾನವು 4 ಪಂದ್ಯಗಳನ್ನು ಮತ್ತು ಶ್ರೀಲಂಕಾದಲ್ಲಿ ಉಳಿದ ಪಂದ್ಯಗಳನ್ನು ಆಯೋಜನೆ ಮಾಡಲಾಗಿತ್ತು. ಅಂದಹಾಗೆ ಈ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡವು ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 

ಒಂದು ವೇಳೆ ಪಾಕಿಸ್ತಾನ ತನ್ನ ನಿಲುವು ಬದಲಿಸದೇ ಹಠಮಾರಿ ಧೋರಣೆ ಮುಂದುವರೆಸಿದ್ದರೆ ಭಾರತ ತಂಡ ವಿಲ್ಲದೇ ಟೂರ್ನಿ ಆಯೋಜನೆ ಮಾಡಬೇಕಿತ್ತು. ಆದರೆ ಅದು ಸಾಧ್ಯವೇ ಇಲ್ಲ ಎಂಬ ಕಾರಣಕ್ಕೇ ಪಿಸಿಬಿ ಶ್ರೀಲಂಕಾದಲ್ಲಿ ಪಂದ್ಯ ಆಯೋಜನೆಗೆ ಒಪ್ಪಿಗೆ ಸೂಚಿಸಿತ್ತು.

ICCಗೆ ಕಗ್ಗಂಟಾಗಲಿದೆ ತಟಸ್ಥ ಸ್ಥಳದ ವಿಚಾರ
ಮೂಲತಃ ಮತ್ತು ವೇಳಾಪಟ್ಟಿಯ ಪ್ರಕಾರ, ಪಾಕಿಸ್ತಾನವು ಪಂದ್ಯಾವಳಿಯ ಆತಿಥೇಯವಾಗಿದೆ. ಆದರೆ ಬಿಸಿಸಿಐಗೆ ಭಾರತ ಸರ್ಕಾರ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ತೆರಳಲು ಅನುಮತಿ ನೀಡದಿರುವುದರಿಂದ ಮತ್ತೆ ಪಿಸಿಬಿ ಮತ್ತು ಬಿಸಿಸಿಐ ಸಂಘರ್ಷಕ್ಕೆ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿ ವೇದಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಒಂದು ವೇಳೆ ಮತ್ತೆ ಪಾಕಿಸ್ತಾನ ಬಿಸಿಸಿಐ ಮುಂದೆ ಮಂಡಿಯೂರಿದರೆ ಆಗ ಉಭಯ ತಂಡಗಳಿಗೂ ತಟಸ್ಥ ಸ್ಥಳವನ್ನು ಆಯ್ಕೆ ಮಾಡುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC)ಗೆ ದೊಡ್ಡ ಕೆಲಸವಾಗಿರಲಿದೆ. ಆಗ ಐಸಿಸಿ (International Cricket Council) ಆಯ್ಕೆ ಪಟ್ಟಿಯಲ್ಲಿ ಶ್ರೀಲಂಕಾ ಮತ್ತು ಯುಎಇ ಅಗ್ರ ಸ್ಥಾನಗಳಲ್ಲಿರಲಿವೆ ಎಂದು ಹೇಳಲಾಗಿದೆ. 

ಭಾರತ ತಂಡ ಕೊನೆಯ ಬಾರಿಗೆ 2013 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಗೆದಿದ್ದರು. 2017ರಲ್ಲಿ ಪಾಕಿಸ್ತಾನ ತಂಡ ಭಾರತವನ್ನು 180 ರನ್‌ಗಳಿಂದ ಸೋಲಿಸಿದ ನಂತರ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಮತ್ತೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ 2029 ರ ಆವೃತ್ತಿಯು ಭಾರತದಲ್ಲಿ ನಡೆಯಲಿದೆ.

ಐಸಿಸಿ ವಿಶ್ವಕಪ್‌ನ ಟಾಪ್ 7 ತಂಡಗಳಿಗೆ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ
ಹಾಲಿ ವಿಶ್ವಕಪ್‌ ಟೂರ್ನಿಯ ಪಾಯಿಂಟ್‌ ಪಟ್ಟಿಯಲ್ಲಿ 9 ಹಾಗೂ 10ನೇ ಸ್ಥಾನಗಳಲ್ಲಿರುವ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್‌ ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಇನ್ನುಳಿದ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕು. ಏಳು ಮತ್ತು ಎಂಟನೇ ಸ್ಥಾನದಲ್ಲಿರುವ ಅಫ್ಗಾನಿಸ್ತಾನ ಮತ್ತು ನೆದರ್ಲೆಂಡ್ಸ್‌ ತಂಡಗಳು ಇನ್ನುಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಅದೇ ಸ್ಥಾನವನ್ನು ಉಳಿಸಿಕೊಂಡರೆ, ಚಾಂಪಿಯನ್ಸ್‌ ಟ್ರೋಫಿಗೆ ಅರ್ಹತೆ ಪಡೆಯುವ ಅವಕಾಶ ಹೊಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com