ಟಿ20 ರ‍್ಯಾಂಕಿಂಗ್: ಅಗ್ರಸ್ಥಾನದಲ್ಲಿ ಸೂರ್ಯಕುಮಾರ್ ಹೊರತುಪಡಿಸಿ, ಟಾಪ್ 10ನಲ್ಲಿ ಭಾರತದ ಬ್ಯಾಟರ್ ಗಳೇ ಇಲ್ಲ!!
ಟೀಂ ಇಂಡಿಯಾ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಬುಧವಾರ ಪ್ರಕಟವಾಗಿರುವ ಐಸಿಸಿ ಪುರುಷರ ಟಿ–20 ಕ್ರಿಕೆಟ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
Published: 26th April 2023 08:19 PM | Last Updated: 26th April 2023 08:19 PM | A+A A-

ಸೂರ್ಯಕುಮಾರ್ ಯಾದವ್
ದುಬೈ: ಟೀಂ ಇಂಡಿಯಾ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಬುಧವಾರ ಪ್ರಕಟವಾಗಿರುವ ಐಸಿಸಿ ಪುರುಷರ ಟಿ–20 ಕ್ರಿಕೆಟ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
906 ಅಂಕಗಳೊಂದಿಗೆ ಭಾರತದ ಸೂರ್ಯ ಕುಮಾರ್ ಯಾದವ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, ಬ್ಯಾಟರ್‌ಗಳ ಪಟ್ಟಿಯಲ್ಲಿ ಭಾರತದ ಬೇರೆ ಯಾರೂ ಅಗ್ರ 10 ರೊಳಗೆ ಸ್ಥಾನ ಪಡೆದುಕೊಂಡಿಲ್ಲ.
ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ 602 ಅಂಕಗಳೊಂದಿಗೆ 14ನೇ ಸ್ಥಾನದಲ್ಲಿದ್ದು, ಕೆಎಲ್ ರಾಹುಲ್ 548 ಅಂಕಗಳೊಂದಿಗೆ ಇಷ್ಟೇ ಅಂಕಗಳಿಸಿರುವ ಡೇವಿಡ್ ಮಿಲ್ಲರ್ ರೊಂಜಿಗೆ ಜಂಟಿ 32ನೇ ಸ್ಥಾನದಲ್ಲಿದ್ದಾರೆ. 542 ಅಂಕಗಳೊಂದಿಗೆ ಭಾರತದ ಉದಯೋನ್ಮುಖ ಬ್ಯಾಟರ್ ಶುಭ್ ಮನ್ ಗಿಲ್ 34ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಭಾರತದ ಇಶಾನ್ ಕಿಶನ್ 51, ಹಾರ್ದಿಕ್ ಪಾಂಡ್ಯ 55, ಶ್ರೇಯಸ್ ಅಯ್ಯರ್ 69, ರಿಷಬ್ ಪಂತ್ 99ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಂಡದ ಆಯ್ಕೆ: ಸೂರ್ಯಕುಮಾರ್ ಯಾದವ್‌ಗೆ ಶಾಕ್; ರಹಾನೆ, ಶಾರ್ದೂಲ್‌ಗೆ ಅವಕಾಶ
ನ್ಯೂಜಿಲೆಂಡ್‌ನ ಮಾರ್ಕ್ ಚಾಪ್‌ಮನ್ ಮತ್ತು ಪಾಕಿಸ್ತಾನದ ಇಫ್ತಿಕಾರ್ ಅಹಮದ್ ಅವರು ವೃತ್ತಿಜೀವನದ ಶ್ರೇಷ್ಠ ರ್‍ಯಾಂಕಿಂಗ್ ಪಡೆದುಕೊಂಡಿದ್ದಾರೆ. ಚಾಪ್‌ಮನ್ 48 ಸ್ಥಾನಗಳಷ್ಟು ಮೇಲಕ್ಕೇರಿದ್ದು, 35ನೇ ರ್‍ಯಾಂಕ್ ಪಡೆದಿದ್ದಾರೆ. 2018ರ ಫೆಬ್ರುವರಿಯಲ್ಲಿ 54ನೇ ರ್ಯಾಂಕ್ ಹೊಂದಿದ್ದು ಅವರ ಈ ಹಿಂದಿನ ಶ್ರೇಷ್ಠ ಸಾಧನೆಯಾಗಿತ್ತು. ಆರು ಸ್ಥಾನಗಳಷ್ಟು ಮೇಲಕ್ಕೇರಿರುವ ಇಫ್ತಿಕಾರ್ 38ನೇ ರ್ಯಾಂಕ್ ಹೊಂದಿದ್ದು, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.