ಬಾರ್ಡರ್-ಗವಾಸ್ಕರ್ ಟ್ರೋಫಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಶ್ರೇಯಸ್ ಅಯ್ಯರ್ ಔಟ್

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಭಾರತದ ಬ್ಯಾಟರ್ ಶ್ರೇಯಸ್ ಅಯ್ಯರ್ ಹೊರಗುಳಿದಿದ್ದಾರೆ.
ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಭಾರತದ ಬ್ಯಾಟರ್ ಶ್ರೇಯಸ್ ಅಯ್ಯರ್ ಹೊರಗುಳಿದಿದ್ದಾರೆ.

ಹೌದು..  ಭಾರತದ ಬ್ಯಾಟರ್‌ ಶ್ರೇಯಸ್ ಅಯ್ಯರ್‌ ಅವರು ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಬಾರ್ಡರ್‌–ಗವಾಸ್ಕರ್‌ ಟೆಸ್ಟ್ ಸರಣಿಯ ಮೊದಲ ಪಂದ್ಯವು ಫೆಬ್ರವರಿ 9ರಿಂದ ನಾಗಪುರಲ್ಲಿ ಆರಂಭವಾಗಲಿದೆ.

ಮೂಲಗಳ ಪ್ರಕಾರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ (ಎನ್‌ಸಿಎ) ಫಿಟ್‌ನೆಸ್‌ ಪ್ರಮಾಣಪತ್ರ ಪಡೆಯಲು ಶ್ರೇಯಸ್‌ ಆಗಮಿಸಿದ್ದಾರೆ. ಆದರೆ, ಸಂಪೂರ್ಣ ಚೇತರಿಕೆ ಕಾಣಲು ಇನ್ನಷ್ಟು ಸಮಯ ಬೇಕು ಎಂದು ಅವರಿಗೆ ವೈದ್ಯರು ತಿಳಿಸಿದ್ದಾರೆ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಕ್ರೀಡಾ ವೆಬ್‌ಸೈಟ್‌ ವರದಿ ಮಾಡಿದೆ.

ಬಾಂಗ್ಲಾದೇಶ ವಿರುದ್ಧ 2022ರ ಡಿಸೆಂಬರ್‌ನಲ್ಲಿ ನಡೆದ ಟೆಸ್ಟ್‌ ಸರಣಿಯ ಬಳಿಕ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಅಲಭ್ಯರಾಗಿದ್ದರು. ಎನ್‌ಸಿಎ ಅಲ್ಲಿ ಉಳಿದುಕೊಂಡಿದ್ದ ಅಯ್ಯರ್ ಚಿಕಿತ್ಸೆ ಹಾಗೂ ತರಬೇತಿ ಪಡೆದಿದ್ದರು. ಅಯ್ಯರ್‌ ಬಾರ್ಡರ್‌–ಗವಾಸ್ಕರ್‌ ಸರಣಿಗೆ ತಂಡದೊಂದಿಗೆ ಅಭ್ಯಾಸ ಆರಂಭಿಸಲು ಬೆಂಗಳೂರಿನಿಂದ ನಾಗಪುರಕ್ಕೆ ಇಂದು (ಫೆಬ್ರವರಿ 2) ಪ್ರಯಾಣಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇದೀಗ ಅದು ಸಾಧ್ಯವಾಗುತ್ತಿಲ್ಲ.‌ ಅಯ್ಯರ್‌, ಎನ್‌ಸಿಎ ಅಲ್ಲಿಯೇ ಉಳಿದುಕೊಳ್ಳಬೇಕಿರುವುದು ಬಿಸಿಸಿಐ ವೈದ್ಯಕೀಯ ತಂಡ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮವಾಗಿದೆ. 

ಅವರು (ಅಯ್ಯರ್‌) ಫೆಬ್ರವರಿ 17 ರಂದು ದೆಹಲಿಯಲ್ಲಿ ಆರಂಭವಾಗುವ ಎರಡನೇ ಟೆಸ್ಟ್‌ಗೆ ಭಾರತ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು ಫೆಬ್ರವರಿ 09 ರಿಂದ ಮಾರ್ಚ್‌ 13ರ ವರೆಗೆ ನಡೆಯಲಿದೆ. ಬಳಿಕ ಏಕದಿನ ಸರಣಿಯ ಮೂರು ಪಂದ್ಯಗಳು ಕ್ರಮವಾಗಿ ಮಾರ್ಚ್‌ 17, 19 ಹಾಗೂ 22 ರಂದು ನಡೆಯಲಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com