ಸೋಂಕು ತಗಲುವ ಅಪಾಯ: ಐಸಿಯುನಿಂದ ವಿಶೇಷ ವಾರ್ಡ್‌ಗೆ ರಿಷಬ್ ಪಂತ್ ಸ್ಥಳಾಂತರ
ಸೋಂಕು ತಗುಲುವ ಹೆಚ್ಚಿನ ಅಪಾಯದ ಕಾರಣ ಗಾಯಗೊಂಡಿರುವ ಭಾರತದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ಐಸಿಯುನಿಂದ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಹೇಳಿದ್ದಾರೆ.
Published: 02nd January 2023 02:19 PM | Last Updated: 02nd January 2023 07:09 PM | A+A A-

ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಪಂತ್
ನವದೆಹಲಿ: ಸೋಂಕು ತಗುಲುವ ಹೆಚ್ಚಿನ ಅಪಾಯದ ಕಾರಣ ಗಾಯಗೊಂಡಿರುವ ಭಾರತದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ಐಸಿಯುನಿಂದ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆ, ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಉತ್ತರಾಖಂಡ ರಾಜ್ಯದ ಹರಿದ್ವಾರ ಜಿಲ್ಲೆಯ ಮಂಗಳೌರ್ ಮತ್ತು ನರ್ಸನ್ ನಡುವೆ ಪಂತ್ ಅವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಬೆಂಕಿ ಹೊತ್ತಿಕೊಂಡಿತ್ತು. 25 ವರ್ಷದ ಪಂತ್ ಪ್ರಾಣಾಪಾಯದಿಂದ ಪಾರಾಗಿದ್ದರು. ದೆಹಲಿಯಿಂದ ತನ್ನ ಹುಟ್ಟೂರಾದ ರೂರ್ಕಿಗೆ ತೆರಳುತ್ತಿದ್ದ ಅವರು ಮರ್ಸಿಡಿಸ್ ಕಾರನ್ನು ಚಲಾಯಿಸುತ್ತಿದ್ದರು.
ಆರಂಭದಲ್ಲಿ ಸಕ್ಷಮ್ ಆಸ್ಪತ್ರೆಯ ಮಲ್ಟಿಸ್ಪೆಷಾಲಿಟಿ ಮತ್ತು ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲ್ಪಟ್ಟ ನಂತರ ಪಂತ್ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
'ಇದೀಗ ಅವರು ಆರೋಗ್ಯವಾಗಿದ್ದಾರೆ ಮತ್ತು ಸೋಂಕು ತಗುಲುವ ಅಪಾಯದಿಂದಾಗಿ ಅವರನ್ನು ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ' ಎಂದು ಶರ್ಮಾ ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದರು.
ಇದನ್ನೂ ಓದಿ: ರಸ್ತೆ ಗುಂಡಿಯಿಂದ ರಿಷಬ್ ಪಂತ್ ಅವರಿದ್ದ ಕಾರು ಅಪಘಾತಕ್ಕೀಡಾಗಿದೆ: ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಶುಕ್ರವಾರ ಮಧ್ಯಾಹ್ನ ಬಿಸಿಸಿಐನ ಅಧಿಕೃತ ಹೇಳಿಕೆಯ ಪ್ರಕಾರ, ಪಂತ್ ಅವರ ಹಣೆಯ ಮೇಲೆ ಎರಡು ಗಾಯಗಳಾಗಿವೆ. ಅವರ ಬಲ ಮೊಣಕಾಲಿನ ಅಸ್ಥಿರಜ್ಜು ಹರಿದಿದೆ ಮತ್ತು ಮಣಿಕಟ್ಟು, ಮುಂಗಾಲು ಮತ್ತು ಕಾಲ್ಬೆರಳಿಗೆ ಗಾಯವಾಗಿದೆ. ಅಪಘಾತದ ನಂತರ ಅವರ ಬೆನ್ನಿನ ಮೇಲೆ ಸವೆತದ ಗಾಯಗಳಾಗಿವೆ.
ಸಂಜೆಯ ನಂತರ ಹೊರಡಿಸಿದ ಮೆಡಿಕಲ್ ಬುಲೆಟಿನ್‌ನಲ್ಲಿ, ಪಂತ್ ಅವರ ಮಿದುಳು ಮತ್ತು ಬೆನ್ನುಮೂಳೆಯ ಎಂಆರ್‌ಐ ಫಲಿತಾಂಶಗಳು ಸಾಮಾನ್ಯವಾಗಿವೆ. ಪಂತ್ ಅವರ ಮುಖದ ಗಾಯಗಳು, ಸೀಳಿರುವ ಗಾಯಗಳು ಮತ್ತು ಸವೆತಗಳನ್ನು ನಿರ್ವಹಿಸಲು ಪ್ಲಾಸ್ಟಿಕ್ ಸರ್ಜರಿಯನ್ನೂ ಸಹ ಮಾಡಲಾಗಿದೆ ಎಂದಿದೆ.
ಪಂತ್ ಅವರ ಬಲ ಮೊಣಕಾಲು ಮತ್ತು ಪಾದದ ಗಾಯಗಳ ಸ್ಥಿತಿಯ ಬಗ್ಗೆ ಕೇಳಿದಾಗ, 'ಮೊಣಕಾಲು ಅಸ್ಥಿರಜ್ಜು ಮತ್ತು ಪಾದದ ಗಾಯಗಳಿಗೆ ಸಂಬಂಧಿಸಿದಂತೆ, ನೋವು ಯಾವಾಗ ಕಡಿಮೆಯಾಗುತ್ತದೆಯೋ, ಆಗ ಬಿಸಿಸಿಐ ಅದರ ಬಗ್ಗೆ ತಿಳಿಸುತ್ತದೆ. ಬಿಸಿಸಿಐನ ವೈದ್ಯರ ತಂಡದಿಂದ ಈ ಬಗ್ಗೆ ನಿರ್ಧರಿಸುತ್ತದೆ ಎಂದು ಶರ್ಮಾ ಹೇಳಿದರು.
ಇದನ್ನೂ ಓದಿ: ರಿಷಬ್ ಪಂತ್ ರನ್ನು ದೆಹಲಿಗೆ ಏರ್ ಲಿಫ್ಟ್ ಮಾಡುವ ಅಗತ್ಯವಿಲ್ಲ: ಡಿಡಿಸಿಎ ಸ್ಪಷ್ಟನೆ
ಸೋಂಕು ತಗಲುವ ಸಾಧ್ಯತೆ ಹೆಚ್ಚಿರುವುದರಿಂದ ಪಂತ್ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಬರದಂತೆ ಶರ್ಮಾ ಜನರನ್ನು ವಿನಂತಿಸಿದ್ದಾರೆ. 'ನಾನು ಶನಿವಾರ ಅವರನ್ನು ಮೊದಲ ಬಾರಿಗೆ ಭೇಟಿಯಾಗಲು ಹೋದಾಗ, ಸೋಂಕು ತಗಲುವ ಸಾಧ್ಯತೆ ಹೆಚ್ಚಿರುವ ಕಾರಣ ಸಂದರ್ಶಕರು ಬರಬಾರದು ಎಂದು ನಮಗೆ ತಿಳಿಸಲಾಯಿತು' ಎಂದಿದ್ದಾರೆ.
ಪಂತ್ ಅವರನ್ನು ನೋಡಿಕೊಳ್ಳಲು ಅವರ ಕುಟುಂಬದ ಸದಸ್ಯರಿದ್ದಾರೆ. ಅವರು ಶೀಘ್ರವಾಗಿ ಗುಣಮುಖರಾಗುವಂತೆ ಪ್ರಾರ್ಥನೆ ಮಾಡಿ. ಬದಲಿಗೆ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಯಾರೊಬ್ಬರಿಗೂ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.