ಶ್ರೀಲಂಕಾ ಸರಣಿ ನಡುವೆಯೇ ಟೀಂ ಇಂಡಿಯಾ ತೊರೆದು ಬೆಂಗಳೂರಿಗೆ ದೌಡಾಯಿಸಿದ ಕೋಚ್ ರಾಹುಲ್ ದ್ರಾವಿಡ್!; 'ಜಾಮಿ'ಗೇನಾಯ್ತು?
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾ ತೊರೆದು ದಿಢೀರ್ ಬೆಂಗಳೂರಿಗೆ ದೌಡಾಯಿಸಿದ್ದಾರೆ.
Published: 13th January 2023 03:39 PM | Last Updated: 13th January 2023 07:12 PM | A+A A-

ರಾಹುಲ್ ದ್ರಾವಿಡ್
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾ ತೊರೆದು ದಿಢೀರ್ ಬೆಂಗಳೂರಿಗೆ ದೌಡಾಯಿಸಿದ್ದಾರೆ.
ಮೂಲಗಳ ಪ್ರಕಾರ ರಾಹುಲ್ ದ್ರಾವಿಡ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಅವರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ 2ನೇ ಏಕದಿನ ಪಂದ್ಯದ ವೇಳೆ ದ್ರಾವಿಡ್ ಅವರಿಗೆ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಂಗಾಲ್ ಕ್ರಿಕೆಟ್ ಮಂಡಳಿಯ ವೈದ್ಯರು ತಪಾಸಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದ್ರಾವಿಡ್ ಆರೋಗ್ಯದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಅವರು ಭಾನುವಾರ ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ವೈದ್ಯರನ್ನು ಭೇಟಿಯಾಗಿ ಕೆಲವು ಮುಂಜಾಗ್ರತಾ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಇಂತಹವನು ನಾಯಕನಾಗಬೇಕಾ? ಸಹ ಆಟಗಾರರನ್ನು ನಿಂದಿಸಿದ ಹಾರ್ದಿಕ್ ಪಾಂಡ್ಯ ವಿರುದ್ಧ ನೆಟ್ಟಿಗರು ಗರಂ, ವಿಡಿಯೋ!
ದ್ರಾವಿಡ್ ವಿಮಾನದಲ್ಲಿ ಕುಳಿತಿರುವ ಮತ್ತು ವಿಮಾನ ನಿಲ್ದಾಣದಲ್ಲಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಭಾನುವಾರದ ಪಂದ್ಯದ ವೇಳೆ ದ್ರಾವಿಡ್ ಅನುಪಸ್ಥಿತಿ
ಭಾನುವಾರ ತಿರುವನಂತಪುರದಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ಭಾರತ ತಂಡ ಮತ್ತು ಸಹಾಯಕ ಸಿಬ್ಬಂದಿ ಇಂದು ಸಂಜೆ ಕೋಲ್ಕತ್ತದಿಂದ ತೆರಳಲಿದೆ. ಇದಕ್ಕೂ ಮುನ್ನವೇ ದ್ರಾವಿಡ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ, ಬೆಳಗಿನ ಜಾವದ ವಿಮಾನದಲ್ಲಿ ಕೋಲ್ಕತ್ತದಿಂದ ಬೆಂಗಳೂರಿಗೆ ತೆರಳಿದ್ದಾರೆ.
ಇದನ್ನೂ ಓದಿ: ಕ್ಯಾಸಿನೋ, ಭ್ರಷ್ಟಾಚಾರ ಮತ್ತು ನಕಲಿ ಪ್ರವಾದಿ: ಕಳೆದ T20 ವಿಶ್ವಕಪ್ ನಲ್ಲಿ ಶ್ರೀಲಂಕಾ ಕಳಪೆ ಪ್ರದರ್ಶನಕ್ಕೆ ಕಾರಣಗಳು!
ಇದೇ ಜನವರಿ 11ಕ್ಕೆ ದ್ರಾವಿಡ್ ಅವರು 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡ 2–0 ಮುನ್ನಡೆ ಪಡೆಯುವ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ. ತಿರುವನಂತಪುರದ ಮೂರನೇ ಪಂದ್ಯ ಔಪಚಾರಿಕವಾಗಿ ಉಳಿದಿದೆ.