ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಕದನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಟೂರ್ನಿಯಲ್ಲಿ ಸೋಲಿನ್ನೇ ಕಾಣದ ಟೀಂ ಇಂಡಿಯಾ, ಇದೀಗ ಐದು ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಟೀಂ ಇಂಡಿಯಾ ಉತ್ತಮ ಫಾರ್ಮ್‌ನಲ್ಲಿದ್ದರೂ ಅಭಿಮಾನಿಗಳ ಮನದಲ್ಲಿ ಒಂದಷ್ಟು ಟೆನ್ಶನ್ ಇದೆ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಮಹತ್ವದ ಹೇಳಿಕೆ ನೀಡಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಅನುಭವದೊಂದಿಗೆ ಟೀಂ ಇಂಡಿಯಾ ಎದುರಿಸುವ ಸಂಭಾವ್ಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
'ಆಸ್ಟ್ರೇಲಿಯನ್ ಆಟಗಾರರಿಗೆ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದು ತಿಳಿದಿದೆ. ಅವರು ವಿಶ್ವಕಪ್ ಅನ್ನು ಹಲವು ಬಾರಿ ಗೆದ್ದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್‌ನಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಯಾವುದೇ ತೊಂದರೆಯಿಲ್ಲದೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಎಲ್ಲಾ ಬ್ಯಾಟ್ಸ್‌ಮನ್‌ಗಳು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದರು. ಅವರು ದೊಡ್ಡ ಪಂದ್ಯಗಳಲ್ಲಿ ಆಡುವ ಮಾನಸಿಕ ಶಕ್ತಿ ಮತ್ತು ಸ್ಥಿರತೆಯನ್ನು ಹೊಂದಿದ್ದಾರೆ. ಹೀಗಾಗಿಯೇ, ಅವರು ಪ್ರಮುಖ ಪಂದ್ಯಾವಳಿಗಳನ್ನು ಗೆದ್ದಿದ್ದಾರೆ' ಎಂದು ಯುವಿ ತಿಳಿಸಿದ್ದಾರೆ.
ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ರೋಹಿತ್ ಶರ್ಮಾ ಪಡೆ ಈಗ ಸಂಪೂರ್ಣ ಉತ್ತಮ ತಂಡವಾಗಿದೆ. ಹೀಗಾಗಿ, ಈ ಪಂದ್ಯದಲ್ಲಿ ಭಾರತ ಸೋಲನುಭವಿಸುವ ಸಾಧ್ಯತೆ ಕಡಿಮೆ. ಒತ್ತಡವನ್ನು ನಿಭಾಯಿಸುವ ಹಿನ್ನೆಲೆಯಲ್ಲಿ ಮಾತ್ರ ಭಾರತ ಅಪಾಯದಲ್ಲಿದೆ. 2003ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತನ್ನ ಪ್ರಾಬಲ್ಯವನ್ನು ಮುಂದುವರೆಸಿತು. ಈ ಬಾರಿ ಭಾರತದ್ದೇ ಪ್ರಾಬಲ್ಯವಾಗಿದ್ದು, ಆಸ್ಟ್ರೇಲಿಯಾದ ಆಟಗಾರರು ಅದ್ಭುತವಾಗಿ ಆಡದ ಹೊರತು ಗೆಲ್ಲುವ ಯಾವುದೇ ಅವಕಾಶ ಅವರ ಮುಂದಿಲ್ಲ' ಎಂದು ಹೇಳಿದ್ದಾರೆ.
Advertisement