
ಶನಿವಾರ (ಮೇ 18) ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ನಡೆದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪಂದ್ಯವೇ ಎಂಎಸ್ ಧೋನಿ ಅವರ ಅಂತಿಮ ಪಂದ್ಯವಾಗಿತ್ತು ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಐಪಿಎಲ್ 2024ನೇ ಆವೃತ್ತಿಯ ಲೀಗ್ ಹಂತದ ತಮ್ಮ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 27 ರನ್‌ಗಳ ಅಂತರದಿಂದ ಸೋತ ನಂತರ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿಜೆ. ಧೋನಿಯವರ 13 ಎಸೆತಗಳಲ್ಲಿ 25 ರನ್‌ಗಳ ಕಲೆಹಾಕುವಿಕೆಯು ತಂಡದ ಗೆಲುವಿಗೆ ನೆರವಾಗಲಿಲ್ಲ. ಆರ್‌ಸಿಬಿಯ ಯಶ್ ದಯಾಳ್ ಎಸೆದ ಕೊನೆಯ ಓವರ್‌ನಲ್ಲಿ ಸಿಎಸ್‌ಕೆಗೆ 17 ರನ್‌ಗಳ ಅಗತ್ಯವಿದ್ದಾಗ 110 ಮೀ. ಸಿಕ್ಸರ್ ಬಾರಿಸಿದ ಧೋನಿ, ನಂತರದ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ತಾವು ಔಟಾಗಿದ್ದಕ್ಕೆ ಕೋಪಗೊಂಡ ಧೋನಿ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ, ಡಗೌಟ್‌ಗೆ ಹಿಂತಿರುಗುವಾಗ ತಮ್ಮ ಬ್ಯಾಟ್‌ಗೆ ಗುದ್ದಿದರು. ಯಶ್ ದಯಾಳ್ ಅಂತಿಮ ಓವರ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಆರ್‌ಸಿಬಿ ಗೆಲುವಿಗೆ ಕಾರಣವಾದಾಗಲೂ ಡಗೌಟ್‌ನಲ್ಲಿ ಕುಳಿತಿದ್ದ ಧೋನಿ ಮುಖದಲ್ಲಿ ಉದ್ವಿಗ್ನತೆ ಕಂಡುಬಂತು.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸೋಲು ಕಂಡ ನಂತರ ಎಂಎಸ್ ಧೋನಿ ಅವರು ಪಂದ್ಯದ ನಂತರದ ಹ್ಯಾಂಡ್‌ಶೇಕ್ ನೀಡಲು ಬರಲಿಲ್ಲ. ಈ ವೇಳೆ ಮೈದಾನಕ್ಕೆ ಬಂದರೂ ಹ್ಯಾಂಡ್‌ಶೇಕ್ ನೀಡದೆ ಹೊರನಡೆಯುತ್ತಿರುವುದು ಕಂಡುಬಂತು. ಈ ವಿಡಿಯೋ ವೈರಲ್ ಆಗಿದ್ದು, ಧೋನಿ ಅವರಿಗಿದು ಕೊನೆಯ ಐಪಿಎಲ್ ಪಂದ್ಯವಾಗಿತ್ತು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಕೆಲವು ಅಭಿಮಾನಿಗಳು ಎಂಎಸ್ ಧೋನಿ ನಿವೃತ್ತಿಯಾಗದಂತೆ ಮತ್ತು 42 ವರ್ಷದ ಧೋನಿಯವರು ಐಪಿಎಲ್‌ನಲ್ಲಿ ಕನಿಷ್ಠ ಇನ್ನೊಂದು ವರ್ಷ ಆಡಬೇಕು ಎಂದು ಮನವಿ ಮಾಡಿದ್ದಾರೆ. 2019 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ODI ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಸೋತ ಬಳಿಕ ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ಎಂಎಸ್ ಧೋನಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ 2020ರ ಆಗಸ್ಟ್ 15ರಲ್ಲಿ ವಿದಾಯ ಹೇಳಿದ್ದರು. ಇದೀಗ ಸಿಎಸ್‌ಕೆ ತಂಡದ ಸೋಲಿನೊಂದಿಗೆ ಅವರು ಐಪಿಎಲ್‌ಗೂ ವಿದಾಯ ಹೇಳುತ್ತಿದ್ದಾರೆ ಎನ್ನುವ ವಿಚಾರವು ಅಭಿಮಾನಿಗಳ ಆಘಾತಕ್ಕೆ ಕಾರಣವಾಗಿದೆ.
15ನೇ ಓವರ್‌ನಲ್ಲಿ ಸಿಎಸ್‌ಕೆ 6 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿರುವಾಗ ಬಂದ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಉತ್ತಮ ಪ್ರಯತ್ನ ಮಾಡಿದರು. ಜಡೇಜಾ 22 ಎಸೆತಗಳಲ್ಲಿ 42 ರನ್ ಗಳಿಸಿ ಅಜೇಯರಾಗಿ ಉಳಿದರು. ಸಿಎಸ್‌ಕೆ ಪ್ಲೇಆಫ್ ತಲುಪಲು 201 ರನ್‌ಗಳ ಅಗತ್ಯವಿತ್ತು. ಆದರೆ, 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 191 ರನ್‌ಗಳಿಗೆ ಕಟ್ಟಿಹಾಕಿದ ಆರ್‌ಸಿಬಿ, 27 ರನ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಪ್ಲೇಆಫ್ ಪ್ರವೇಶಿಸಿತು.
ಎಂಎಸ್ ಧೋನಿ ಮುಂದಿನ ದಿನಗಳಲ್ಲಿ ನಿವೃತ್ತಿ ಘೋಷಿಸಿದರೆ, ಅವರು ಅತ್ಯಂತ ಯಶಸ್ವಿ ನಾಯಕನಾಗಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಕೊನೆಗೊಳಿಸುತ್ತಾರೆ. ಐಪಿಎಲ್‌ನಲ್ಲಿ 264 ಪಂದ್ಯಗಳನ್ನು ಆಡಿರುವ ಅವರು, 5243 ರನ್ ಗಳಿಸಿದ್ದಾರೆ ಮತ್ತು T20 ಲೀಗ್‌ನಲ್ಲಿ 226 ಬಾರಿ ತಂಡವನ್ನು ಮುನ್ನಡೆಸುವ ಬಹುತೇಕ ಗೆಲುವುಗಳಿಗೆ ಕಾರಣರಾಗಿದ್ದಾರೆ.
2020 ನೇ ಆವೃತ್ತಿಯ ಕೊನೆಯಲ್ಲಿ ಧೋನಿ ಅವರು ಐಪಿಎಲ್‌ನಿಂದ 'ಖಂಡಿತವಾಗಿಯೂ ನಿವೃತ್ತಿಯಾಗುವುದಿಲ್ಲ' ಎಂದು ಹೇಳಿದ್ದರು. ಬಳಿಕ 2023 ರಲ್ಲಿ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಪ್ರಶಸ್ತಿ ಗೆದ್ದಿತು. ಅದುವೇ ಬಹುಶಃ ಅವರ ಕೊನೆಯ ಐಪಿಎಲ್ ಆಗಲಿದೆ ಎನ್ನಲಾಗಿತ್ತು. ಆದರೆ, 2024ನೇ ಆವೃತ್ತಿಯಲ್ಲೂ ಧೋನಿ ಸಿಎಸ್‌ಕೆ ಪರವಾಗಿ ಆಡಿದ್ದರು. ಆದರೆ, ನಾಯಕತ್ವದಿಂದ ಹೊರನಡೆದಿದ್ದರು.
Advertisement