
ಹೈದರಾಬಾದ್: ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಜಸ್ತಾನ ವಿರುದ್ಧ ಆರ್ ಸಿಬಿ ತಂಡ ಸೋತು ಹೊರಬಿದ್ದ ಬೆನ್ನಲ್ಲೇ ಟೀಕೆಗಳ ಮಹಾಪೂರವೇ ಹರಿಯುತ್ತಿದ್ದು, ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಮತ್ತೆ ಆರ್ ಸಿಬಿ ಮತ್ತು ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.
ಪ್ಲೇ ಆಫ್ಸ್ ರೇಸ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರದಬ್ಬಿದ ದಿನದಿಂದಲೂ ಸಿಎಸ್‌ಕೆ ಮಾಜಿ ಬ್ಯಾಟರ್ ಅಂಬಾಟಿ ರಾಯುಡು ನಾನಾ ರೀತಿಯಲ್ಲಿ ಆರ್‌ಸಿಬಿ ತಂಡವನ್ನು ಟೀಕಿಸುತ್ತಾ ಬಂದಿದ್ದು, ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಅಂಬಾಟಿ ರಾಯುಡು, ಆರ್‌ಸಿಬಿ ತಂಡ ಇಷ್ಟು ವರ್ಷ ಒಮ್ಮೆಯೂ ಟ್ರೋಫಿ ಗೆಲ್ಲದೇ ಇರುವುದಕ್ಕೆ ವಿರಾಟ್ ಕೊಹ್ಲಿ ಮತ್ತು ತಂಡದ ಮಾಲೀಕರೇ ಮುಖ್ಯ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆರ್ ಸಿಬಿ ತಂಡವನ್ನು ಗೇಲಿ ಮಾಡಿದ್ದ ಅಂಬಟಿ ರಾಯುಡು ಮತ್ತು ಇತರೆ ಆಟಗಾರರು
ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಎಲಿಮಿನೇಟರ್ ಪಂದ್ಯ ಸೋತ ಬಳಿಕ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಂಬಾಟಿ ರಾಯುಡು ವಿಡಿಯೋ ಒಂದನ್ನು ಹಂಚಿಕೊಂಡು '5 ಬಾರಿ ಚಾಂಪಿಯನ್ಸ್ ಯಾರು ಎಂಬುದನ್ನು ಕೆಲವೊಮ್ಮೆ ತೋರಿಸಿಕೊಡಬೇಕಾಗುತ್ತದೆ' ಎಂದು ಅಡಿಬರಹ ಬರೆದಿದ್ದರು.
ಈ ಪೋಸ್ಟ್ ಗೆ ಸಿಎಸ್‌ಕೆ ಆಟಗಾರರಾದ ದೀಪಕ್ ಚಹರ್, ಮತೀಶ ಪತಿರಣ ಮತ್ತು ತುಶಾರ್ ದೇಶಪಾಂಡೆ ಕಾಮೆಂಟ್ ಮಾಡುವ ಮೂಲಕ ಆರ್‌ಸಿಬಿ ತಂಡವನ್ನು ಗೇಲಿ ಮಾಡಿದ್ದರು. ಇದರ ಬೆನ್ನಲ್ಲೇ ಕ್ರಿಕೆಟ್ ಪ್ರಿಯರು ಮತ್ತು ಆರ್ ಸಿಬಿ ಅಭಿಮಾನಿಗಳು ಅಂಬಾಟಿ ರಾಯುಡುಗೆ ಕ್ಲಾಸ್ ತೆಗೆದುಕೊಂಡಿದ್ದು, ಈ ಬೆಳವಣಿಗೆ ಬಳಿಕ ಟ್ವೀಟ್ ಒಂದನ್ನು ಮಾಡಿರುವ ಅಂಬಾಟಿ ರಾಯುಡು ಆರ್‌ಸಿಬಿ ಅಭಿಮಾನಿಗಳ ಮನ ಗೆಲ್ಲುವ ಪ್ರಯತ್ನ ಮಾಡಿ, ತಂಡದ ಟ್ರೋಫಿ ಬರಕ್ಕೆ ವಿರಾಟ್ ಕೊಹ್ಲಿ ಮತ್ತು ಸಂಗಡ ಕಾರಣ ಎಂದು ಆರೋಪ ಮಾಡಿದ್ದಾರೆ.
"ಆರ್‌ಸಿಬಿ ಬೆಂಬಲಿಗರನ್ನು ಕಂಡು ನನ್ನ ಹೃದಯ ಉಕ್ಕುತ್ತಿದೆ. ಹಲವು ವರ್ಷಗಳಿಂದ ಒಂದೇ ಉತ್ಸಾಹ ಮತ್ತು ಪ್ರೀತಿಯಿಂದ ಅವರು ತಮ್ಮ ತಂಡವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ವ್ಯಕ್ತಿ ಪೂಜೆ ಮತ್ತು ವೈಯಕ್ತಿಕ ಮೈಲುಗಲ್ಲುಗಳಿಗಿಂತಲೂ ತಂಡಕ್ಕೆ ಟ್ರೋಫಿ ಗೆದ್ದುಕೊಡಬೇಕು ಎಂಬುದು ತಂಡದ ಉದ್ದೇಶ ಆಗಿದ್ದರೆ, ಟ್ರೋಫಿ ಗೆಲುವಿನ ಬರ ಎದುರಾಗುತ್ತಿರಲಿಲ್ಲ.
ಈಗಾಗಗಲೇ ಹಲವು ಬಾರಿ ಆರ್‌ಸಿಬಿ ಟ್ರೋಫಿ ಗೆದ್ದಿರಬೇಕಾಗಿತ್ತು. ಆರ್‌ಸಿಬಿ ಎಂತಹ ಅದ್ಭುತ ಆಟಗಾರರನ್ನು ಕೈಬಿಟ್ಟಿದೆ ಎಂಬುದನ್ನು ನೆನಪಿಸಿಕೊಳ್ಳಿ. ತಂಡಕ್ಕೆ ಮೊದಲ ಆದ್ಯತೆ ನೀಡುವ ಆಟಗಾರರನ್ನು ತರುವಂತೆ ಮ್ಯಾನೇಜ್ಮೆಂಟ್ ಮೇಲೆ ಒತ್ತಡ ಹಾಕಿ. ಮೆಗಾ ಆಕ್ಷನ್ ಮೂಲಕ ತಂಡ ಹೊಸ ಅಧ್ಯಾಯ ಬರೆಯಲಿ" ಎಂದು ಅಂಬಾಟಿ ರಾಯುಡು ಟ್ವೀಟ್ ಮಾಡಿದ್ದಾರೆ.
Advertisement