ಮುಂಬೈ: ನ್ಯೂಜಿಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 147 ರನ್ ಗಳ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದು, ರಿಷಬ್ ಪಂತ್ ಆಸರೆಯಾಗಿದ್ದಾರೆ.
ನ್ಯೂಜಿಲೆಂಡ್ ನೀಡಿರುವ 147 ರನ್ ಗಳ ಸಾಮಾನ್ಯ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡ ಆರಂಭದಿಂದಲೇ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
ನ್ಯೂಜಿಲೆಂಡ್ ನ ಎಜಾಜ್ ಪಟೇಲ್ 4 ವಿಕೆಟ್ ಪಡೆದು ಭಾರತದ ದಿಢೀರ್ ಪತನಕ್ಕೆ ಕಾರಣರಾದರು. ಮ್ಯಾಟ್ ಹೆನ್ರಿ ಮತ್ತು ಗ್ಲೇನ್ ಫಿಲಿಪ್ಸ್ ಕೂಡ ತಲಾ 1 ವಿಕೆಟ್ ಪಡೆದು ಭಾರತದ ಮೇಲೆ ಒತ್ತಡ ಹೇರಿದರು.
ಇನ್ನು ಭಾರತದ ಪರ ರಿಷಬ್ ಪಂತ್ ಹೊರತು ಪಡಿಸಿದರೆ ಉಳಿದಾವ ಆಟಗಾರನಿಂದಲೂ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರದರ್ಶನ ಮೂಡಿಬರಲಿಲ್ಲ. ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ 5, ನಾಯಕ ರೋಹಿತ್ ಶರ್ಮಾ 11, ಶುಭ್ ಮನ್ ಗಿಲ್ 1, ವಿರಾಟ್ ಕೊಹ್ಲಿ 1, ಸರ್ಫರಾಜ್ ಖಾನ್ 1 ಮತ್ತು ರವೀಂದ್ರ ಜಡೇಜಾ 6 ರನ್ ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.
ಇದೀಗ ಭೋಜನ ವಿರಾಮದ ವೇಳೆಗೆ ಭಾರತ 6 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದ್ದು, 53ರನ್ ಗಳಿಸಿರುವ ರಿಷಬ್ ಪಂತ್ ಮತ್ತು 6 ರನ್ ಗಳಿಸಿರುವ ವಾಷಿಂಗ್ಟನ್ ಸುಂದರ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಗೆಲ್ಲಲು ಇನ್ನೂ 55 ರನ್ ಗಳಿಸಬೇಕಿದೆ.
Advertisement