
ಬೆಂಗಳೂರು: ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು, ದಿನದಾಟದ ಮುಕ್ತಾಯಕ್ಕೆ ನ್ಯೂಜಿಲೆಂಡ್ 3 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿದೆ. ಅಲ್ಲದೆ ಬರೊಬ್ಬರಿ 134 ರನ್ ಗಳ ಮುನ್ನಡೆ ಸಾಧಿಸಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಲ್ಲಿ ವೈಫಲ್ಯ ಕಂಡ ಭಾರತ ಬಳಿಕ ಬೌಲಿಂಗ್ ನಲ್ಲೂ ವಿಕೆಟ್ ಗಾಗಿ ಪರದಾಟ ನಡೆಸಿತು.
ಭಾರತ ನೀಡಿದ್ದ 46 ರನ್ ಗಳ ಅಲ್ಪ ರನ್ ಗಳನ್ನು ನ್ಯೂಜಿಲೆಂಡ್ ತಂಡ ಮುಟ್ಟಿದ್ದು ಮಾತ್ರವಲ್ಲದೇ 2ನೇ ದಿನದಾಟದ ಅಂತ್ಯಕ್ಕೆ 134 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ.
ನ್ಯೂಜಿಲೆಂಡ್ ಪರ ಡೆವಾನ್ ಕನ್ವೆ 91 ರನ್ ಗಳಿಸಿದರೆ, ವಿಲ್ ಯಂಗ್ 33 ರನ್ ಗಳಿಸಿದರು. ಆರಂಭಿಕರಾದ ನಾಯಕ ಟಾಮ್ ಲಾಥಮ್ 15 ರನ್ ಗಳಿಸಿ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಔಟಾದರೆ, ಡೆವಾನ್ ಕನ್ವೆ ಆರ್ ಅಶ್ವಿನ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ವಿಲ್ ಯಂಗ್ ರನ್ನು ರವೀಂದ್ರ ಜಡೇಜಾ ಪೆಲಿವಿಯನ್ ಗೆ ಅಟ್ಟಿದರು.
ಬಳಿಕ ಜೊತೆಗೂಡಿದ ರಚಿನ್ ರವೀಂದ್ರ (22 ರನ್) ಮತ್ತು ಡರಿಲ್ ಮಿಚೆಲ್ (14 ರನ್) 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಕುಲದೀಪ್ ಯಾದವ್, ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಮೇಲುಗೈ ಸಾಧಿಸಿದ ಕಿವೀಸ್ ಪಡೆಗೆ ದಿನದ ಗೌರವ ಸಂದಿದೆ.
Advertisement