
ಬೆಂಗಳೂರು: ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಭಾರತ ತಂಡಕ್ಕೆ 3ನೇ ದಿನದಾಟದ ಅಂತಿಮ ಎಸೆತದಲ್ಲಿ ನ್ಯೂಜಿಲೆಂಡ್ ಭಾರಿಆಘಾತ ನೀಡಿದ್ದು, ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ವಿಕೆಟ್ ಉರುಳಿಸಿದೆ.
ಹೌದು.. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಎಚ್ಚರಿಕೆಯ ಆಟ ಪ್ರದರ್ಶಿಸುತ್ತಿದ್ದ ಭಾರತ ತಂಡಕ್ಕೆ ದಿನದಾಟದ ಅಂತ್ಯದ ಕೊನೆಯ ಎಸೆತದಲ್ಲಿ ಕಿವೀಸ್ ಮರ್ಮಾಘಾತ ನೀಡಿದ್ದು, 70 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ವಿರಾಟ್ ಕೊಹ್ಲಿ ವಿಕೆಟ್ ಉರುಳಿಸಿದೆ.
ದಿನದ ಅಂತಿಮ ಓವರ್ ಎಸೆದ ನ್ಯೂಜಿಲೆಂಡ್ ತಂಡದ ಗ್ಲೇನ್ ಫಿಲಿಪ್ಸ್ ತಮ್ಮ ಓವರ್ ಅಂತಿಮ ಎಸೆತದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಕೊಹ್ಲಿ ಔಟ್ ಸೈಡ್ ಆಫ್ ಬಂದ ಚೆಂಡನ್ನು ರಕ್ಷಣಾತ್ಮಕವಾಗಿ ಆಡಲು ಹೋಗಿದ್ದು ಈ ವೇಳೆ ಬ್ಯಾಟ್ ಅಂಚನ್ನು ಸವರಿದ ಚೆಂಡು ನೇರವಾಗಿ ಬ್ಲಂಡಲ್ ಕೈ ಸೇರಿತ್ತು. ಅಲ್ಟ್ರಾ ಎಡ್ಜ್ ನಲ್ಲಿ ಕೊಹ್ಲಿ ಔಟಾಗಿರುವುದು ಕಂಡುಬಂತು. ಈ ಇನ್ನಿಂಗ್ಸ್ ನಲ್ಲಿ ಕೊಹ್ಲಿ 102 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 70 ರನ್ ಕಲೆಹಾಕಿದ್ದರು.
ಆ ಮೂಲಕ 3ನೇ ದಿನದಾಟ ಅಂತ್ಯಕ್ಕೆ ಭಾರತ ತನ್ನ 2ನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿದ್ದು ಇನ್ನೂ 125 ರನ್ ಗಳ ಹಿನ್ನಡೆಯಲ್ಲಿದೆ. ಅಜೇಯ 70 ರನ್ ಗಳಿಸಿರುವ ಸರ್ಫರಾಜ್ ಖಾನ್ 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇನ್ನು ನ್ಯೂಜಿಲೆಂಡ್ ಪರ ಎಜಾಜ್ ಪಟೇಲ್ 2 ಮತ್ತು ಗ್ಲೆನ್ ಫಿಲಿಪ್ಸ್ 1 ವಿಕೆಟ್ ಪಡೆದಿದ್ದಾರೆ.
Advertisement