
ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸುತ್ತಿರುವ ಭಾರತ ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದು ಕೇವಲ 30 ರನ್ ಗಳ ಅಂತರದಲ್ಲಿ 3 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿದೆ.
4ನೇ ದಿನದ ಚಹಾ ವಿರಾಮದ ವೇಳೆಗೆ ಭಾರತ ತಂಡ 6 ವಿಕೆಟ್ ನಷ್ಟಕ್ಕೆ 438 ರನ್ ಗಳಿಸಿದ್ದು, ಕೇವಲ 82 ರನ್ ಗಳ ಮುನ್ನಡೆಯಲ್ಲಿದೆ. ಇಂದು ದಿನದಾಟದ ಅಂತ್ಯಕ್ಕೆ ಇನ್ನೂ ಒಂದು ಸೆಷನ್ ಬಾಕಿ ಇದ್ದು, ನಾಳೆ ಕೂಡ ಆಟ ಮುಂದುವರೆಯಲಿದೆ. ಹೀಗಾಗಿ ಭಾರತ ತಂಡ ಉಳಿದಿರುವ ಒಂದು ಸೆಷನ್ ಸಂಪೂರ್ಣವಾಗಿ ಬ್ಯಾಟಿಂಗ್ ಮಾಡುವುದಲ್ಲದೇ ಉತ್ತಮ ರನ್ ಪೇರಿಸಬೇಕು.
150 ರನ್ ಗಳಿಸಿದ್ದ ಸರ್ಫರಾಜ್ ಖಾನ್ ಟಿಮ್ ಸೌಥಿ ಬೌಲಿಂಗ್ ನಲ್ಲಿ ಔಟಾಗುತ್ತಲೇ ಅವರ ಬೆನ್ನ ಹಿಂದೆಯೇ 99 ರನ್ ಗಳಿಸಿದ್ದ ರಿಷಬ್ ಪಂತ್ ಕೂಡ ವಿಲಿಯಮ್ ಓರೌರ್ಕೆ ಬೌಲಿಂಗ್ ನಲ್ಲಿ ಔಟ್ ಆಗಿ ಕೇವಲ 1ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು.
ಮೊದಲ ಇನ್ನಿಂಗ್ಸ್ ನಲ್ಲಿ ಶೂನ್ಯ ಸುತ್ತಿ ಫೀಲ್ಡಿಂಗ್ ವೇಳೆ ಒಂದು ಪ್ರಮುಖ ಕ್ಯಾಚ್ ಮಿಸ್ ಮಾಡಿದ್ದ ಕೆಎಲ್ ರಾಹುಲ್ 2ನೇ ಇನ್ನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸುವ ವಿಶ್ವಾಸ ಮೂಡಿಸಿದ್ದರು. ಅಂತೆಯೇ ಅವರೂ ಕೂಡ 2 ಬೌಂಡರಿಗಳ ಸಮೇತ 12ರನ್ ಗಳಿಸಿದ್ದರು. ಆದರೆ ವಿಲಿಯಮ್ ಓರೌರ್ಕೆ ಬೌಲಿಂಗ್ ನಲ್ಲಿ ಔಟಾಗುವ ಮೂಲಕ ಮತ್ತೆ ನಿರಾಶೆ ಮೂಡಿಸಿದರು.
ಕೆಎಲ್ ರಾಹುಲ್ ಔಟಾಗುತ್ತಲೇ ಉಭಯ ತಂಡಗಳು ಚಹಾ ವಿರಾಮ ಪಡೆದವು. ಈ ಹೊತ್ತಿಗಾಗಲೇ ಭಾರತ ತಂಡ 6 ವಿಕೆಟ್ ನಷ್ಟಕ್ಕೆ 438 ರನ್ ಗಳಿಸಿದ್ದು, 4 ರನ್ ಗಳಿಸಿರುವ ರವೀಂದ್ರ ಜಡೇಜಾ ಮತ್ತು ಈಗಷ್ಟೇ ಬಂದ ಆರ್ ಆಶ್ವಿನ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
Advertisement