
ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 4ನೇ ದಿನ ಬ್ಯಾಟಿಂಗ್ ಮುಂದುವರೆಸಿರುವ ಭಾರತ ತಂಡ 4 ವಿಕೆಟ್ ಕಳೆದುಕೊಂಡು 408 ರನ್ ಪೇರಿಸಿದ್ದು, 150 ರನ್ ಗಳಿಸಿದ್ದ ಸರ್ಫರಾಜ್ ಖಾನ್ ಔಟಾಗಿದ್ದಾರೆ.
ನಿನ್ನೆ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿದ್ದ ಭಾರತ ತಂಡ ಇಂದು 4ನೇ ದಿನ ಬ್ಯಾಟಿಂಗ್ ಮುಂದುವರೆಸಿದ್ದು, ಇಂದು ಸರ್ಫರಾಜ್ ಖಾನ್ ಮತ್ತು ರಿಷಬ್ ಪಂತ್ ಭಾರತ ಬ್ಯಾಟಿಂಗ್ ಮುನ್ನಡೆಸಿದರು. ಈ ಜೋಡಿ ಶತಕದ ಜೊತೆಯಾಟವಾಡಿದ್ದು, ಸರ್ಫರಾಜ್ ಖಾನ್ 195 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 18 ಬೌಂಡರಿಗಳ ನೆರವಿನಿಂದ 150ರನ್ ಗಳಿಸಿ ಟಿಮ್ ಸೌಥಿ ಬೌಲಿಂಗ್ ನಲ್ಲಿ ಔಟಾದರು.
ಶತಕದಂಚಿನಲ್ಲಿ ಮುಗ್ಗರಿಸಿದ ಪಂತ್
ಇನ್ನು ಸರ್ಫರಾಜ್ ಖಾನ್ ಗೆ ಉತ್ತಮ ಸಾಥ್ ನೀಡಿದ್ದ ರಿಷಬ್ ಪಂತ್ ಕೂಡ ಭರ್ಜರಿ ಶತಕ ಸಿಡಿಸುವ ಹುಮ್ಮಸ್ಸಿನಲ್ಲಿದ್ದೃರು. 105 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 99 ರನ್ ಸಿಡಿಸಿದ್ದ ಪಂತ್ ವಿಲಿಯಮ್ ಓರೌರ್ಕೆ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆಗಿ ಕೇವಲ 1 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು.
ರವೀಂದ್ರ ಜಡೇಜಾರನ್ನು ಕೆಎಲ್ ರಾಹುಲ್ ಜೊತೆಗೂಡಿದ್ದು, ರಾಹುಲ್ ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಭಾರತ 5 ವಿಕೆಟ್ ನಷ್ಟಕ್ಕೆ 433ರನ್ ಗಳಿಸಿದ್ದು, 11 ರನ್ ಗಳಿಸಿರುವ ಕೆಎಲ್ ರಾಹುಲ್ ಮತ್ತು ಈಗಷ್ಟೇ ಕ್ರೀಸ್ ಗೆ ಬಂದಿರುವ ರವೀಂದ್ರ ಜಡೇಜಾ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇನ್ನು ನ್ಯೂಜಿಲೆಂಡ್ ಪರ ಎಜಾಜ್ ಪಟೇಲ್ 2 ಮತ್ತು ಗ್ಲೆನ್ ಫಿಲಿಪ್ಸ್, ವಿಲಿಯಮ್ ಓರೌರ್ಕೆ ಮತ್ತು ಟಿಮ್ ಸೌಥಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.
Advertisement