ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಅಂತರದಲ್ಲಿ ಹೀನಾಯವಾಗಿ ಸೋತ ಭಾರತ ತಂಡ ಸೋಲಿನಲ್ಲೂ ಅಪರೂಪದ ದಾಖಲೆ ಬರೆದಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಕೇವಲ 46 ರನ್ ಗಳಿಗೇ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡ 402 ರನ್ ಪೇರಿಸಿತ್ತು.
ಬಳಿಕ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 462 ರನ್ ಗಳಿಸಿ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 107 ರನ್ ಗುರಿ ನೀಡಿತು. ಈ ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ ಕೇವಲ 2 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿ 8 ವಿಕೆಟ್ ಅಂತರದಲ್ಲಿ ಭಾರತ ತಂಡವನ್ನು ಸೋಲಿಸಿತು.
ಸೋತ ಪಂದ್ಯದಲ್ಲೂ ಗರಿಷ್ಟ ರನ್, ಅಪರೂಪದ ದಾಖಲೆ ಬರೆದ ಭಾರತ!
ಇನ್ನು ಈ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ 462 ರನ್ ಕಲೆಹಾಕಿದ್ದು, ಭಾರತದಲ್ಲಿ ಸೋತ ಟೆಸ್ಟ್ ಪಂದ್ಯದಲ್ಲಿ ಭಾರತ ಕಲೆಹಾಕಿದ ಗರಿಷ್ಠ ಮೊತ್ತ ಇದಾಗಿದೆ. ಈ ಹಿಂದೆ 2005ರಲ್ಲಿ ಇದೇ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 449 ರನ್ ಪೇರಿಸಿತ್ತು. ಇದು ಭಾರತ ತಂಡ ಸೋತ ಪಂದ್ಯದಲ್ಲಿ ಕಲೆ ಹಾಕಿದ ಗರಿಷ್ಠ ರನ್ ಗಳಾಗಿತ್ತು. ಇದೀಗ ಈ ದಾಖಲೆಯನ್ನು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮುರಿದಿದೆ.
Highest innings total in a home defeat for India
462 vs NZ, Bengaluru, 2024*
449 vs PAK, Bengaluru, 2005
436 vs ENG, Hyderabad, 2024
424 vs AUS, Bengaluru, 1998
412 vs ENG, Chennai, 1985
ಮೊದಲ ದಿನದಾಟ ರದ್ದಾಗಿ ಫಲಿತಾಂಶ ಬಂದ 3ನೇ ಪಂದ್ಯ
ಇದೇ ವೇಳೆ ಮಳೆಯಿಂದಾಗಿ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ರದ್ದಾಗಿತ್ತು. ಆದರೂ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಗೆದ್ದು ಬೀಗಿದೆ. ಆ ಮೂಲಕ ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯಗಳ ಪೈಕಿ ಮೊದಲ ದಿನದಾಟ ರದ್ದಾಗಿ ಫಲಿತಾಂಶ ಬಂದ 3ನೇ ಪಂದ್ಯ ಇದಾಗಿದೆ. ಈ ಹಿಂದೆ 1976ಲ್ಲಿ (ಭಾರತ ಮತ್ತು ನ್ಯೂಜಿಲೆಂಡ್) ಮತ್ತು 2013ರಲ್ಲಿ (ಭಾರತ ಮತ್ತು ಆಸ್ಟ್ರೇಲಿಯಾ) ಇದೇ ರೀತಿ ಮೊದಲ ದಿನದಾಟ ರದ್ದಾಗಿ ಪಂದ್ಯ ಫಲಿತಾಂಶ ಕಂಡಿತ್ತು.
Victories after no play possible on first day in India
IND vs NZ, Chennai, 1976
IND vs AUS, Mohali, 2013
NZ vs IND, Bengaluru, 2024*
Advertisement