
ಚೆನ್ನೈ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 3ನೇ ದಿನ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡ ಭೋಜನ ವಿರಾಮದ ವೇಳೆಗೆ 3 ವಿಕೆಟ್ ನಷ್ಟಕ್ಕೆ 205ರನ್ ಕಲೆಹಾಕಿದೆ.
ನಿನ್ನೆ ಬಾಂಗ್ಲಾದೇಶವನ್ನು ಕೇವಲ 149 ರನ್ ಗಳಿಗೆ ಕಟ್ಟಿಹಾಕಿದ್ದ ಭಾರತ 237ರನ್ ಗಳ ಬೃಹತ್ ಮುನ್ನಡೆ ಪಡೆದಿತ್ತು. ಇಂದು ತನ್ನ ಪಾಲಿನ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರೆಸಿದ್ದು, 3ನೇ ದಿನದ ಭೋಜನ ವಿರಾಮದ ವೇಳೆ ಭಾರತ 3 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿದೆ.
ಆ ಮೂಲಕ ಭಾರತ ಬರೊಬ್ಬರಿ 432ರನ್ ಮುನ್ನಡೆ ಪಡೆದುಕೊಂಡಿದೆ. 86 ರನ್ ಗಳಿಸಿರುವ ಶುಭ್ ಮನ್ ಗಿಲ್ ಮತ್ತು 82 ರನ್ ಗಳಿಸಿರುವ ರಿಷಬ್ ಪಂತ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇಬ್ಬರೂ ಆಟಗಾರರು ಶತಕದಂಚಿನಲ್ಲಿದ್ದು ಇಬ್ಬರೂ ಶತಕ ಸಿಡಿಸಲೆಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಮತ್ತೆ ಕೈಕೊಟ್ಟ Rohit-Kohli
ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ತಲಾ 6 ರನ್ ಗಳಿಸಿ ಔಟಾಗಿ ನಿರಾಶೆ ಮೂಡಿಸಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಭಾರತ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ 2ನೇ ಇನ್ನಿಂಗ್ಸ್ ನಲ್ಲಿ ಕಡಿಮೆ ಮೊತ್ತಕ್ಕೆ ಔಟಾಗಿ ಮತ್ತೆ ಅಭಿಮಾನಿಗಳ ನಿರಾಶೆಗೆ ಕಾರಣರಾದರು.
ರೋಹಿತ್ ಕೇವಲ 5 ರನ್ ಗಳಿಸಿ ಟಸ್ಕಿನ್ ಅಹ್ಮದ್ ಗೆ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ 17ರನ್ ಗಳಿಸಿ ಮೆಹ್ದಿ ಹಸನ್ ಮಿರಾಜ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಕೂಡ ಕೇವಲ 10ರನ್ ಗೆ ಔಟಾದರು.
ಅತ್ತ ಬಾಂಗ್ಲಾದೇಶ ಪರ ಟಸ್ಕಿನ್ ಅಹ್ಮದ್, ಮೆಹ್ದಿ ಹಸನ್ ಮಿರಾಜ್ ಮತ್ತು ಶಕೀಬ್ ಅಲ್ ಹಸನ್ ತಲಾ 1 ವಿಕೆಟ್ ಪಡೆದರು.
Advertisement