ಕ್ರಿಕೆಟಿಗರ ಕನಸಿನ ತಾಣ: 'ಸೆಂಟರ್ ಆಫ್ ಎಕ್ಸಲೆನ್ಸ್ ಕ್ರಿಕೆಟ್ ಅಕಾಡೆಮಿ' ದಿಢೀರ್ ಉದ್ಘಾಟನೆ ಮಾಡಿದ BCCI; ಇದರ ವಿಶೇಷ ಏನು?
ಬೆಂಗಳೂರು: ಭವಿಷ್ಯದ ಕ್ರಿಕೆಟಿಗರಿಗಾಗಿ ಮತ್ತು ಹಾಲಿ ಕ್ರಿಕೆಟಿಗರಿಗಾಗಿ ಬೆಂಗಳೂರಿನಲ್ಲಿ ನಿರ್ಮಿಸಲಾಗಿದ್ದ ಸೆಂಟರ್ ಆಫ್ ಎಕ್ಸಲೆನ್ಸ್ ಕ್ರಿಕೆಟ್ ಅಕಾಡೆಮಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ (ಬಿಸಿಸಿಐ) ಭಾನುವಾರ ದಿಢೀರ್ ಉದ್ಘಾಟನೆ ಮಾಡಿದೆ.
ಕ್ರಿಕೆಟ್ ಆಟಗಾರರಿಗೆ ತರಬೇತಿ ನೀಡಲಾಗುತ್ತಿದ್ದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಸ್ವಂತ ಕಟ್ಟಡ ಬೇಕು ಎಂಬ ಬಿಸಿಸಿಐನ ಪರಿಕಲ್ಪನೆಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಿಂಗಹಳ್ಳಿಯಲ್ಲಿ ನಿರ್ಮಾಣಗೊಂಡಿದ್ದ ಸೆಂಟರ್ ಆಫ್ ಎಕ್ಸಲೆನ್ಸ್ ಕ್ರಿಕೆಟ್ ಅಕಾಡೆಮಿಯನ್ನು ಭಾನುವಾರ ದಿಢೀರ್ ಉದ್ಘಾಟನೆ ಮಾಡಲಾಗಿದೆ.
ಉದ್ಘಾಟನಾ ಸಮಾರಂಭ ಸರಳವಾಗಿ ನಡೆದಿದ್ದು, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಮೊದಲಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲೇ ನಿರ್ಮಾಣವಾಗಿರುವ ನೂತನ ಎನ್‌ಸಿಎ ಕೇಂದ್ರದ ಹೆಸರನ್ನು ಬದಲಾಯಿಸಲಾಗಿದ್ದು, “ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್’ ಎಂದು ಇಡಲಾಗಿದೆ. ಇಲ್ಲಿ ಕ್ರಿಕೆಟಿಗರಿಗಷ್ಟೇ ಅಲ್ಲ, ಇತರ ಕ್ರೀಡಾಪಟುಗಳ ತರಬೇತಿ, ಪುನಶ್ಚೇತನಕ್ಕೂ ಸೌಲಭ್ಯವಿದೆ.
ವಿಶ್ವದರ್ಜೆಯ ಕೇಂದ್ರ
ನೂತನ ಕೇಂದ್ರದಲ್ಲಿ ವಿಶ್ವದರ್ಜೆಯ ಅತ್ಯಾಧುನಿಕ ಮೂಲಸೌಕರ್ಯಗಳಿವೆ. ಇವು ಕ್ರಿಕೆಟರ್‌ಗಳ ಕೌಶಲ್ಯ ಅಭಿವೃದ್ಧಿಗೆ ಅಗತ್ಯ ವಾತಾವರಣ ಕಲ್ಪಿಸುವುದನ್ನು ನಿರೀಕ್ಷಿಸಲಾಗಿದೆ. ಇಲ್ಲಿ ಅಂತಾರಾಷ್ಟ್ರೀಯ ದರ್ಜೆಯ 3 ಕ್ರಿಕೆಟ್ ಮೈದಾನಗಳು, 45 ಅಭ್ಯಾಸದ ಅಂಕಣಗಳಿವೆ. ಇದರಲ್ಲಿ ಪ್ರಮುಖ ಮೈದಾನ 85 ಯಾರ್ಡ್ ಬೌಂಡರಿಯನ್ನು ಒಳಗೊಂಡಿದೆ. ಇದರ ಜತೆಗೆ ಒಳಾಂಗಣ ಕ್ರಿಕೆಟ್ ಪಿಚ್‌ಗಳು, ಒಲಿಂಪಿಕ್ ಗಾತ್ರದ ಈಜುಕೊಳ, ಅತ್ಯಾಧುನಿಕ ಜಿಮ್, 16,000 ಚದರ ಅಡಿಯ ಪುನಶ್ಚೇತನ ಕೇಂದ್ರ, ಕ್ರಿಕೆಟರ್‌ಗಳ ಅಭ್ಯಾಸ ಮತ್ತು ಕ್ರೀಡಾ ವಿಜ್ಞಾನಕ್ಕೆ ಸಂಬಂಧಿಸಿದ ಸೌಕರ್ಯಗಳನ್ನು ನೂತನ ಸೆಂಟರ್ ಆಫ್ ಎಕ್ಸಲೆನ್ಸ್ ಒಳಗೊಂಡಿದೆ ಎಂಬುದಾಗಿ ಬಿಸಿಸಿಐ ತಿಳಿಸಿದೆ.
ವಿಶೇಷ ಏನು?
ಈ ಬಹುದೊಡ್ಡ ಮೈದಾನದ ದೊಡ್ಡ ಪ್ರವೇಶ ದ್ವಾರವನ್ನು ದಾಟಿ ಮುಖ್ಯ ಕಟ್ಟಡ ಪ್ರವೇಶಿಸುತ್ತಿದ್ದಂತೆಯೇ ಹಾಲ್ ಆಫ್ ಫೇಮ್ ಇದೆ. ಅಂತಿಮ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಪಕ್ಕದಲ್ಲೇ ದೊಡ್ಡ ಕ್ರಿಕೆಟ್ ಮೈದಾನ ಕಣ್ಮನ ಸೆಳೆಯುತ್ತದೆ. 85 ಯಾರ್ಡ್ ಬೌಂಡರಿ ಇರುವ ವಿಶ್ವದರ್ಜೆ ಕ್ರೀಡಾಂಗಣ ಇದಾಗಿದ್ದು, ಮುಂಬೈ ಕೆಂಪು ಮಣ್ಣಿನಿಂದ ಸಿದ್ಧಗೊಳಿಸಿರುವ 13 ಪಿಚ್‌ಗಳು ಇಲ್ಲಿವೆ. ಹೊನಲು ಬೆಳಕಿನ ಕಂಬಗಳು, ಸೌಥ್ ಪೆವಿಲಿಯನ್ ಮತ್ತು ಪಂದ್ಯಗಳ ನೇರಪ್ರಸಾರ ಸೌಲಭ್ಯ ಕೇಂದ್ರ ಕೂಡ ಇದೆ. ಇದರ ಪಕ್ಕದಲ್ಲೇ ಬಿ ಮೈದಾನ ಕೂಡ ಇದ್ದು, ಇಲ್ಲಿ 75 ಯಾರ್ಡ್ ಬೌಂಡರಿ ಇದೆ. ಇದರಲ್ಲಿ ಮಂಡ್ಯದ ಕಪ್ಪುಮಣ್ಣು ಬಳಸಿ ಮಾಡಲಾಗಿರುವ 11 ಪಿಚ್‌ಗಳಿದ್ದು, ಪಕ್ಕದಲ್ಲಿರುವ ಮೂರನೇ ಮೈದಾನ (ಸಿ)ದಲ್ಲಿ ಒಡಿಶಾದ ಕಲಾಹಾಂಡಿಯಿಂದ ತರಿಸಿರುವ ಕಪ್ಪುಮಣ್ಣಿನಿಂದ ಸಿದ್ಧವಾದ 9 ಪಿಚ್‌ಗಳಿವೆ. ಈ ಮೂರು ಮೈದಾನಗಳಲ್ಲಿ ಮಳೆ ನೀರು ತ್ವರಿತವಾಗಿ ಹರಿದುಹೋಗಲು ಸಬ್‌ಸರ್ಫೇಸ್ ವ್ಯವಸ್ಥೆ ಕೂಡ ಮಾಡಲಾಗಿದೆ.
86 ಕ್ರಿಕೆಟ್ ಪಿಚ್!
ಈ ಕೇಂದ್ರ ಒಟ್ಟು 86 ಕ್ರಿಕೆಟ್ ಪಿಚ್‌ಗಳನ್ನು ಒಳಗೊಂಡಿದೆ. ಇದರಲ್ಲಿ 45 ಔಟ್‌ಡೋರ್ ಪಿಚ್‌ಗಳಾಗಿವೆ. ಮಂಡ್ಯ, ಮುಂಬಯಿ ಮತ್ತು ಕಾಲಾಹಾಂಡಿಯ ಮಣ್ಣನ್ನು ಬಳಸಲಾಗಿದೆ. ಪ್ರತೀ ಪಿಚ್ ನಡುವೆ ಲಂಡನ್‌ನಿಂದ ತರಿಸಲಾದ ನೆಟ್‌ಗಳನ್ನು ಅಳವಡಿಸಲಾಗಿದೆ. ನೆಟ್ಸ್ ಪಕ್ಕದಲ್ಲೇ ಫೀಲ್ಡಿಂಗ್ ಅಭ್ಯಾಸ ನಡೆಸುವ ವ್ಯವಸ್ಥೆ ಇದೆ. ಮೋಂಡೊ ಸಿಂಥೆಟಿಕ್ ಸಿಸ್ಟಮ್ ಮತ್ತು ಪ್ರಾಕೃತಿಕ ಹುಲ್ಲಿನಿಂದ ರೂಪಿಸಲಾದ 6 ಸಿಂಥೆಟಿಕ್ ಟ್ರ್ಯಾಕ್‌ಗಳಿವೆ. ಒಳಾಂಗಣ ಪ್ರ್ಯಾಕ್ಟೀಸ್ ವಿಭಾಗ ಕೂಡ ವಿಶ್ವದರ್ಜೆಯ ಸೌಲಭ್ಯಗಳನ್ನು ಒಳಗೊಂಡಿದೆ. ಇಲ್ಲಿ ಯುಕೆ ಮತ್ತು ಆಸ್ಟ್ರೇಲಿಯದ ಟಫ್ìಗಳನ್ನು ಹಾಕಲಾಗಿದೆ. 80 ಮೀಟರ್‌ಗಳಷ್ಟು ಮಾಮೂಲು ರನ್‌ಅಪ್ ಅವಕಾಶವೂ ಇದೆ.
ನೆಟ್ಸ್‌ಗಾಗಿ 45 ಪಿಚ್
ಮೈದಾನಗಳಾಚೆ ನೆಟ್ಸ್ ಅಭ್ಯಾಸಕ್ಕಾಗಿ 45 ಪಿಚ್‌ಗಳು ಇವೆ. ಜೊತೆಗೆ ಹೊನಲು ಬೆಳಕಿನ ವ್ಯವಸ್ಥೆ ಇದೆ. ಓಟದ ಅಭ್ಯಾಸಕ್ಕಾಗಿ ಟ್ರ್ಯಾಕ್ ಮತ್ತು ಫೀಲ್ಡಿಂಗ್ ಅಭ್ಯಾಸದ ಸೌಕರ್ಯಗಳು ಇವೆ. ಕ್ಯಾಮೆರಾಗಳ ಮೂಲಕ ಆಟಗಾರರ ಸಾಮರ್ಥ್ಯ ವಿಶ್ಲೇಷಿಸುವ ತಂತ್ರಜ್ಞಾನ ಇಲ್ಲಿ ಅಳವಡಿಸಲಾಗಿದೆ. 16 ಸಾವಿರ ಚದರಡಿ ಜಾಗದಲ್ಲಿ ನಿರ್ಮಿಸಿರುವ ದೊಡ್ಡ ಕಟ್ಟಡದಲ್ಲಿ ಸ್ಲೀಪಿಂಗ್ ಪಾಡ್‌ಗಳಿರುವ ಜಿಮ್ನಾಷಿಯಂ, ಅಥ್ಲೆಟಿಕ್ಸ್ ಟ್ರ್ಯಾಕ್, ಫಿಸಿಯೊಥೆರಪಿ ಕೇಂದ್ರ, ಕ್ರೀಡಾ ವಿಜ್ಞಾನ ಮತ್ತು ಔಷಧಿ ಪ್ರಯೋಗಾಲಯ, ಝಕುಜಿ, ಸೌನಾ ಮತ್ತು ಹಬೆಸ್ನಾನ, ಐಸ್ ಬಾತ್, 25 ಮೀಟರ್ಸ್ ಈಜುಕೊಳಗಳು ಇವೆ. ಇದಲ್ಲದೇ ಭವ್ಯವಾದ ಭೋಜನಶಾಲೆ, ಆಡಳಿತ ಕಚೇರಿಗಳು, ಸಭಾಭವನ, ತಂಗುವ ಕೋಣೆಗಳು ಕೂಡ ಇವೆ.
ಅಂತಿಮ ಹಂತದ ಕೆಲವು ಕಾಮಗಾರಿಗಳು ಭರದಿಂದ ನಡೆಯುತ್ತಿದ್ದು 2025ರ ಜನವರಿಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ.
2000ದಲ್ಲಿ ಆರಂಭ
ಕ್ರಿಕೆಟ್ ತರಬೇತಿ, ಮಾರ್ಗದರ್ಶನ ಮತ್ತು ಗಾಯ ಕ್ಕೀಡಾದ ಕ್ರಿಕೆಟರ್‌ಗಳ ಪುನ ಶ್ಚೇತನ ಉದ್ದೇಶದಿಂದ 24 ವರ್ಷ ಗಳ ಹಿಂದೆ, ಅಂದರೆ 2000ನೇ ಇಸವಿ ಯಲ್ಲಿ ಮಾಜಿ ಕ್ರಿಕೆಟರ್, ಬಿಸಿಸಿಐ ಮಾಜಿ ಅಧ್ಯಕ್ಷ ರಾಜ್‌ಸಿಂಗ್ ಡುಂಗರ್ ಪುರ್, ಬೆಂಗಳೂರಿನಲ್ಲಿ ಎನ್‌ಸಿಎ ಸ್ಥಾಪನೆ ಯಾಗಲು ಕಾರಣರಾದರು. ಬಿಸಿಸಿಐನ ಅಂಗಸಂಸ್ಥೆಯಾಗಿರುವ ಎನ್‌ಸಿಎಗೆ ಈಗ ಮಾಜಿ ಕ್ರಿಕೆಟರ್, ವಿವಿಎಸ್ ಲಕ್ಷ್ಮಣ್ ನಿರ್ದೇಶಕರಾಗಿದ್ದಾರೆ.
ಕ್ರಿಕೆಟ್ ಮಾತ್ರವಲ್ಲ, ಇತರ ಕ್ರೀಡಾಪಟುಗಳಿಗೂ ನೆರವು
ಬೆಂಗಳೂರಿನ ಈ ನೂತನ ಕ್ರಿಕೆಟ್ ಅಕಾಡೆಮಿ, ದೇಶದಲ್ಲಿ ಕ್ರಿಕೆಟ್ ಮತ್ತು ಕ್ರೀಡಾ ಕ್ರಾಂತಿಗೆ ನಾಂದಿ ಹಾಡುವ ಆಶಯವಿದೆ. ಏಕೆಂದರೆ ಇದು ಕ್ರೀಡಾ ಕೌಶಲಗಳ ಕೇಂದ್ರವಾಗಿರಲಿದ್ದು, ಇದರ ಜತೆಗೆ ದೇಶದಲ್ಲಿ ಇತರ ಕ್ರೀಡೆಗಳ ಬೆಳವಣಿಗೆಗೂ ಸಹಕಾರಿಯಾಗುವ ನಿರೀಕ್ಷೆಯಿದೆ. ಈಗ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯ್ ಶಾ ಹೇಳಿರುವಂತೆ, ಬಿಸಿಸಿಐ ಸದಾ ಭಾರತೀಯ ಕ್ರೀಡಾಪಟುಗಳು ಮತ್ತು ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ನೆರವಿಗೆ ನಿಲ್ಲಲಿದೆ. ಹೀಗಾಗಿ ಹೊಸ ಎನ್‌ಸಿಎ, ನೀರಜ್ ಚೋಪ್ರಾ ಅವರಂತಹ ಒಲಿಂಪಿಕ್ ಆ್ಯತ್ಲೀಟ್‌ಗಳಿಗೂ ಅಗತ್ಯ ಸಂದರ್ಭದಲ್ಲಿ ಸೌಲಭ್ಯಗಳನ್ನು ಒದಗಿಸುವ ನೆಲೆಯಲ್ಲಿ ಸಿದ್ಧಗೊಂಡಿದೆ.