
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾದ ರೋಹಿತ್ ಶರ್ಮಾ ಇದೀಗ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಐಪಿಎಲ್ 2025ನೇ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಅವರು ಇಂಪ್ಯಾಕ್ಟ್ ಸಬ್ಸ್ಟಿಟ್ಯೂಟ್ ಆಗಿ ಆಡುತ್ತಿದ್ದಾರೆ. ಕೇವಲ ಎರಡು ಆವೃತ್ತಿಗಳ ಹಿಂದೆ, ರೋಹಿತ್ ಅವರು ಮುಂಬೈ ಇಂಡಿಯನ್ಸ್ ನಾಯಕನಾಗಿದ್ದರು. ಹಾರ್ದಿಕ್ ಪಾಂಡ್ಯ ಇದೀಗ ಮುಂಬೈ ತಂಡದ ನಾಯಕರಾಗಿದ್ದಾರೆ. ಸೂರ್ಯಕುಮಾರ್ ಯಾದವ್ ಅವರನ್ನು ಉಪನಾಯಕನನ್ನಾಗಿ ಮಾಡಲಾಗಿದೆ. ಜಿಯೋಹಾಟ್‌ಸ್ಟಾರ್ ಜೊತೆಗೆ ಮಾತನಾಡಿರುವ ರೋಹಿತ್, ಕಳೆದ ಹಲವು ವರ್ಷಗಳಲ್ಲಿ ತಮ್ಮ ಪಾತ್ರ ಹೇಗೆ ವಿಕಸನಗೊಂಡಿದೆ ಎಂಬುದರ ಕುರಿತು ಮಾತನಾಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವು ಈ ಆವೃತ್ತಿಯಲ್ಲಿ ಮೂರು ಪಂದ್ಯಗಳನ್ನು ಆಡಿದ್ದು, ಕೇವಲ ಒಂದರಲ್ಲಿ ಮಾತ್ರ ಗೆದ್ದಿದೆ. ಈ ಹಿಂದೆಯೂ ಮುಂಬೈ ಮೊದಲ ಕೆಲವು ಪಂದ್ಯಗಳಲ್ಲಿ ಸೋಲು ಕಂಡರೂ ಮತ್ತೆ ಪುಟಿದೆದ್ದು ಕಪ್ ಗೆದ್ದಿರುವ ಉದಾಹರಣೆಗಳಿವೆ. ರೋಹಿತ್ ಶರ್ಮಾ ಅವರು ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ರೋಹಿತ್ ಶರ್ಮಾ ಅವರ ಪಾತ್ರ ಬದಲಾಗಿರಬಹುದು, ಆದರೆ ಅವರ ಮನಸ್ಥಿತಿ ಇನ್ನೂ ಒಂದೇ ಆಗಿರುತ್ತದೆ. ಅದು ತಮ್ಮ ತಂಡಕ್ಕಾಗಿ ಅತ್ಯುತ್ತಮವಾದದ್ದನ್ನು ಮಾಡುವುದು.
'ನಾನು ವೃತ್ತಿಜೀವನ ಆರಂಭಿಸಿದಾಗಿನಿಂದ, ಸಾಕಷ್ಟು ವಿಷಯಗಳು ಸ್ಪಷ್ಟವಾಗಿ ಬದಲಾಗಿವೆ. ಮೊದಲಿಗೆ ನಾನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ; ಈಗ, ಆರಂಭಿಕನಾಗಿ ಇನಿಂಗ್ಸ್ ತೆರೆಯುತ್ತಿದ್ದೇನೆ. ಆಗ ನಾನು ನಾಯಕನಾಗಿದ್ದೆ; ಈಗ, ನಾನಲ್ಲ. ನಮ್ಮ ಚಾಂಪಿಯನ್‌ಶಿಪ್ ವಿಜೇತ ತಂಡದಲ್ಲಿದ್ದ ಕೆಲವು ಸದಸ್ಯರು ಈಗ ಕೋಚಿಂಗ್ ಮಾಡುತ್ತಿದ್ದಾರೆ. ಆದ್ದರಿಂದ, ಪಾತ್ರಗಳು ಬದಲಾಗಿವೆ, ಬಹಳಷ್ಟು ಬದಲಾಗಿದೆ. ಆದರೆ, ಮನಸ್ಥಿತಿ ಹಾಗೆಯೇ ಉಳಿದಿದೆ' ಎಂದು ರೋಹಿತ್ ಜಿಯೋಹಾಟ್‌ಸ್ಟಾರ್‌ನಲ್ಲಿ ಹೇಳಿದರು.
'ಈ ತಂಡಕ್ಕಾಗಿ ನಾನು ಏನು ಮಾಡಬೇಕೆಂಬುದು ಬದಲಾಗಿಲ್ಲ. ಪಂದ್ಯಗಳನ್ನು ಗೆಲ್ಲುವುದು ಮತ್ತು ಟ್ರೋಫಿ ಗೆಲ್ಲುವುದು ಆದ್ಯತೆಯಾಗಿದೆ. ಮುಂಬೈ ಇಂಡಿಯನ್ಸ್ ಅದಕ್ಕೇ ಹೆಸರುವಾಸಿಯಾಗಿದೆ. ನಾವು ಕೆಲವು ಬಾರಿ ಟ್ರೋಫಿಗಳನ್ನು ಗೆದ್ದಿದ್ದೇವೆ ಮತ್ತು ಯಾರೂ ನಂಬಲಾಗದ ಸನ್ನಿವೇಶಗಳಿಂದ ಪಂದ್ಯಗಳನ್ನು ತಿರುಗಿಸಿದ್ದೇವೆ. ಎಂಐ ಮತ್ತು ಮುಂಬೈ ಎಂದರೆ ಅದೇ' ಎಂದು ತಿಳಿಸಿದರು.
'ಟ್ರೆಂಟ್ ಬೌಲ್ಟ್ ಅವರಂತಹ ಆಟಗಾರರು ಸಾಕಷ್ಟು ಅನುಭವ ಹೊಂದಿದ್ದಾರೆ ಮತ್ತು ಮುಂಬೈ ಇಂಡಿಯನ್ಸ್ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಇದ್ದಾರೆ. ಅವರಿಗೂ ಅನುಭವವಿದೆ. ವಿಲ್ ಜ್ಯಾಕ್ಸ್ ಮತ್ತು ರೀಸ್ ಟಾಪ್ಲಿಯಂತಹ ಆಟಗಾರರು ವೈವಿಧ್ಯತೆಯನ್ನು ತರುತ್ತಾರೆ. ಯುವ ಆಟಗಾರ ರಯಾನ್ ರಿಕಲ್ಟನ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಪ್ರತಿಯೊಬ್ಬ ಆಟಗಾರರು ತಂಡಕ್ಕೆ ವಿಭಿನ್ನ ಕೊಡುಗೆ ನೀಡುತ್ತಿದ್ದಾರೆ. ನೀವು ಅದನ್ನು ಒಂದು ಘಟಕವಾಗಿ ಒಟ್ಟುಗೂಡಿಸಿದಾಗ, ಅದು ದೊಡ್ಡ ಪರಿಣಾಮ ಬೀರುತ್ತದೆ. ನಮ್ಮಲ್ಲಿ ಹಲವಾರು ಯುವ ಭಾರತೀಯ ಆಟಗಾರರು ಉತ್ತಮ ಸಾಮರ್ಥ್ಯ ಹೊಂದಿದ್ದಾರೆ ಮತ್ತು ನಾನು ಅವರೊಂದಿಗೆ ಆಡಲು ಎದುರು ನೋಡುತ್ತಿದ್ದೇನೆ. ನನ್ನ ತಕ್ಷಣದ ಗುರಿ ಟಾಟಾ ಐಪಿಎಲ್ ಟ್ರೋಫಿಯನ್ನು ಗೆದ್ದು ಮುಂಬೈ ಇಂಡಿಯನ್ಸ್‌ಗೆ ವೈಭವವನ್ನು ಮರಳಿ ತರುವುದು' ಎಂದರು.
Advertisement