
ಐಪಿಎಲ್ 2025ನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕ ರಿಷಭ್ ಪಂತ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾವು ಆಡಿರುವ ಮೂರು ಪಂದ್ಯಗಳಲ್ಲಿಯೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿರುವ ಪಂತ್ ಅವರ ನಾಯಕತ್ವ ಕೂಡ ಅನೇಕರಿಂದ ಟೀಕೆಗೆ ಗುರಿಯಾಗಿದೆ. ಪಂತ್ ಸದ್ಯ ಈ ಆವೃತ್ತಿಯಲ್ಲಿ ಮೂರು ಪಂದ್ಯಗಳಿಂದ ಕೇವಲ 17 ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ, ಪಂತ್ ನಾಯಕತ್ವದಲ್ಲಿ LSG ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲು ಕಂಡಿದೆ. ಮಂಗಳವಾರ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಸೋಲಿನ ನಂತರ, LSG ಮಾಲೀಕ ಸಂಜೀವ್ ಗೋಯೆಂಕಾ ಮೈದಾನದಲ್ಲಿಯೇ ಪಂತ್ ಜೊತೆ ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ್ದು ಕಂಡುಬಂತು.
ಈ ಬಾರಿ ನಡೆದ ಮೆಗಾ ಹರಾಜಿನಲ್ಲಿ ಪಂತ್ ಅವರನ್ನು ಎಲ್‌ಎಸ್‌ಜಿ ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿತು. ಐಪಿಎಲ್ ಇತಿಹಾಸದಲ್ಲೇ ಇದು ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರನನ್ನಾಗಿ ಮಾಡಿದೆ. ಆದಾಗ್ಯೂ, ಭಾರತದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರು ಪಂತ್ ಅವರನ್ನು ಕುಗ್ಗಿಸಲು ದುಬಾರಿ ಮೊತ್ತವೇ ಕಾರಣ ಎಂದು ಭಾವಿಸುವುದಿಲ್ಲ.
'ರಿಷಭ್ ಪಂತ್ ಬಗ್ಗೆ ನನಗೆ ತಿಳಿದಿದೆ. ದುಬಾರಿ ಮೊತ್ತಕ್ಕೆ ಹರಾಜಾಗಿದ್ದೇ ಅವರ ಬೆಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ನಾನು ಭಾವಿಸುವುದಿಲ್ಲ. ಅವರು ಸದ್ಯ ಉತ್ತಮ ಫಾರ್ಮ್‌ನಲ್ಲಿಲ್ಲ. ಅವರು ಭಾರತೀಯ ವೈಟ್-ಬಾಲ್ ಸರ್ಕ್ಯೂಟ್‌ನಿಂದ ಹೊರಗಿದ್ದಾರೆ ಮತ್ತು ಈ ಟೂರ್ನಮೆಂಟ್‌ಗೆ ಫ್ರಾಂಚೈಸಿಯ ನಾಯಕನಾಗಿ ಬರುತ್ತಿರುವುದರಿಂದ, ಅವರ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿದ್ದವು. ಕಳೆದ ವರ್ಷ ಬಹಳಷ್ಟು ಸಂಭವಿಸಿತು ಮತ್ತು ಸ್ವಾಭಾವಿಕವಾಗಿ, ಈ ಆವೃತ್ತಿಯಲ್ಲಿ ಅವರಿಂದ ಬಹಳಷ್ಟು ನಿರೀಕ್ಷಿಸಲಾಗಿತ್ತು' ಎಂದು ಚಾವ್ಲಾ ಜಿಯೋಹಾಟ್‌ಸ್ಟಾರ್‌ನಲ್ಲಿ ಹೇಳಿದರು.
'ದುರದೃಷ್ಟವಶಾತ್, ಅವರ ತಂಡ ಮತ್ತು ಅವರ ವೈಯಕ್ತಿಕ ಫಾರ್ಮ್ ಎರಡೂ ಚೆನ್ನಾಗಿ ಆರಂಭವಾಗಿಲ್ಲ. ಇಂದು ಅವರು ಔಟ್ ಆದ ಬಾಲ್ ಅನ್ನು ಎಲ್ಲಿಗೆ ಬೇಕಾದರೂ ಹೊಡೆಯಬಹುದಿತ್ತು. ಆದರೆ, ಅವರು ಶಾರ್ಟ್ ಫೈನ್ ಲೆಗ್‌ನಲ್ಲಿ ಫೀಲ್ಡರ್ ಕೈಗೆ ನೀಡಿದರು. ಆ ನಂತರ ಅವರ ಪ್ರತಿಕ್ರಿಯೆಯು, ಅವರು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂಬುದು ಅವರಿಗೂ ತಿಳಿದಿದೆ ಎಂಬುದನ್ನು ಸೂಚಿಸುತ್ತದೆ. ಅಲ್ಲಿ ಅವರು ಅಂದುಕೊಂಡ ರೀತಿಯಲ್ಲಿ ಯಾವುದೂ ನಡೆಯುತ್ತಿಲ್ಲ' ಎಂದು ಅವರು ಹೇಳಿದರು.
ರಿಷಭ್ ಪಂತ್ ಅವರ ಡಿಫೆನ್ಸೀವ್ ಬ್ಯಾಟಿಂಗ್ ವಿಧಾನದ ಬಗ್ಗೆ ಪಿಯೂಷ್ ಚಾವ್ಲಾ ಮಾತನಾಡಿ, ಪಂತ್ ಬಾಲ್ ಅನ್ನು ನೇರವಾಗಿ ಡಿಫೆನ್ಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಶೈಲಿಯ ಆಟದ ಟಿ20 ಮತ್ತು ಏಕದಿನ ಕ್ರಿಕೆಟ್‌ಗೆ ಸೂಕ್ತವಲ್ಲ. ಯಶಸ್ಸಿಗೆ ಸಾಮಾನ್ಯವಾಗಿ ಹೆಚ್ಚು ಆಕ್ರಮಣಕಾರಿ ಮನಸ್ಥಿತಿ ಅಗತ್ಯವಿರುತ್ತದೆ ಎಂದು ಹೇಳಿದರು.
'ಟಿ 20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಬೌಲರ್ ಸಹ ನಿಮಗೆ ಒಂದು ರನ್ ನೀಡಲು ಸಂತೋಷಪಡುತ್ತಾರೆ. ಆದ್ದರಿಂದ ನೀವು ಬಾಲ್‌ಗೆ ಆ್ಯಂಗಲ್ ನೀಡಬೇಕಷ್ಟೆ. ಆಗ ನೀವು ಒಂದು ರನ್ ಪಡೆಯುವಿರಿ. ಆದ್ದರಿಂದ, ನೀವು ಸ್ಟ್ರೈಕ್‌ನಿಂದ ಹೊರಬಂದರೆ ಅದು ನಿಮ್ಮೊಂದಿಗೆ ಬ್ಯಾಟಿಂಗ್ ಮಾಡುತ್ತಿರುವವರಿಗೆ ನೆರವಾಗುತ್ತದೆ' ಎಂದರು.
ಮೂರು ಪಂದ್ಯಗಳಲ್ಲಿ ಎರಡು ಸೋಲುಗಳನ್ನು ಕಂಡಿರುವ ಎಲ್‌ಎಸ್‌ಜಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಎಲ್‌ಎಸ್‌ಜಿ ಶುಕ್ರವಾರ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಸೆಣಸಲಿದೆ.
Advertisement