ಹೈದರಾಬಾದ್: ಭಾನುವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡದ ವೇಗಿ ಇಶಾಂತ್ ಶರ್ಮಾ ಅವರಿಗೆ ಬಿಸಿಸಿಐ ಭಾರಿ ದಂಡ ವಿಧಿಸಿದೆ.
'ಇಶಾಂತ್ ಶರ್ಮಾ ಆರ್ಟಿಕಲ್ 2.2 ರ ಅಡಿಯಲ್ಲಿ ಲೆವೆಲ್ 1 ಅಪರಾಧ ಮಾಡಿದ್ದಾರೆ ಮತ್ತು ಮ್ಯಾಚ್ ರೆಫರಿಯ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯ ಶುಲ್ಕದ ಶೇ 25ರಷ್ಟು ದಂಡ ವಿಧಿಸಲಾಗಿದೆ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ' ಎಂದು ಬಿಸಿಸಿಐನ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಐಪಿಎಲ್ ನೀತಿ ಸಂಹಿತೆಯ ಪ್ರಕಾರ, ಆರ್ಟಿಕಲ್ 2.2ರ ಅಡಿಯಲ್ಲಿ ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ಗ್ರೌಂಡ್ ಉಪಕರಣಗಳು ಅಥವಾ ಫಿಕ್ಚರ್ಸ್ ಮತ್ತು ಫಿಟ್ಟಿಂಗ್‌ಗಳ ದುರುಪಯೋಗ ಪಡಿಸಿಕೊಂಡರೆ ದಂಡ ವಿಧಿಸಲಾಗುತ್ತದೆ.
ಉದಾಹರಣೆಗೆ ವಿಕೆಟ್‌ಗಳನ್ನು ಹೊಡೆಯುವುದು ಅಥವಾ ಒದೆಯುವುದು ಮತ್ತು ಉದ್ದೇಶಪೂರ್ವಕವಾಗಿ, ಅಜಾಗರೂಕತೆಯಿಂದ ಅಥವಾ ನಿರ್ಲಕ್ಷ್ಯದಿಂದ (ಎರಡೂ ಸಂದರ್ಭಗಳಲ್ಲಿ ಆಕಸ್ಮಿಕವಾಗಿದ್ದರೂ ಸಹ) ಜಾಹೀರಾತು ಫಲಕಗಳು, ಬೌಂಡರಿ ಬೇಲಿಗಳು, ಡ್ರೆಸ್ಸಿಂಗ್ ಕೋಣೆಯ ಬಾಗಿಲುಗಳು, ಕನ್ನಡಿ, ಕಿಟಕಿ ಮತ್ತು ಇತರ ಫಿಕ್ಚರ್ಸ್ ಮತ್ತು ಫಿಟ್ಟಿಂಗ್‌ಗಳಿಗೆ ಹಾನಿಯನ್ನುಂಟುಮಾಡುವ ಯಾವುದೇ ಕ್ರಮಗಳಿಗೆ ದಂಡ ವಿಧಿಸಲಾಗುತ್ತದೆ.
ಈಮಧ್ಯೆ, ಜಿಟಿ ತಂಡವು ಆತಿಥೇಯ ಎಸ್‌ಆರ್‌ಹೆಚ್ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಐಪಿಎಲ್ 2025ನೇ ಆವೃತ್ತಿಯ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಸರಣಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೊಹಮ್ಮದ್ ಸಿರಾಜ್ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಐಪಿಎಲ್‌ನಲ್ಲಿ ಅವರ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಆಗಿದೆ. ನಾಲ್ಕು ಓವರ್‌ಗಳಲ್ಲಿ 17 ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ.
ಆದಾಗ್ಯೂ, ಇಶಾಂತ್ ಶರ್ಮಾ ಜಿಟಿ ಪರವಾಗಿ ಅತ್ಯಂತ ದುಬಾರಿ ಬೌಲರ್ ಆದರು. ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 53 ರನ್‌ಗಳನ್ನು ಬಿಟ್ಟುಕೊಟ್ಟರು. ಯಾವುದೇ ವಿಕೆಟ್ ಪಡೆಯಲಿಲ್ಲ.
ಜಿಟಿ ನಾಯಕ ಶುಭಮನ್ ಗಿಲ್ 42 ಎಸೆತಗಳಲ್ಲಿ ಅಜೇಯ 60 ರನ್ ಗಳಿಸಿ 153 ರನ್ ಗಳ ಗುರಿಯನ್ನು ತಲುಪಲು ತಂಡಕ್ಕೆ ನೆರವಾದರು. ವಾಷಿಂಗ್ಟನ್ ಸುಂದರ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಅವರ ಇನಿಂಗ್ಸ್ ಜಿಟಿ ತಂಡವನ್ನು 20 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿಸಿತು.
Advertisement