ನವದೆಹಲಿ: ಐಪಿಎಲ್‌ನಲ್ಲಿ ತಮ್ಮ ಭವಿಷ್ಯದ ಬಗ್ಗೆ ಹೆಚ್ಚುತ್ತಿರುವ ಟೀಕೆಗಳಿಗೆ ಉತ್ತರಿಸಿರುವ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ, ತಮ್ಮ ವೃತ್ತಿಜೀವನಕ್ಕೆ ತೆರೆ ಎಳೆಯುವ ನಿರ್ಧಾರವು ನನ್ನದಲ್ಲ. ಬದಲಿಗೆ ಉನ್ನತ ಮಟ್ಟದ ಕ್ರಿಕೆಟ್‌ನ ಬೇಡಿಕೆಗಳಿಗೆ ತಮ್ಮ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಈ ನಿರ್ಧಾರ ತೆಗೆದುಕೊಳ್ಳಲು '10 ತಿಂಗಳು' ಸಮಯವಿದೆ ಎಂದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುತ್ತಿರುವ ಧೋನಿ ಐಪಿಎಲ್ 2025ನೇ ಆವೃತ್ತಿಯಲ್ಲಿ ಸಾಮಾನ್ಯವಾಗಿ ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸ್ಟಂಪ್ಸ್ ಹಿಂದೆ ಪ್ರಭಾವಶಾಲಿಯಾಗಿದ್ದರೂ, ಉತ್ತಮ ಬ್ಯಾಟಿಂಗ್ ಪ್ರದರ್ಶನ ಮೂಡಿಬಂದಿಲ್ಲ.
ಸದ್ಯ ತಾವು ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ 76 ರನ್ ಗಳಿಸಿದ್ದು, ಅವರ ಸಮಯಪ್ರಜ್ಞೆ ಮತ್ತು ನಿಷ್ಪರಿಣಾಮಕಾರಿತ್ವದ ಬಗ್ಗೆ ಹಲವಾರು ಟೀಕೆಗಳು ಕೇಳಿಬಂದಿದ್ದು, ಧೋನಿ ನಿವೃತ್ತಿ ಪಡೆಯುವುದೇ ಸೂಕ್ತ ಎಂಬ ಮಾತುಗಳು ಕೇಳಿಬರುತ್ತಿವೆ.
'ನಾನಿನ್ನೂ ಐಪಿಎಲ್ ಆಡುತ್ತಿದ್ದೇನೆ. ನನಗೆ ಈಗ 43 ವರ್ಷ ಮತ್ತು ಈ ಐಪಿಎಲ್ ಆವೃತ್ತಿಯ ಅಂತ್ಯದ ವೇಳೆಗೆ ನನಗೆ 44 ವರ್ಷ ವಯಸ್ಸಾಗುತ್ತದೆ. ಆದ್ದರಿಂದ, ನಾನಿನ್ನೂ ಆಡಬೇಕೆ ಬೇಡವೇ ಎಂದು ನಿರ್ಧರಿಸಲು ನನಗೆ 10 ತಿಂಗಳು ಕಾಲಾವಕಾಶವಿದೆ' ಎಂದು ಧೋನಿ ಇತ್ತೀಚೆಗೆ ಉದ್ಯಮಿ ರಾಜ್ ಶಮಾನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ.
'ನಾನು ಆಡಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವುದು ನಾನಲ್ಲ. ಏಕೆಂದರೆ, ನಾನು ಆಡಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವುದು ನನ್ನ ದೇಹ. ಮೈದಾನದಲ್ಲಿ ತನ್ನ ಸಾಧನೆಗಳಿಂದ ತೃಪ್ತನಾಗಿದ್ದೇನೆ' ಎಂದು ಸಿಎಸ್‌ಕೆ ತಂಡವನ್ನು ಐದು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿರುವ ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ನಾಯಕ ಹೇಳಿದ್ದಾರೆ.
'ನಾನು ಸಂತೋಷವಾಗಿದ್ದೇನೆಯೇ ಅಥವಾ ಅತೃಪ್ತಿ ಹೊಂದಿದ್ದೇನೆಯೇ ಎಂಬುದು ಮುಖ್ಯವಲ್ಲ. ಏನೇ ನಡೆದಿದ್ದರೂ ಅದು ಈಗಾಗಲೇ ಸಂಭವಿಸಿದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅದೆಲ್ಲವನ್ನೂ ಸ್ವೀಕರಿಸುವುದರ ಮೇಲೆ ನಿಂತಿದೆ. ಈಗ ಏನೇ ನಡೆದರೂ ನನ್ನ ಅಂತರರಾಷ್ಟ್ರೀಯ ರನ್‌ಗಳಿಗೆ ಒಂದು ರನ್ ಸೇರಿಸಲು ನನಗೆ ಸಾಧ್ಯವಾಗುವುದಿಲ್ಲ ಮತ್ತು ಯಾರೂ ಅವುಗಳನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ' ಎಂದು ಅವರು ಹೇಳಿದರು.
ಧೋನಿ ಯಾವಾಗಲೂ ವರ್ತಮಾನದ ಬಗ್ಗೆ ಚಿಂತಿಸುತ್ತಾರೆ. ಆದರೆ, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ ಅವರಂತಹ ದಂತಕಥೆಗಳು ಮತ್ತೊಮ್ಮೆ ಒಂದೇ ತಂಡದಲ್ಲಿ ಆಡುವುದನ್ನು ನೋಡುವ ಬಯಕೆಯನ್ನು ಬಹಿರಂಗಪಡಿಸಿದರು.
'ನಾನು ಭಾರತೀಯ ಆಟಗಾರರಿಗೆ ಅಂಟಿಕೊಳ್ಳುತ್ತೇನೆ. ವೀರು ಪಾ ಇನಿಂಗ್ಸ್ ಆರಂಭಿಸುತ್ತಾರೆ, ಸಚಿನ್, ದಾದಾ ಮತ್ತು ಈಗ ನೀವು ಎಲ್ಲರೂ ತಮ್ಮ ಉತ್ತುಂಗದಲ್ಲಿದ್ದಾರೆ ಎಂದು ಊಹಿಸಿಕೊಳ್ಳಿ. ಆಗ ಅವರಿಗಿಂತ ಉತ್ತಮರು ಯಾರೂ ಇರಲು ಸಾಧ್ಯವಿಲ್ಲ ಎಂಬ ಭಾವನೆ ನಿಮಗೆ ಬರುತ್ತದೆ' ಎಂದರು.
'ಸಾರ್ವಕಾಲಿಕ ಅತ್ಯುತ್ತಮ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡುವುದು ಕಷ್ಟ. ಏಕೆಂದರೆ ಅನೇಕ ಅಸಾಧಾರಣ ಆಟಗಾರರು ಇದ್ದಾರೆ. ಯುವರಾಜ್ ಸಿಂಗ್ ಅವರಂತಹ ಆಟಗಾರ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವುದನ್ನು ನೋಡಿದಾಗ, ಅವರನ್ನು ಮಾತ್ರ ನೋಡಬೇಕೆಂಬ ಭಾವನೆ ಉಂಟಾಗುತ್ತದೆ. ಅಂತಿಮವಾಗಿ, ಈ ಆಟಗಾರರು ಭಾರತೀಯ ಕ್ರಿಕೆಟ್‌ಗೆ ನೀಡಿದ ಅದ್ಭುತ ಕೊಡುಗೆಗಳನ್ನು ಶ್ಲಾಘಿಸಬೇಕಾಗಿದೆ' ಎಂದು ಅವರು ಹೇಳಿದರು.
Advertisement