
ಮುಂಬೈ: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವುದು ಕೇವಲ 'ಕಾಕತಾಳೀಯ' ಎಂದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್, ವೇಗಿಯ ಬೌಲಿಂಗ್ 'ಅಸಾಧಾರಣ ಮತ್ತು ನಂಬಲಸಾಧ್ಯ' ಎಂದಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಗಳಲ್ಲಿ ಬುಮ್ರಾ ಮೂರು ಪಂದ್ಯಗಳನ್ನು ಮಾತ್ರ ಆಡಿದರು. ಈ ಸರಣಿಯಲ್ಲಿ ಭಾರತವು 2-2 ಡ್ರಾ ಸಾಧಿಸಿತು.
ಭಾರತ ಗೆದ್ದ ಎರಡು ಪಂದ್ಯಗಳಲ್ಲಿ ಬುಮ್ರಾ ಆಡಿರಲಿಲ್ಲ. ಏಕೆಂದರೆ, ಕೆಲಸದ ಹೊರೆ ನಿರ್ವಹಣೆಯ ಭಾಗವಾಗಿ ಅವರನ್ನು ಮೂರು ಪಂದ್ಯಗಳಲ್ಲಷ್ಟೇ ಆಡಿಸುವುದಾಗಿ ಮೊದಲೇ ಟೀಂ ಇಂಡಿಯಾ ಘೋಷಿಸಿತ್ತು.
ಬುಮ್ರಾ ಆಡಿದ ಮೂರು ಟೆಸ್ಟ್‌ಗಳಲ್ಲಿ ಒಟ್ಟು 14 ವಿಕೆಟ್‌ಗಳನ್ನು ಪಡೆದಿದ್ದಾರೆ ಎಂಬುದನ್ನು ಎತ್ತಿ ತೋರಿಸಿದ ಸಚಿನ್, ಬುಮ್ರಾ ಅನುಪಸ್ಥಿತಿಯಲ್ಲಿ ಬರ್ಮಿಂಗ್ಹ್ಯಾಮ್ ಮತ್ತು ಓವಲ್‌ನಲ್ಲಿ ಭಾರತ ಜಯಗಳಿಸಿರುವುದು ಆಕಸ್ಮಿಕ ಎಂದು ಹೇಳಿದ್ದಾರೆ.
'ಬುಮ್ರಾ ಸರಣಿಯನ್ನು ನಿಜವಾಗಿಯೂ ಉತ್ತಮವಾಗಿ ಪ್ರಾರಂಭಿಸಿದರು. ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದರು. ಅವರು ಎರಡನೇ ಟೆಸ್ಟ್ ಆಡಲಿಲ್ಲ, ಆದರೆ, ಮೂರನೇ ಮತ್ತು ನಾಲ್ಕನೇ ಟೆಸ್ಟ್‌ನಲ್ಲಿ ಆಡಿದರು. ಮತ್ತೆ, ಆ ಎರಡು ಟೆಸ್ಟ್‌ಗಳಲ್ಲಿ ಒಂದರಲ್ಲಿ ಅವರು ಐದು ವಿಕೆಟ್‌ಗಳನ್ನು ಪಡೆದರು' ಎಂದು ಸಚಿನ್ 'ರೆಡ್ಡಿಟ್' ನಲ್ಲಿ ಇಂಗ್ಲೆಂಡ್-ಭಾರತ ಸರಣಿಯ ವಿಡಿಯೋ ವಿಶ್ಲೇಷಣೆಯಲ್ಲಿ ಹೇಳಿದರು.
'ಅವರು ಆಡಿದ ಮೂರು ಟೆಸ್ಟ್‌ಗಳಲ್ಲಿ, ಅವರು ಎರಡು ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಜನರು ಹಲವಾರು ವಿಷಯಗಳನ್ನು ಚರ್ಚಿಸುತ್ತಿದ್ದಾರೆಂದು ನನಗೆ ತಿಳಿದಿದೆ. ಅವರು ಆಡದ ಆ ಟೆಸ್ಟ್‌ಗಳಲ್ಲಿ ನಾವು ಗೆದ್ದಿದ್ದೇವೆ. ನನಗೆ, ಅದು ಕೇವಲ ಕಾಕತಾಳೀಯ ಎನಿಸುತ್ತದೆ. ಬುಮ್ರಾ ಅವರ ಬೌಲಿಂಗ್ ಗುಣಮಟ್ಟ ಅಸಾಧಾರಣವಾಗಿದೆ. ಅವರು ಇಲ್ಲಿಯವರೆಗೆ ಮಾಡಿರುವುದು ನಂಬಲಸಾಧ್ಯ. ಅವರು ಯಾವುದೇ ಸಂದೇಹವಿಲ್ಲದೆ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಯಾರೇ ಬಂದರೂ ನಾನು ಬುಮ್ರಾ ಅವರನ್ನು ಅಗ್ರಸ್ಥಾನದಲ್ಲಿ ಇಡುತ್ತೇನೆ' ಎಂದು ಅವರು ಹೇಳಿದರು.
ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಉತ್ತಮ ಪ್ರದರ್ಶನ ನೀಡಿ ಒಟ್ಟು 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐದು ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 185.3 ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಆದಾಗ್ಯೂ, ಬುಮ್ರಾ 48 ಟೆಸ್ಟ್‌ಗಳಲ್ಲಿ 219 ವಿಕೆಟ್‌ಗಳನ್ನು ಗಳಿಸಿದ್ದರೆ, ಸಿರಾಜ್ 41 ಪಂದ್ಯಗಳಲ್ಲಿ 123 ವಿಕೆಟ್‌ಗಳನ್ನು ಪಡೆದಿದ್ದಾರೆ.
ತಂಡದ ಪರವಾಗಿ ನಿರ್ಣಾಯಕ ಕೊಡುಗೆಗಳನ್ನು ನೀಡಿದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಸಚಿನ್ ಹೊಗಳಿದರು.
'ಅವರು ಆಡಿದಾಗಲೆಲ್ಲಾ ತಂಡಕ್ಕೆ ಕೊಡುಗೆ ನೀಡಿದ್ದಾರೆ. ನೀವು ಎರಡನೇ ಟೆಸ್ಟ್ ಪಂದ್ಯವನ್ನು ನೋಡಿದರೂ ಸಹ, ನಾಲ್ಕನೇ ಇನಿಂಗ್ಸ್‌ನಲ್ಲಿ ಅವರು ಐದನೇ ದಿನದ ಊಟದ ವಿರಾಮಕ್ಕೂ ಸ್ವಲ್ಪ ಮೊದಲು ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡಿದರು. ನನಗೆ, ಅದೊಂದು ಮಹತ್ವದ ತಿರುವು' ಎಂದು ಹೇಳಿದರು.
'ಕೊನೆಯ ಟೆಸ್ಟ್‌ನಲ್ಲಿ, ಹಿಟ್ ಔಟ್ ಆಗುವ ಸಮಯ ಬಂದಾಗ, ಅವರು 53 ರನ್‌ಗಳನ್ನು ಗಳಿಸಿದರು. ಅವರು ಅದ್ಭುತವಾಗಿ ವೇಗವನ್ನು ಹೆಚ್ಚಿಸಿದರು. ನಾಲ್ಕನೇ ಟೆಸ್ಟ್‌ನಲ್ಲಿ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಂತು ಆಡಿದರು ಮತ್ತು ಅಗತ್ಯವಿರುವ ಕಡೆಗಳಲ್ಲಿ ಉತ್ತಮವಾಗಿ ಬಾರಿಸಿದರು. ಐದನೇ ಟೆಸ್ಟ್‌ನಲ್ಲಿಯೂ ಅವರು ಅದನ್ನು ಮಾಡಿದರು. ಚೆನ್ನಾಗಿ ಮಾಡಿದ್ದೀರಿ, ವಾಶಿ. ನಾನು ಅದನ್ನು ನಿಜವಾಗಿಯೂ ಆನಂದಿಸಿದೆ' ಎಂದು ಅವರು ಹೇಳಿದರು.
ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ನೀಡಿದ ಡ್ರಾವನ್ನು ಭಾರತ ನಿರಾಕರಿಸಿದ ನಂತರ ಉಂಟಾದ ಉದ್ವಿಗ್ನ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿ, 'ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್‌ಗೆ ಶತಕ ಗಳಿಸುವ ಎಲ್ಲ ಹಕ್ಕಿದೆ ಮತ್ತು ಡ್ರಾ ಮಾತ್ರ ಸಂಭವನೀಯ ಫಲಿತಾಂಶವಾಗಿದ್ದರೂ, ಮುಂದುವರಿಯುವ ಭಾರತದ ನಿರ್ಧಾರವು ಸಂಪೂರ್ಣವಾಗಿ 'ಸರಿಯಾಗಿದೆ' ಎಂದು ಸಚಿನ್ ತಿಳಿಸಿದರು.
ಬೌಲರ್‌ಗಳಿಗೆ ವಿಶ್ರಾಂತಿ ನೀಡಲು ಬೇಗನೇ ಫಿನಿಶ್ ನೀಡಲು ಪ್ರಯತ್ನಿಸಿದ್ದೇನೆ ಎಂಬ ಸ್ಟೋಕ್ಸ್‌ನ ವಿವರಣೆಯನ್ನು ಸಚಿನ್ ತಿರಸ್ಕರಿಸಿದರು. ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್‌ಗಳು ಏಕೆ ಫ್ರೆಶ್ ಆಗಿರಬೇಕು?. ಇದಕ್ಕೆ ನಿಮ್ಮ ಬಳಿ ಉತ್ತರವಿದೆಯೇ? ಉತ್ತರವಿಲ್ಲ. ನಾನು ಸಂಪೂರ್ಣವಾಗಿ ಭಾರತ ತಂಡದೊಂದಿಗಿದ್ದೇನೆ. ಅದು ಗೌತಮ್ ಗಂಭೀರ್ ಆಗಿರಲಿ ಅಥವಾ ಶುಭಮನ್ ಗಿಲ್ ಆಗಿರಲಿ ಅಥವಾ ಜಡೇಜಾ ಮತ್ತು ವಾಷಿಂಗ್ಟನ್ ಆಗಿರಲಿ. ಅವರ ನಿರ್ಧರದ ಜೊತೆಗೆ ನಾನಿದ್ದೇನೆ' ಎಂದರು.
Advertisement