
ಟೀಂ ಇಂಡಿಯಾದ ಜೆರ್ಸಿಯಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿ ಎಂಬುವುದು ಸಾವಿರಾರು ಅಭಿಮಾನಿಗಳ ಇಚ್ಛೆ. ಇತ್ತೀಚೆಗೆ ಕೊಹ್ಲಿ ಲಂಡನ್‌ನಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪರ ಕೊನೆಯ ಬಾರಿಗೆ ಆಡಿದ್ದ ಕೊಹ್ಲಿ, ಟೆಸ್ಟ್ ಕ್ರಿಕೆಟ್ ಮತ್ತು ಟಿ20ಐಗಳಿಂದ ನಿವೃತ್ತಿ ಹೊಂದಿದ್ದರೂ, ಏಕದಿನ ಪಂದ್ಯಗಳಲ್ಲಿ ತಂಡದ ಸಕ್ರಿಯ ಕ್ರಿಕೆಟಿಗರಾಗಿದ್ದಾರೆ.
ಭಾರತ ಮೂಲದ ಉದ್ಯಮಿ Shassh ಹಂಚಿಕೊಂಡ ಚಿತ್ರದಲ್ಲಿ, ಕೊಹ್ಲಿ ಗಾಢ ನೀಲಿ ಬಣ್ಣದ ಜಾಗರ್‌ನೊಂದಿಗೆ ತಿಳಿ ಬೂದು ಬಣ್ಣದ ಟಿ-ಶರ್ಟ್ ಮತ್ತು ಅದರ ಮೇಲೆ ಗಾಢ ಬೂದು ಬಣ್ಣದ ಜಿಪ್-ಅಪ್ ಹೂಡಿ ಧರಿಸಿದ್ದಾರೆ. ಆದಾರೆ, ಯಾವಾಗಲೂ ಕಪ್ಪು ಬಣ್ಣದಲ್ಲಿರುತ್ತಿದ್ದ ಕೊಹ್ಲಿ ಅವರ ಗಡ್ಡ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.
'ಕಿಂಗ್ ಕೊಹ್ಲಿ ಜೊತೆ ಇರುವಾಗ ಶೀರ್ಷಿಕೆ ಅಗತ್ಯವಿಲ್ಲ' ಶಶ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಈ ಫೋಟೊದಲ್ಲಿ ಕೊಹ್ಲಿ ಅವರ ಗಡ್ಡ ಬಹುತೇಕ ಬಿಳಿ ಕೂದಲುಗಳಿಂದ ತುಂಬಿವೆ. ಕೊಹ್ಲಿ ಇತ್ತೀಚೆಗಷ್ಟೇ ತಾವು ನಾಲ್ಕು ದಿನಗಳಿಗೊಮ್ಮೆ ತಮ್ಮ ಗಡ್ಡಕ್ಕೆ ಬಣ್ಣ ಬಳಿಯುವುದಾಗಿ ತಿಳಿಸಿದ ನಂತರ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ YouWeCan ಫೌಂಡೇಶನ್ ವತಿಯಿಂದ ಲಂಡನ್‌ನಲ್ಲಿ ನಡೆದ ದತ್ತಿ ಕಾರ್ಯಕ್ರಮದಲ್ಲಿ, ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ಸಹ ಆಟಗಾರ ಕ್ರಿಸ್ ಗೇಲ್ ಸೇರಿದಂತೆ ಇತರ ಕೆಲವು ಪ್ರಮುಖರೊಂದಿಗೆ ವೇದಿಕೆ ಹಂಚಿಕೊಂಡರು.
'ನಾನು ಎರಡು ದಿನಗಳ ಹಿಂದೆಯಷ್ಟೇ ನನ್ನ ಗಡ್ಡಕ್ಕೆ ಬಣ್ಣ ಬಳಿದಿದ್ದೆ. ಪ್ರತಿ ನಾಲ್ಕು ದಿನಗಳಿಗೊಮ್ಮೆ ನಿಮ್ಮ ಗಡ್ಡಕ್ಕೆ ಬಣ್ಣ ಬಳಿಯುವ ಸಮಯ ಬಂದಿದೆ' ಎಂದು ಕೊಹ್ಲಿ ಹೇಳಿರುವುದಾಗಿ ವರದಿಯಾಗಿತ್ತು.
ಈ ವಾರದ ಆರಂಭದಲ್ಲಿ ಕೊನೆಗೊಂಡ ಇಂಗ್ಲೆಂಡ್ ಟೆಸ್ಟ್ ಸರಣಿಯ ನಂತರ, ಭಾರತ ತಂಡವು ಆಗಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಟಿ20ಐ ಮತ್ತು ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಬೇಕಿತ್ತು. ಆದರೆ, ಅಂತರರಾಷ್ಟ್ರೀಯ ಕ್ರಿಕೆಟ್ ಬದ್ಧತೆಗಳು ಮತ್ತು ಎರಡೂ ತಂಡಗಳ ವೇಳಾಪಟ್ಟಿಯನ್ನು ಗಣನೆಗೆ ತೆಗೆದುಕೊಂಡು ಬಿಸಿಸಿಐ ಸರಣಿಯನ್ನು 2026ರ ಸೆಪ್ಟೆಂಬರ್‌ಗೆ ಮುಂದೂಡಿದೆ.
ಆ ಸರಣಿ ನಡೆದಿದ್ದರೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಕಾಣಿಸಿಕೊಳ್ಳುತ್ತಿದ್ದರು.
ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆಗಸ್ಟ್‌ನಲ್ಲಿ ಟಿ20 ಮತ್ತು ಏಕದಿನ ಸರಣಿಯ ಕುರಿತು ಶ್ರೀಲಂಕಾದಿಂದ ಬಿಸಿಸಿಐಗೆ ಪ್ರಸ್ತಾಪ ಬಂದಿದೆ ಎಂಬ ವರದಿಗಳಿದ್ದವು. ಆದರೆ, ಶ್ರೀಲಂಕಾದಲ್ಲಿ ಸರಣಿ ನಡೆಯುತ್ತಿಲ್ಲ ಎಂದು ವರದಿಯಾಗಿದೆ.
Advertisement