'ಟೀಂ ಇಂಡಿಯಾ ಕೋಚ್ ಆಗಿದ್ದಾಗ ತಾವು ತರಬೇತಿ ನೀಡಿದ ಅತ್ಯುತ್ತಮ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ': ರವಿ ಶಾಸ್ತ್ರಿ

2017 ರಿಂದ 2021 ರವರೆಗೆ ತರಬೇತುದಾರರಾಗಿದ್ದ ಅವಧಿಯಲ್ಲಿ ಶಾಸ್ತ್ರಿಯವರೊಂದಿಗೆ ವಿರಾಟ್ ಕೊಹ್ಲಿ ಉತ್ತಮ ಒಡನಾಟ ಹೊಂದಿದ್ದರು.
Ravi Shastri - Virat Kohli
ರವಿ ಶಾಸ್ತ್ರಿ - ವಿರಾಟ್ ಕೊಹ್ಲಿ
Updated on

ಲಂಡನ್: ಟೀಂ ಇಂಡಿಯಾದ ಕೋಚ್ ಆಗಿದ್ದ ಅವಧಿಯಲ್ಲಿ ತಾವು ತರಬೇತಿ ನೀಡಿದ ಅತ್ಯುತ್ತಮ ಆಟಗಾರ ವಿರಾಟ್ ಕೊಹ್ಲಿ ಎಂದಿರುವ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಮೈದಾನದಲ್ಲಿ ಕೊಹ್ಲಿ ಅವರ ಪ್ರಾಬಲ್ಯ, ಅವರ ನಾಯಕತ್ವ ಮತ್ತು ಕ್ರೀಡಾ ಮನೋಭಾವವನ್ನು ಉಳಿಸಿಕೊಂಡು ತೀವ್ರತೆಯಿಂದ ಮತ್ತು ನ್ಯಾಯಯುತವಾಗಿ ಆಡುವ ಅವರ ಸಾಮರ್ಥ್ಯ ಉತ್ತಮವಾಗಿತ್ತು ಎಂದು ಶ್ಲಾಘಿಸಿದ್ದಾರೆ.

2017 ರಿಂದ 2021 ರವರೆಗೆ ತರಬೇತುದಾರರಾಗಿದ್ದ ಅವಧಿಯಲ್ಲಿ ಶಾಸ್ತ್ರಿಯವರೊಂದಿಗೆ ವಿರಾಟ್ ಕೊಹ್ಲಿ ಉತ್ತಮ ಒಡನಾಟ ಹೊಂದಿದ್ದರು. ಸ್ಕೈ ಸ್ಪೋರ್ಟ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿನ ವಿಡಿಯೋದಲ್ಲಿ ಮಾತನಾಡಿರುವ ಶಾಸ್ತ್ರಿ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ಸೂಪರ್‌ಸ್ಟಾರ್ ಆಡಿದ ಕೆಲವು ಅದ್ಭುತ ಇನಿಂಗ್ಸ್‌ಗಳ ಬಗ್ಗೆ ವಿಸ್ಮಯ ವ್ಯಕ್ತಪಡಿಸಿದರು.

'ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ವಿರಾಟ್ ಕೊಹ್ಲಿ ಅಸಾಧಾರಣ ಬ್ಯಾಟ್ಸ್‌ಮನ್ ಆಗಿದ್ದರು. ಏಕೆಂದರೆ, ಆ ಐದು ವರ್ಷಗಳಲ್ಲಿ ಟೆಸ್ಟ್ (ರೆಡ್-ಬಾಲ್) ಕ್ರಿಕೆಟ್‌ನಲ್ಲಿ ಭಾರತ ನಂ. 1 ಸ್ಥಾನದಲ್ಲಿತ್ತು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಕಠಿಣ ಪರಿಸ್ಥಿತಿಗಳಲ್ಲಿ ಕೊಹ್ಲಿ ಆಡಿದ ಇನಿಂಗ್ಸ್‌ಗಳು ಗಮನಾರ್ಹವಾಗಿದ್ದವು' ಎಂದು ಹೇಳಿದರು.

ಎಂಎಸ್ ಧೋನಿ ನಿವೃತ್ತರಾದ ನಂತರ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕರಾದರು.

'ಭಾರತದ ಮುಖ್ಯ ಕೋಚ್ ಆಗಿ ನಾನು ಅಧಿಕಾರ ವಹಿಸಿಕೊಂಡ ನಂತರ ಮತ್ತು ಎಂಎಸ್ ಧೋನಿ ಅವರ ಅಧಿಕಾರಾವಧಿ ಮುಗಿದ ನಂತರ, ವಿರಾಟ್ ಕೊಹ್ಲಿ ನಾಯಕನಾಗಿ ಎದ್ದು ಕಾಣುತ್ತಿದ್ದರು. ಕೊಹ್ಲಿ ಅವರ ಅತ್ಯುತ್ತಮ ಬ್ಯಾಟಿಂಗ್ ಕೌಶಲ್ಯ, ಆಕ್ರಮಣಕಾರಿ ಆದರೆ ನ್ಯಾಯಯುತ ಆಟದ ಶೈಲಿ ಮತ್ತು ಪಂದ್ಯವನ್ನು ಗೆಲ್ಲುವ ಮತ್ತು ಮುಂದಕ್ಕೆ ಕೊಂಡೊಯ್ಯುವ ಬಲವಾದ ಬಯಕೆ ಅದ್ಭುತವಾಗಿತ್ತು' ಎಂದರು.

ಮುಖ್ಯ ತರಬೇತುದಾರರಾಗಿ ತಮ್ಮ ವಿಷಾದದ ಬಗ್ಗೆ ಮಾತನಾಡಿದ ಶಾಸ್ತ್ರಿ, 'ಯಾವುದೇ ವಿಷಾದವಿಲ್ಲದಿದ್ದರೂ, ತಂಡವು 'ಸ್ವಲ್ಪ ದುರದೃಷ್ಟಕರ'ವಾಗಿತ್ತು. ನಾವು ಐಸಿಸಿ ಟ್ರೋಫಿಯನ್ನು ಗೆಲ್ಲಬೇಕಿತ್ತು. ಆ ಸಮಯದಲ್ಲಿ, ನಾವು ಉತ್ತಮ ತಂಡವನ್ನು ಹೊಂದಿದ್ದೆವು. ಆದರೆ, ನಾವು ಕೆಲವು ಉತ್ತಮ ಕ್ರಿಕೆಟ್ ಆಡಿದ್ದೇವೆ ಎಂದು ಹೇಳಿದರು.

ಕೊಹ್ಲಿ-ಶಾಸ್ತ್ರಿ ನೇತೃತ್ವದಲ್ಲಿ, ಭಾರತವು 2019ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಮುಕ್ತಾಯ ಕಂಡಿತು ಮತ್ತು 2019-21ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಫೈನಲ್‌ನಲ್ಲಿ ಸೋತು ರನ್ನರ್-ಅಪ್ ಸ್ಥಾನ ಪಡೆಯಿತು.

2016-19 ರ ಅವಧಿಯಲ್ಲಿ ವಿರಾಟ್ 164 ಪಂದ್ಯಗಳು ಮತ್ತು 186 ಇನಿಂಗ್ಸ್‌ಗಳಲ್ಲಿ 71.16ರ ಸರಾಸರಿಯಲ್ಲಿ 10,603 ರನ್‌ಗಳನ್ನು ಗಳಿಸಿದ್ದರು. ಇದರಲ್ಲಿ 36 ಶತಕಗಳು ಮತ್ತು 46 ಅರ್ಧಶತಕಗಳು ಸೇರಿವೆ ಮತ್ತು 254* ಅವರ ಅತ್ಯುತ್ತಮ ಸ್ಕೋರ್ ಆಗಿದೆ.

Ravi Shastri - Virat Kohli
'ವಿರಾಟ್ ಕೊಹ್ಲಿಯಂತೆಯೇ': ಐತಿಹಾಸಿಕ ಶತಕದ ನಂತರ ಶುಭಮನ್ ಗಿಲ್‌ರನ್ನು ಹಾಡಿ ಹೊಗಳಿದ ರವಿಶಾಸ್ತ್ರಿ

ವಿರಾಟ್ ನಾಯಕತ್ವದಲ್ಲಿ ಭಾರತವು ಪ್ರಬಲ ಟೆಸ್ಟ್ ತಂಡವಾಗಿ ರೂಪುಗೊಂಡಿತು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್ ಸೇರಿದಂತೆ ಅದ್ಭುತ ವೇಗದ ಬೌಲರ್‌ಗಳನ್ನು ಒಳಗೊಂಡಿತ್ತು. 2016-19ರ ಅವಧಿಯಲ್ಲಿ ಟೆಸ್ಟ್ ಬ್ಯಾಟ್ಸ್‌ಮನ್ ಆಗಿ ವಿರಾಟ್ ಕೊಹ್ಲಿ 43 ಟೆಸ್ಟ್‌ಗಳಲ್ಲಿ 66.79 ಸರಾಸರಿಯಲ್ಲಿ 4,208 ರನ್ ಗಳಿಸಿದರು. ಇದರಲ್ಲಿ 16 ಶತಕಗಳು ಮತ್ತು 10 ಅರ್ಧಶತಕಗಳು ಸೇರಿವೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ, ವಿಶೇಷವಾಗಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ (SENA)ಗಳಲ್ಲಿ ಚೇಸಿಂಗ್‌ನಲ್ಲಿ ಮಾಸ್ಟರ್‌ಕ್ಲಾಸ್ ಇನಿಂಗ್ಸ್‌ಗಳನ್ನು ನೀಡುವ ಅವರ ಸಾಮರ್ಥ್ಯವು ಅವರನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರನ್ನಾಗಿ ಮಾಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com