
ಸೆಂಟ್ ಲೂಸಿಯಾ: ಕ್ರಿಕೆಟ್ ನಲ್ಲಿ ಯಾವುದೂ ಅಸಾಧ್ಯ ಎಂಬುದಿಲ್ಲ ಎಂಬುದು ಮತ್ತೆ ಸಾಬೀತಾಗಿದ್ದು, ಈ ಹಿಂದೆ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವೇಗದ ಅರ್ಧಶತಕ ಸಿಡಿಸಿದ್ದ ಆಟಗಾರ ಇದೀಗ ಕೇವಲ 1ಎಸೆತದಲ್ಲಿ ಬರೊಬ್ಬರಿ 22 ರನ್ ಚಚ್ಚಿ ಯೋಚಿಸಲೂ ಅಸಾಧ್ಯವಾದ ಸಾಧನೆ ಮಾಡಿದ್ದಾರೆ.
ಹೌದು.. ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಐಪಿಎಲ್ ಸ್ಟಾರ್ ಆಲ್ರೌಂಡರ್ ಮತ್ತು ಆರ್ ಸಿಬಿ ಸ್ಫೋಟಕ ಆಟಗಾರ ಕೇವಲ 1 ಎಸೆತದಲ್ಲಿ ಬರೊಬ್ಬರಿ 22 ರನ್ ಸಿಡಿಸಿದ ಸಾಧನೆ ಮಾಡಿದ್ದು, ಆ ಮೂಲಕ ಕ್ರಿಕೆಟ್ ನಲ್ಲಿ 1 ಎಸೆತದಲ್ಲಿ ದಾಖಲಾದ ಗರಿಷ್ಟ ರನ್ ಗಳು ಎಂಬ ದಾಖಲೆಗೆ ಪಾತ್ರವಾಗಿದೆ.
ಈ ಸಾಧನೆ ಮಾಡಿದ್ದು ವೆಸ್ಟ್ ಇಂಡೀಸ್ ನ ಡೇಂಜರಸ್ ಆಲ್ರೌಂಡರ್ ರೊಮಾರಿಯೋ ಶೆಫರ್ಡ್... ಹೌದು.. ಈ ಹಿಂದೆ ಐಪಿಎಲ್ ನಲ್ಲಿ ಆರ್ ಸಿಬಿ ಪರ ಸ್ಫೋಟಕ ಬ್ಯಾಟಿಂಗ್ ಮಾಡಿ ವೇಗದ ಅರ್ಧಶತಕ ಗಳಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ಅದೇ ರೊಮಾರಿಯೋ ಶೆಫರ್ಡ್ ಮತ್ತೆ ಬ್ಯಾಟಿಂಗ್ ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.
ಮಂಗಳವಾರ ಗಯಾನಾ ಅಮೆಜಾನ್ ವಾರಿಯರ್ಸ್ ಪರ ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶೆಫರ್ಡ್ ರ ಈ ಸಾಧನೆ ಕ್ರಿಕೆಟ್ ಪ್ರೇಮಿಗಳು ಊಹಿಸಲೂ ಸಾಧ್ಯವಿಲ್ಲ. ಇದು ಕ್ರಿಕೆಟ್ ಎಲ್ಲ ಮಾನದಂಡಗಳನ್ನೂ ಮೀರಿದ್ದಾಗಿದೆ.
ಇಷ್ಟಕ್ಕೂ ಆಗಿದ್ದೇನು?
ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ಅನುಭವಿ ಬೌಲರ್ ಓಶೇನ್ ಥಾಮಸ್ ಸಿಪಿಎಲ್‌ನಲ್ಲಿ ಒಂದೇ ಒಂದು ಚೆಂಡಿನಲ್ಲಿ 22 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಎಲ್ಲರಿಗೂ ಆಘಾತ ನೀಡಿದ್ದಾರೆ. ಅಂತೆಯೇ ಅದೇ ಒಂದು ಚೆಂಡಿನಲ್ಲಿ ರೊಮಾರಿಯೋ ಶೆಫರ್ಡ್ 22 ರನ್ ಚಚ್ಚಿ ಅದ್ಭುತ ದಾಖಲೆ ನಿರ್ಮಿಸಿದ್ದಾರೆ.
ಸಿಪಿಎಲ್ ನ ಮಂಗಳವಾರ ನಡೆದ ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ಇನ್ನಿಂಗ್ಸ್‌ನ 15 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಈ ಓವರ್‌ನಲ್ಲಿ, ಥಾಮಸ್ ಹಲವಾರು ನೋ-ಬಾಲ್‌ಗಳು ಮತ್ತು ವೈಡ್‌ಗಳನ್ನು ಎಸೆದಿದ್ದಾರೆ.
ಅಂತೆಯೇ ತಮಗೆ ಸಿಕ್ಕ ಬಹುತೇಕ ಎಲ್ಲ ನೋಬಾಲ್ ಗಳನ್ನು ರೊಮಾರಿಯೋ ಶೆಫರ್ಡ್ ಸಿಕ್ಸರ್ ಗೆ ಅಟ್ಟಿ ಗರಿಷ್ಠ ರನ್ ಕಲೆ ಹಾಕಿ ಈ ಸಾಧನೆ ಮಾಡಿದ್ದಾರೆ. ಇದು ಟಿ೨೦ ಕ್ರಿಕೆಟ್ ಇತಿಹಾಸದಲ್ಲಿ ಒಂದು ವಿಶಿಷ್ಟ ಅಧ್ಯಾಯವಾಗಿದೆ.
3 ಸಿಕ್ಸರ್, 3 ನೋಬಾಲ್, 1 ವೈಡ್
ಇನ್ನು ೧೫ ನೇ ಓವರ್‌ನ ಮೊದಲ ಎಸೆತ – ಥಾಮಸ್ ನೋ-ಬಾಲ್ ಎಸೆದರು. ಹೀಗಾಗಿ ಇದನ್ನು ಫ್ರೀ ಹಿಟ್ ನೀಡಲಾಯಿತು. ಫ್ರೀ ಹಿಟ್ ಬಾಲ್ ಅನ್ನೂ ಕೂಡ ವೈಡ್ ಮಾಡಿದ ಪರಿಣಾಮ ಫ್ರೀ ಹಿಟ್ ಹಾಗೆಯೇ ಉಳಿಯಿತು. ಮುಂದಿನ ಎಸೆತವನ್ನೂ ಕೂಡ ಓಶೇನ್ ಥಾಮಸ್ ನೋಬಾಲ್ ಎಸೆದರು. ಈ ಎಸೆತವನ್ನು ರೊಮಾರಿಯೋ ಶೆಫರ್ಡ್ ಸಿಕ್ಸರ್ ಗೆ ಅಟ್ಟಿದರು. ಹೀಗಾಗಿ ಮತ್ತೆ ಫ್ರೀ ಹಿಟ್ ದೊರೆಯಿತು. ಥಾಮಸ್ ಎಸೆದ ಮುಂದಿನ ಫ್ರೀ ಹಿಟ್ ಎಸೆತವನ್ನೂ ರೊಮಾರಿಯೋ ಸಿಕ್ಸರ್ ಗೆ ಅಟ್ಟಿದರು.
ನಂತರದ ಎಸೆತವನ್ನೂ ಕೂಡ ರೊಮಾರಿಯೋ ಶೆಫರ್ಡ್ ಸಿಕ್ಸರ್ ಗೆ ಅಟ್ಟಿದರು. ಇದು ಲೀಗಲ್ ಡೆಲಿವರಿ ಆಗಿದ್ದರಿಂದ ಇದನ್ನೇ ಮೊದಲ ಎಸೆತ ಎಂದು ಪರಿಗಣಿಸಲಾಯಿತು. ಅದರಂತೆ ರೊಮಾರಿಯೋ ಶೆಫರ್ಡ್ ಕೇವಲ 1 ಎಸೆತದಲ್ಲಿ 3 ನೋಬಾಲ್, 1 ವೈಡ್, ಮೂರು ಸಿಕ್ಸರ್ ಸಹಿತ ಒಟ್ಟು 22 ರನ್ ಚಚ್ಚಿದರು. ಈ ಇನ್ನಿಂಗ್ಸ್ ನಲ್ಲಿ 7ನೇ ಕ್ರಮಾಂಕದಲ್ಲಿ ಬಂದ ರೊಮಾರಿಯೋ ಶೆಫರ್ಡ್ ಒಟ್ಟು 34 ಎಸೆತಗಳಲ್ಲಿ 73 ರನ್ ಚಚ್ಚಿದರು.
ಐಪಿಎಲ್ ನ ವೇಗದ ಅರ್ಧಶತಕ ಸರದಾರ
ವೆಸ್ಟ್ ಇಂಡೀಸ್‌ನ ಎತ್ತರದ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್, ಈ ಹಿಂದೆ ಐಪಿಎಲ್ 2025 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಪರ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಐಪಿಎಲ್ ಇತಿಹಾಸದಲ್ಲಿ ಜಂಟಿ ಎರಡನೇ ವೇಗದ ಅರ್ಧಶತಕವನ್ನು ದಾಖಲಿಸಿದ್ದರು.
Advertisement