
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಅವರ ವೈವಾಹಿಕ ಜೀವನ ಕಳೆದ ಕೆಲವು ವರ್ಷಗಳಿಂದ ಗಮನ ಸೆಳೆಯುತ್ತಿದೆ. 2014 ರಲ್ಲಿ ಶಮಿ ಹಸೀನ್ ಜಹಾನ್ ಅವರನ್ನು ವಿವಾಹವಾದರು. ಆದರೆ, ಅದಾದ ನಾಲ್ಕು ವರ್ಷಗಳ ನಂತರ, ದಂಪತಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಹಸೀನ್ ಜಹಾನ್, ಶಮಿ ಮತ್ತು ಅವರ ಕುಟುಂಬ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದು, ಶಮಿ ವಿರುದ್ಧ ನಿರಂತರವಾಗಿ ಮಾತನಾಡುತ್ತಲೇ ಇದ್ದಾರೆ.
ಇತ್ತೀಚೆಗೆ ನ್ಯೂಸ್ 24ಗೆ ನೀಡಿದ ಸಂದರ್ಶನದಲ್ಲಿ ಮೊಹಮ್ಮದ್ ಶಮಿ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ದೀರ್ಘವಾಗಿ ಮಾತನಾಡುತ್ತಾ, ಹಿಂದಿನದನ್ನು ನೆನಪಿಸಿಕೊಳ್ಳಲು ಬಯಸುವುದಿಲ್ಲ ಎಂದಿದ್ದಾರೆ.
ತಮ್ಮ ಮದುವೆಯ ಬಗ್ಗೆ ಏನಾದರೂ ವಿಷಾದವಿದೆಯೇ ಎಂದು ಕೇಳಿದಾಗ ಶಮಿ, 'ಅದನ್ನು ಬಿಡಿ. ನಾನು ಎಂದಿಗೂ ಹಿಂದೆ ಆಗಿದ್ದರ ಕುರಿತು ವಿಷಾದಿಸುವುದಿಲ್ಲ. ಹೋಗಿದ್ದು ಹೋಗಿದೆ. ನನ್ನನ್ನು ಸೇರಿದಂತೆ ಯಾರನ್ನೂ ದೂಷಿಸಲು ಬಯಸುವುದಿಲ್ಲ. ನಾನು ನನ್ನ ಕ್ರಿಕೆಟ್‌ನತ್ತ ಗಮನ ಹರಿಸಲು ಬಯಸುತ್ತೇನೆ. ನನಗೆ ಈ ವಿವಾದಗಳು ಅಗತ್ಯವಿಲ್ಲ' ಎಂದು ಹೇಳಿದರು.
ವೈವಾಹಿಕ ಜೀವನ ಸಂಕಷ್ಟದಲ್ಲಿ ಇರುವ ಏಕೈಕ ಕ್ರಿಕೆಟಿಗ ಶಮಿ ಮಾತ್ರವಲ್ಲ. ಭಾರತದ ಮಾಜಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಕೂಡ ಪತ್ನಿ ಆಯೇಷಾ ಮುಖರ್ಜಿ ಅವರಿಗೆ ವಿಚ್ಛೇದನ ನೀಡಿದರು. ಈ ವರ್ಷ, ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಕೂಡ ವಿಚ್ಛೇದನ ಪಡೆದರು.
ಧವನ್, ಚಾಹಲ್ ಮತ್ತು ಶಮಿ ಅವರ ಸಂಗಾತಿಗಳ ಜೊತೆಗಿನ ವಿವಾದಗಳ ಬಗ್ಗೆ ಕೇಳಿದಾಗ ಶಮಿ, 'ತನಿಖೆ ಮಾಡುವುದು ನಿಮ್ಮ ಕೆಲಸ. ಆದರೆ, ನಮ್ಮನ್ನು ಏಕೆ ಗಲ್ಲಿಗೇರಿಸಲು ನೀವು ಬಯಸುತ್ತೀರಿ? ಇನ್ನೊಂದು ಬದಿಯನ್ನು ಸಹ ನೋಡಿ. ನಾನು ಕ್ರಿಕೆಟ್‌ನತ್ತ ಗಮನ ಹರಿಸುತ್ತೇನೆ, ವಿವಾದಗಳತ್ತ ಅಲ್ಲ' ಎಂದರು.
ಶಮಿ ಇತ್ತೀಚೆಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರು. ಸದ್ಯ ನಡೆಯುತ್ತಿರುವ ದುಲೀಪ್ ಟ್ರೋಫಿಯಲ್ಲಿ ಈಸ್ಟ್ ಝೋನ್ ಪರ ಆಡುತ್ತಿದ್ದಾರೆ. 34 ವರ್ಷದ ಶಮಿ ಬೆಂಗಳೂರಿನಲ್ಲಿ ನಾರ್ತ್ ಝೋನ್ ವಿರುದ್ಧ 17 ಓವರ್‌ಗಳಲ್ಲಿ 55 ರನ್ ನೀಡಿ 1 ವಿಕೆಟ್ ಪಡೆಯುವ ಮೂಲಕ ಮೊದಲ ದಿನವನ್ನು ಮುಗಿಸಿದರು.
ಶಮಿ ಕೊನೆಯದಾಗಿ ಮೇ 2 ರಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದರು.
2025ರ ಐಪಿಎಲ್ ಸೀಸನ್ ಶಮಿಗೆ ಉತ್ತಮವಾಗಿರಲಿಲ್ಲ. ಅವರು ಒಂಬತ್ತು ಪಂದ್ಯಗಳಲ್ಲಿ ಕೇವಲ ಆರು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದರು. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಭಾರತದ ಹೈ ಪ್ರೊಫೈಲ್ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಿಂದಲೂ ಶಮಿ ಅವರನ್ನು ಕೈಬಿಡಲಾಗಿತ್ತು. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾ ಕಪ್‌ಗೂ ಆಯ್ಕೆಯಾಗಿಲ್ಲ. ಮಾರ್ಚ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನಂತರ ಅವರು ರಾಷ್ಟ್ರೀಯ ತಂಡಕ್ಕಾಗಿ ಆಡಿಲ್ಲ.
Advertisement