

ಬೆಂಗಳೂರು: ಭಾರತ ತಂಡದ ಆಲ್‌ರೌಂಡರ್ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಕ್ರಿಕೆಟ್ ವತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಕರ್ನಾಟಕದ ಸ್ಟಾರ್ ಆಲ್‌ರೌಂಡರ್ ಕೆ. ಗೌತಮ್ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಆಫ್-ಸ್ಪಿನ್ ಬೌಲಿಂಗ್ಗೆ ಹೆಸರುವಾಸಿಯಾಗಿದ್ದರು. ಗೌತಮ್ ನವೆಂಬರ್ 17, 2012 ರಂದು ಉತ್ತರ ಪ್ರದೇಶ ವಿರುದ್ಧ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದರು.
ತಮ್ಮ ಮೊದಲ ಪಂದ್ಯದಲ್ಲೇ ಸುರೇಶ್ ರೈನಾ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಸ್ಟಾರ್ ಆಟಗಾರರನ್ನು ಔಟ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ಬರೊಬ್ಬರಿ 14 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದ ಬಳಿಕ ಕೆ ಗೌತಮ್ ನಿವೃತ್ತಿ ಘೋಷಿಸಿದ್ದಾರೆ.
ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಗೌತಮ್ ಅದ್ಭುತ ಪ್ರದರ್ಶನ ಮೂಲಕ ಭಾರತ ತಂಡವನ್ನ ಸೇರಿದ್ದರು. ಗೌತಮ್ 2021 ರಲ್ಲಿ ಮೊದಲು ಟೀಮ್ ಇಂಡಿಯಾ ಪರ ನೆಟ್ ಬೌಲರ್ ಆಗಿದ್ದರು. ಆ ವರ್ಷದ ಕೊನೆಯಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆಯಾದರು.
ಅವರು ಕೊಲಂಬೊದಲ್ಲಿ ಒಂದು ಟಿ20 ಪಂದ್ಯವನ್ನು ಆಡಿದರು. ಈ ಪಂದ್ಯದಲ್ಲಿ ಕೇವಲ ಒಂದು ವಿಕೆಟ್ ಪಡೆದರು. ಆದಾಗ್ಯೂ, ಈ ಸರಣಿಯ ನಂತರ ಅವರಿಗೆ ಭಾರತದ ಪರ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ.
ಐಪಿಎಲ್ ನಲ್ಲೂ ಬೇಡಿಕೆಯ ಆಟಗಾರ
ಗೌತಮ್ ಐಪಿಎಲ್‌ನಲ್ಲಿ ಹೆಚ್ಚು ಬೇಡಿಕೆಯ ಆಟಗಾರರಾಗಿದ್ದರು. ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಅವರ ಐಪಿಎಲ್ ಪ್ರಯಾಣದಲ್ಲಿ ದುಬಾರಿ ಮೊತ್ತಕ್ಕೆ ಹರಾಜಿನಲ್ಲಿ ಬಿಡ್ ಆಗಿದ್ದರು.
ಗೌತಮ್ ಅವರನ್ನು 2017 ರಲ್ಲಿ ಮುಂಬೈ ಇಂಡಿಯನ್ಸ್ 2 ಕೋಟಿ ರೂ.ಗೆ ಖರೀದಿಸಿತು. 2018 ರಲ್ಲಿ ರಾಜಸ್ಥಾನ ರಾಯಲ್ಸ್ 6.20 ಕೋಟಿ ರೂ.ಗೆ ಬಿಡ್ ಮಾಡಿತ್ತು. ಬಳಿಕ 2019 ರಲ್ಲಿ ಉಳಿಸಿಕೊಂಡಿತು. ಇದಾದ ನಂತರ 2020 ರಲ್ಲಿ ಪಂಜಾಬ್ ಕಿಂಗ್ಸ್‌ಗೆ ಟ್ರೇಡ್ ಮಾಡಿತ್ತು.
ಐಪಿಎಲ್ 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು 9.25 ಕೋಟಿ ರೂ.ಗೆ ಖರೀದಿಸಿತ್ತು. ಇದು ಅವರ ಅವರ ವೃತ್ತಿಜೀವನದ ಅತ್ಯಧಿಕ ಬೆಲೆಯಾಗಿದೆ. ಒಂಬತ್ತು ಐಪಿಎಲ್ ಆವತ್ತಿಗಳಲ್ಲಿ ಗೌತಮ್ 35 ಕೋಟಿ ರೂ. ಗಿಂತ ಹೆಚ್ಚು ಗಳಿಸಿದ್ದಾರೆ.
Advertisement