
ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಅವರು ಶನಿವಾರ ನಡೆದ ಪರಿಶೀಲನಾ ಸಭೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಇತ್ತೀಚಿನ ಫಲಿತಾಂಶಗಳು, ವಿಶೇಷವಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮತ್ತು ನ್ಯೂಜಿಲೆಂಡ್ ವಿರುದ್ಧದ ಸೋಲಿನ ಕುರಿತು ಬಿಸಿಸಿಐ ಉನ್ನತ ಅಧಿಕಾರಿಗಳು ಪ್ರತಿಕ್ರಿಯೆಯನ್ನು ಕೋರಿದ್ದರಿಂದ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಸಭೆಯಲ್ಲಿ ಇದ್ದರು. ಸಭೆಯಲ್ಲಿ ರೋಹಿತ್ ಶರ್ಮಾ ಅವರು ಇನ್ನೂ ಕೆಲವು ತಿಂಗಳು ತಂಡದ ನಾಯಕನಾಗಿ ಉಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧಧ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನ ಉತ್ತಮವಾಗಿಲ್ಲದ ಕಾರಣ ಹಾಗೂ ಕೇವಲ 31 ರನ್ ಗಳಿಸಲಷ್ಟೇ ಶಕ್ತವಾದ ರೋಹಿತ್ ಶರ್ಮಾ ಅವರ ಟೆಸ್ಟ್ ಭವಿಷ್ಯದ ಬಗ್ಗೆ ಪ್ರಶ್ನೆಗಳು ಉದ್ಭವವಾಗಿದ್ದವು. ಸಿಡ್ನಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ರೋಹಿತ್ ಶರ್ಮಾ ಹೊರಗುಳಿದಿದ್ದರು.
ಬಿಸಿಸಿಐ ಜೊತೆಗಿನ ಸಭೆಯಲ್ಲಿ ಅಗರ್ಕರ್ ಮತ್ತು ಗಂಭೀರ್ ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ರೋಹಿತ್ ಅವರು ಇನ್ನೂ ಕೆಲವು ತಿಂಗಳು ತಂಡದ ನಾಯಕರಾಗಿ ಮುಂದುವರಿಯಲು ಬಯಸುವುದಾಗಿ ಮಂಡಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಂಡಕ್ಕೆ ಹೊಸ ನಾಯಕನಿಗಾಗಿ ಹುಡುಕಾಟ ಮುಂದುವರಿಸುವಂತೆಯೂ ರೋಹಿತ್ ಬಿಸಿಸಿಐಗೆ ಹೇಳಿದ್ದಾರೆ ಎನ್ನಲಾಗಿದೆ.
ದೈನಿಕ್ ಜಾಗರಣ್ ವರದಿ ಪ್ರಕಾರ, ಸಭೆಯಲ್ಲಿ ರೋಹಿತ್ ಅವರ ನಂತರ ಟೀಂ ಇಂಡಿಯಾಗೆ ನಾಯಕನನ್ನಾಗಿ ಬುಮ್ರಾ ಹೆಸರನ್ನು ಪ್ರಸ್ತಾಪಿಸಲಾಗಿದೆ. ಆದರೆ, ಅವರ ನಾಯಕತ್ವದ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಬುಮ್ರಾ ಅವರಿಗೆ ಇರುವ ಬಗ್ಗೆ ಅನುಮಾನ ಎದ್ದಿವೆ.
ಆಸ್ಟ್ರೇಲಿಯಾ ವಿರುದ್ಧದ ಎಲ್ಲಾ 5 ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದರು. ಎರಡು ಟೆಸ್ಟ್‌ಗಳಲ್ಲಿ ತಂಡವನ್ನು ಮುನ್ನಡೆಸಿದರು. ಆದರೂ, ಅವರು ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದ ವೇಳೆ ಬೆನ್ನುನೋವಿಗೆ ತುತ್ತಾದರು ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿರಲಿಲ್ಲ. ವೇಗದ ಬೌಲರ್ ಆಗಿರುವುದರಿಂದ ಫಿಟ್‌ನೆಸ್ ಸಮಸ್ಯೆಗಳು ಹೆಚ್ಚಾಗಿ ಕಾಣಿಸುವ ಸಾಧ್ಯತೆ ಇರುವುದರಿಂದ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಅವರಿಗೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರೋಹಿತ್ ಶರ್ಮಾ ಮುಂಬರುವ ICC ಚಾಂಪಿಯನ್ಸ್ ಟ್ರೋಫಿಗೆ ಭಾರತದ ನಾಯಕನಾಗಿ ಉಳಿಯಲು ಬಯಸುತ್ತಾರೆ. ನಂತರ ಆಟಗಾರರು ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳನ್ನು ಸೇರಿಕೊಳ್ಳಲಿದ್ದಾರೆ. ಟಿ20 ಲೀಗ್ ಮುಗಿದ ಬಳಿಕ ಭಾರತ ತಂಡ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಆಗ ರೋಹಿತ್ ಟೆಸ್ಟ್ ತಂಡದ ನಾಯಕರಾಗಿರುತ್ತಾರೆಯೇ ಎಂಬುದು ಸದ್ಯಕ್ಕೆ ತಿಳಿದಿಲ್ಲ.
ಈ ಹಂತದಲ್ಲಿ ಭಾರತದ ದೀರ್ಘಾವಧಿಯ ನಾಯಕ ಯಾರಾಗಬೇಕೆನ್ನುವ ಕುರಿತು ಬಿಸಿಸಿಐ ನಿರ್ಧಾರ ತೆಗೆದುಕೊಳ್ಳಬಹುದು.
Advertisement