
ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ಭಾರತ ತಂಡದಲ್ಲಿ ಮೇಜರ್ ಸರ್ಜರಿಗೆ ಮುಂದಾಗಿರುವ ಬಿಸಿಸಿಐ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರ ರೆಕ್ಕೆ-ಪುಕ್ಕಕ್ಕೆ ಕತ್ತರಿ ಹಾಕಿದೆ.
ಹೌದು.. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯ ಹೀನಾಯ ಸೋಲಿನ ನಂತರ, ಭಾರತ ಕ್ರಿಕೆಟ್ ತಂಡದಲ್ಲಿ ಮೇಜರ್ ಸರ್ಜರಿಗೆ ಮುಂದಾಗಿರುವ ಬಿಸಿಸಿಐ ಕೆಲವು ಕಠಿಣ ನಿಯಮಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಪ್ರಮುಖವಾಗಿ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರ ಅಧಿಕಾರಕ್ಕೆ ಕತ್ತರಿ ಹಾಕಲು ಬಿಸಿಸಿಐ ಯೋಜಿಸುತ್ತಿದ್ದು, ಹೊಸ ನಿಯಮಗಳನ್ನು ಜಾರಿಗೆ ತಂದಿದ್ದರಿಂದ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ರೆಕ್ಕೆ-ಪುಕ್ಕಗಳಿಗೆ ಕತ್ತರಿ ಬೀಳಲಿವೆ ಎಂದು ಹೇಳಲಾಗುತ್ತಿದೆ.
ಆಟಗಾರರ ಸಂಗಾತಿಗಳಿಗೆ ನೋ ಎಂಟ್ರಿ
ಈ ಪೈಕಿ ಮೊದಲ ಕ್ರಮವಾಗಿ ಆಟಗಾರರ ಸಂಗಾತಿಗಳಿಗೆ ನೋ ಎಂಟ್ರಿ ಹೇರಲಾಗಿದ್ದು, ಪ್ರಮುಖವಾಗಿ ಟೀಂ ಇಂಡಿಯಾದ ದೀರ್ಘ ಪ್ರವಾಸಗಳ ವೇಳೆ ಆಟಗಾರರು ತಮ್ಮ ಸಂಗಾತಿಗಳನ್ನು ಕರೆತರದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ನಿಯಮ ಮೊದಲೇ ಇತ್ತಾದರೂ 2019ರಲ್ಲಿ ರವಿಶಾಸ್ತ್ರಿ ಕೋಚ್ ಆದ ಬಳಿಕ ಈ ನಿಯಮವನ್ನು ಸಡಿಲಿಸಲಾಗಿತ್ತು.
ಆದರೆ ಇದೀಗ ಮತ್ತೆ ಈ ನಿಯಮವನ್ನು ಕಠಿಣವಾಗಿ ಜಾರಿತರಲಾಗುತ್ತಿದೆ. ಆಟಗಾರರ ಕುಟುಂಬಸ್ಥರು ಅಥವಾ ಅವರ ಸಂಗಾತಿಗಳೊಂದಿಗೆ ಇರುವ ಸಮಯವನ್ನು ಮಿತಿಗೊಳಿಸಲು ಬಿಸಿಸಿಐ ಯೋಜಿಸುತ್ತಿದೆ. ಆಟಗಾರರು ತಮ್ಮ ಕುಟುಂಬಗಳೊಂದಿಗೆ ದೀರ್ಘಕಾಲ ಸಮಯ ಕಳೆದರೆ ವಿದೇಶಿ ಪ್ರವಾಸಗಳಲ್ಲಿ ಅವರ ಪ್ರದರ್ಶನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಬಿಸಿಸಿಐ ಭಾವಿಸುತ್ತಿದೆ. ಆದ್ದರಿಂದ, 2019 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ನಿಯಮವನ್ನು ಮಂಡಳಿಯು ಮತ್ತೆ ಪರಿಚಯಿಸಲು ಬಯಸುತ್ತಿದೆ. ಇದು ಕುಟುಂಬಗಳೊಂದಿಗಿನ ಆಟಗಾರರೊಂದಿಗೆ ಸಮಯವನ್ನು ಸೀಮಿತಗೊಳಿಸುತ್ತದೆ.
ತಂಡದ ಅಧಿಕೃತ ಪ್ರಯಾಣದಲ್ಲೂ ಕುಟುಂಬ ಮತ್ತು ಸಂಗಾತಿಗಳಿಗೆ ಕೋಕ್
ಮಾತ್ರವಲ್ಲದೇ ತಂಡದ ಸದಸ್ಯರು ಬಸ್ ನಲ್ಲಿ ಪ್ರಯಾಣಿಸುವಾಗ ಅವರ ಜೊತೆ ತಂಡದ ಸಿಬ್ಬಂದಿಗಳು ಮಾತ್ರ ಇರಬೇಕು. ತಂಡದ ಇತರ ಸದಸ್ಯರೊಂದಿಗೆ ಆಟಗಾರರು ತಂಡದ ಬಸ್‌ನಲ್ಲಿ ಪ್ರಯಾಣಿಸಬೇಕೆಂದು ಬಿಸಿಸಿಐ ಬಯಸುತ್ತದೆ. ಸ್ಟಾರ್ ಆಟಗಾರರ ಏಕಾಂಗಿ ಪ್ರಯಾಣವನ್ನು ಮಂಡಳಿಯು ನಿರುತ್ಸಾಹಗೊಳಿಸುತ್ತದೆ.
ಗಂಭೀರ್ ಮ್ಯಾನೇಜರ್ ಅಧಿಕಾರ ಮೊಟಕು
ಅಂತೆಯೇ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅವರ ಮ್ಯಾನೇಜರ್ ಗೌರವ್ ಅರೋರಾ ವಿರುದ್ಧವೂ ಮಂಡಳಿಯು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಅರೋರಾ ಅವರನ್ನು ತಂಡದ ಹೋಟೆಲ್‌ನಲ್ಲಿ ಉಳಿಯಲು ಅಥವಾ ಕ್ರೀಡಾಂಗಣಗಳಲ್ಲಿ ವಿಐಪಿ ಪೆಟ್ಟಿಗೆಯಲ್ಲಿ ಕುಳಿತುಕೊಳ್ಳಲು ಅನುಮತಿಸಲಾಗುವುದಿಲ್ಲ. ತಂಡದ ಬಸ್‌ನಲ್ಲಿ ಅಥವಾ ಅದರ ಹಿಂದಿನ ಬಸ್‌ನಲ್ಲಿ ಗಂಭೀರ್ ಅವರೊಂದಿಗೆ ಹೋಗಲು ಅವರ ಮ್ಯಾನೇಜರ್ ಅರೋರಗೆ ಅವಕಾಶವಿರುವುದಿಲ್ಲ ಎಂದು ಹೇಳಲಾಗಿದೆ.
Advertisement