
ನವದೆಹಲಿ: ಭಾರತದಲ್ಲಿ ಕ್ರಿಕೆಟಿಗರದ್ದು ಐಶಾರಾಮಿ ಜೀವನ.. ಒಂದು ಸರಣಿ ಆಡಿದರೆ ಲೈಫ್ ಸೆಟಲ್ ಎಂಬ ಅಭಿಪ್ರಾಯ ಕೇಳಿಬರುತ್ತದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರೊಂದಿಗೆ ಆಟವಾಡಿದ್ದ ಮಾಜಿ ಕ್ರಿಕೆಟಿಗನೋರ್ವ ಸಾಲ ತೀರಿಸಲೂ ಹರಸಾಹಸಪಟ್ಟಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಹೌದು.. ಕ್ರಿಕೆಟ್ ಅನ್ನೇ ಧರ್ಮವಾಗಿ ಸ್ವೀಕರಿಸಿರುವ ಭಾರತದಂತಹ ದೇಶದಲ್ಲಿ ಕ್ರಿಕೆಟಿಗರಾಗಲು ಯುವಕರು ಸಾಲುಗಟ್ಟಿ ನಿಂತಿರುತ್ತಾರೆ. ಅತೀವ ಸ್ಪರ್ಧೆ ನಡುವೆ ಓರ್ವ ಕ್ರಿಕೆಟಿಗನಾಗಿ ಸರ್ವೈವ್ ಆಗುವುದು ಸುಲಭದ ಮಾತಲ್ಲ. ಇಂತಹ ಅತೀವ ಸ್ಪರ್ಧೆಯಿಂದಾಗಿಯೇ ತಂಡದಿಂದ ದೂರಾದ ಓರ್ವ ಮಾಜಿ ಆಟಗಾರ ಇದೀಗ ತನ್ನ ಜೀವನದ ಸಂಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ.
ಒಂದು ಕಾಲದಲ್ಲಿ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿಯಂತಹ ದಿಗ್ಗಜ ಆಟಗಾರರೊಂದಿಗೆ ಕ್ರೀಸ್ ಶೇರ್ ಮಾಡಿಕೊಂಡಿದ್ದ ಮನೋಜ್ ತಿವಾರಿ ತಮ್ಮ ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಮನೋಜ್ ತಿವಾರಿ ಭಾರತದ ಪರ 12 ಏಕದಿನ ಮತ್ತು ಮೂರು ಟಿ 20 ಪಂದ್ಯಗಳನ್ನು ಆಡಿದ್ದಾರೆ. ಈ ಸಂದರ್ಭದಲ್ಲಿ ತಿವಾರಿ ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಆಟಗಾರರಾಗಿದ್ದ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಗೌತಮ್ ಗಂಭೀರ್ ಅವರಂತಹ ಆಟಗಾರರೊಂದಿಗೆ ಮೈದಾನದಲ್ಲಿ ಕಾಣಿಸಿಕೊಂಡಿದ್ದರು.
2006-07ರ ರಣಜಿ ಟ್ರೋಫಿ ಋತುವಿನಲ್ಲಿ ಅವರು 99.50 ಸರಾಸರಿಯಲ್ಲಿ 796 ರನ್ ಗಳಿಸಿದ್ದರು. ತಮ್ಮ ಅದ್ಭುತ ಪ್ರದರ್ಶನದಿಂದಾಗಿಯೇ ಬಂಗಾಳದ ಸಾರಥ್ಯ ವಹಿಸಿದ್ದ ಅವರು ದೀರ್ಘಕಾಲದವರೆಗೆ ಬಂಗಾಳ ತಂಡವನ್ನು ಮುನ್ನಡೆಸಿದ್ದರು. ಆದಾಗ್ಯೂ, ತಿವಾರಿ ಮೈದಾನದ ಒಳಗೆ ಮತ್ತು ಹೊರಗೆ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಭಾರತೀಯ ತಂಡದಲ್ಲಿ ದೀರ್ಘಕಾಲದವರೆಗೆ ಸಾಕಷ್ಟು ಅವಕಾಶಗಳು ಸಿಗದ ಕಾರಣ ಅವರು ಅವಧಿಪೂರ್ವ ನಿವೃತ್ತಿ ತೆಗೆದುಕೊಳ್ಳುವ ಬಗ್ಗೆಯೂ ಯೋಚಿಸಿದ್ದರು. ಆದರೆ "ಜವಾಬ್ದಾರಿಯಿಂದಾಗಿ, ನಾನು ಅವಧಿಪೂರ್ವ ನಿವೃತ್ತಿ ತೆಗೆದುಕೊಳ್ಳಲಿಲ್ಲ" ಎಂದು ಅವರು ಹೇಳಿದ್ದಾರೆ.
ಸಾಲ ತೀರಿಸಲು ಪೂರಿ-ಸಬ್ಜಿ ಮಾರಾಟ
ಇನ್ನು ಕ್ರಿಕೆಟ್ ನ ಜೊತೆ ಜೊತೆಯಲ್ಲೇ ತಮ್ಮ ಹದಿಹರೆಯದ ವರ್ಷಗಳಲ್ಲಿ ಸಾಲಗಳನ್ನು ತೀರಿಸಲು ಮನೋಜ್ ತಿವಾರಿ ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು. ಈ ಸಂದರ್ಭದಲ್ಲಿ ಅವರು ಪೂರಿ ಸಬ್ಜಿ ಮಾರಾಟ ಮಾಡಿ ಸಾಲ ತೀರಿಸಲು ಪ್ರಯತ್ನಿಸಿದ್ದರು.
ಈ ಬಗ್ಗೆ ಖಾಸಗಿ ಯೂಟ್ಯೂಬ್ ಚಾನೆಲ್ ನೊಂದಿಗೆ ಮಾತನಾಡಿರುವ ಮನೋಜ್ ತಿವಾರಿ, ''ಅವು ಕಷ್ಟಕರ ಸಮಯಗಳಾಗಿದ್ದವು. ನಾನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಂಡಿದ್ದ ಒಂದು ವಿಷಯವೆಂದರೆ ನಾನು ಸಾಲವನ್ನು ತೀರಿಸಬೇಕಾಗಿತ್ತು. ಕೋಲ್ಕತ್ತಾದಲ್ಲಿ ನಮಗೆ ಹೊಟೆಲ್ ಇದೆ. ಅಲ್ಲಿ ನಾನು ಪೂರಿ ಸಬ್ಜಿಯನ್ನು ಮಾರಾಟ ಮಾಡುತ್ತಿದ್ದೆ. ನನ್ನ ತಾಯಿ ಪೂರಿಗಳನ್ನು ತಯಾರಿಸುತ್ತಿದ್ದರು. ಕೆಲವೊಮ್ಮೆ ಜನರು ತಾವು ತಿನ್ನುವ ಆಹಾರಕ್ಕೂ ಹಣ ನೀಡುತ್ತಿರಲಿಲ್ಲ" ಎಂದು ಅಳಲು ತೋಡಿಕೊಂಡಿದ್ದಾರೆ.
"ನಾನು ಸುಮಾರು 14 ವರ್ಷದವನಿದ್ದಾಗ ನಾನು ನಟ್ ಮತ್ತು ಬೋಲ್ಟ್‌ಗಳ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದೆ. ನಾನು U-16 ಮಟ್ಟದಲ್ಲಿ ಆಡಿದಾಗ ಪ್ರತಿ ಪಂದ್ಯಕ್ಕೆ ನನಗೆ 1200 ರೂ. ಸಿಗುತ್ತಿತ್ತು. ಕ್ರಿಕೆಟ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಖಚಿತಪಡಿಸಿಕೊಂಡೆ, ಇದರಿಂದ ಹಣ ಯಾವಾಗಲೂ ಬರುತ್ತದೆ ಎಂದು ಭಾವಿಸಿ ಕಾರ್ಖಾನೆ ಕೆಲಸ ತೊರೆದೆ ಎಂದು ಹೇಳಿದ್ದಾರೆ.
2008ರಲ್ಲಿ ಮನೋಜ್ ತಿವಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. 2011 ರಲ್ಲಿ ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ODI ಶತಕವನ್ನು ಗಳಿಸಿದರು, ಆದರೆ ಆ ಪಂದ್ಯದ ನಂತರ ತಿಂಗಳುಗಳ ಕಾಲ ಬೆಂಚ್ ಕಾದರು. ಆ ಸಮಯದಲ್ಲಿ ಎಂಎಸ್ ಧೋನಿ ತಂಡದ ನಾಯಕರಾಗಿದ್ದರು.
ಧೋನಿ ನಿರ್ಧಾರವೇ ಅಂತಿಮವಾಗಿರುತ್ತಿತ್ತು!
ಧೋನಿ ಕುರಿತು ಮಾತನಾಡಿದ ಮನೋಜ್ ತಿವಾರಿ, "ಧೋನಿ ಅವರು ನಾಯಕರಾಗಿದ್ದರು. ಟೀಮ್ ಇಂಡಿಯಾ ನಾಯಕನ ಯೋಜನೆಯ ಪ್ರಕಾರ ನಡೆಯುತ್ತದೆ. ರಾಜ್ಯ ತಂಡಗಳಲ್ಲಿ, ವಿಷಯಗಳು ವಿಭಿನ್ನವಾಗಿವೆ. ಆದರೆ ಟೀಮ್ ಇಂಡಿಯಾದಲ್ಲಿ ಎಲ್ಲವೂ ನಾಯಕ ಹೇಳಿದಂತೆ ನಡೆಯುತ್ತಿತ್ತು. ನೀವು ಭಾರತ ತಂಡದ ಇತಿಹಾಸ ನೋಡಿದರೆ, ಕಪಿಲ್ ದೇವ್ ಅವರಿಂದ ಸುನಿಲ್ ಗವಾಸ್ಕರ್, ಮೊಹಮ್ಮದ್ ಅಜರುದ್ದೀನ್, ದಾದಾ (ಸೌರವ್ ಗಂಗೂಲಿ) ಎಲ್ಲ ನಾಯಕತ್ವದಲ್ಲಿ ಭಾರತ ತಂಡದಲ್ಲಿ ನಾಯಕನ ಮಾತೇ ಅಂತಿಮವಾಗಿರುತ್ತಿತ್ತು. ಮಹೇಂದ್ರ ಸಿಂಗ್ ಧೋನಿ ಅವಧಿಯಲ್ಲೂ ಇದೇ ನಡೆದಿತ್ತು.
ಶತಕ ಗಳಿಸಿದರೂ ತಂಡದಲ್ಲಿ ಸ್ಥಾನ ಸಿಗಲಿಲ್ಲ
ಆ ಸರಣಿಯಲ್ಲಿ ನಾನು ಶತಕ ಗಳಿಸಿದ ನಂತರ ನನ್ನನ್ನು 14 ಪಂದ್ಯಗಳಿಗೆ ಕೈಬಿಡಲಾಗಿತ್ತು. ಶತಕ ಗಳಿಸಿದ ನಂತರ ಒಬ್ಬ ಆಟಗಾರನನ್ನು ಕೈಬಿಟ್ಟರೆ..? ಇದಕ್ಕೆ ನನಗೆ ಉತ್ತರ ತಿಳಿಯಬೇಕು. ಶತಕದ ನಂತರ ನನ್ನನ್ನು ಹೊಗಳಲಾಯಿತು. ಆದರೆ ಬಳಿಕ ತಂಡದಿಂದ ನನ್ನ ಕೈಬಿಡಲಾಗಿತ್ತು. ಆ ಸಮಯದಲ್ಲಿ, ನಾನು ಸೇರಿದಂತೆ ಯುವಕರು ಭಯಪಡುತ್ತಿದ್ದರು.
ಆಗ ತಂಡದಲ್ಲಿದ್ದ ವಿರಾಟ್ ಕೊಹ್ಲಿ, ಸುರೇಶ್ ರೈನಾ, ರೋಹಿತ್ ಶರ್ಮಾ ಇದ್ದರು. ಆ ನಂತರ ನಡೆದ ಪ್ರವಾಸದಲ್ಲಿ, ಅವರು ರನ್ ಗಳಿಸುತ್ತಿರಲಿಲ್ಲ. ಮತ್ತು ಇಲ್ಲಿ ನಾನು ಶತಕ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ನಂತರವೂ ಆಡುವ XI ನಲ್ಲಿ ಸ್ಥಾನ ಪಡೆಯಲಿಲ್ಲ. ಆರು ತಿಂಗಳ ಅಂತರದಲ್ಲಿ ನಡೆದ 14 ಪಂದ್ಯಗಳಿಗೆ ನನ್ನನ್ನು ಕೈಬಿಡಲಾಯಿತು. ಆ ಸಮಯದಲ್ಲಿ ಕೈಬಿಟ್ಟ ಆಟಗಾರನಿಗೆ ಸಾಕಷ್ಟು ಅಭ್ಯಾಸ ಸಿಗಲಿಲ್ಲ. ನಾನು ನಿವೃತ್ತಿ ಹೊಂದಲು ಬಯಸಿದ್ದೆ. ಆದರೆ ಕುಟುಂಬದ ಜವಾಬ್ದಾರಿಯಿಂದಾಗಿ ಸಾಧ್ಯವಾಗಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
Advertisement