
ಬೆಂಗಳೂರು: ಗುರುವಾರ ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹರಿಯಾಣ ವಿರುದ್ಧ ನಡೆದ ಕರ್ನಾಟಕದ ರಣಜಿ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ ಕೆಎಲ್ ರಾಹುಲ್ 37 ಎಸೆತಗಳಲ್ಲಿ ಕೇವಲ 26 ರನ್ ಗಳಿಸಿ ಔಟಾದರು. ಈ ಮೂಲಕ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದ್ದಾರೆ.
ಆರಂಭಿಕರಾದ ಅನೀಶ್ ಕೆವಿ ಮತ್ತು ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್ ನಷ್ಟಕ್ಕೆ 45 ರನ್ ಜೊತೆಯಾಟವಾಡಿದರು. ನಂತರ ಮೂರನೇ ಕ್ರಮಾಂಕದಲ್ಲಿ ಬಂದ ರಾಹುಲ್ 37 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 26 ರನ್ ಗಳಿಸಲಷ್ಟೇ ಶಕ್ತರಾದರು. ಈ ಆವೃತ್ತಿಯಲ್ಲಿ ಹರಿಯಾಣ ಪರ ಉತ್ತಮ ಫಾರ್ಮ್‌ನಲ್ಲಿರುವ ಅನ್ಶುಲ್ ಕಾಂಬೋಜ್ ಅವರಿಗೆ ರಾಹುಲ್ ವಿಕೆಟ್ ಒಪ್ಪಿಸಿದರು.
ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಎರಡನೇ ವಿಕೆಟ್ ನಷ್ಟಕ್ಕೆ 54 ರನ್ ಸೇರಿಸಿದರು. ನಂತರ ಬಂದ ದೇವದತ್ ಪಡಿಕ್ಕಲ್ ಮತ್ತು ಮಯಾಂಕ್ ಅಗರ್ವಾಲ್ 62 ರನ್ ಜೊತೆಯಾಟವಾಡಿದರು. ಮೂರು ಸಿಕ್ಸರ್ ಮತ್ತು ಎಂಟು ಬೌಂಡರಿಗಳನ್ನು ಸಿಡಿಸುವ ಮೂಲಕ ಮಯಾಂಕ್ ತಂಡಕ್ಕೆ ನೆರವಾದರು. ಒಂಬತ್ತು ರನ್‌ಗಳಿಂದ ಶತಕ ವಂಚಿತರಾದರು. 48ನೇ ಓವರ್‌ನಲ್ಲಿ ಅನುಜ್ ಥಕ್ರಾಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಅವರ ನಂತರ, ಹಿಂದಿನ ಸುತ್ತಿನಲ್ಲಿ ಪಂಜಾಬ್ ವಿರುದ್ಧ ದ್ವಿಶತಕ ಬಾರಿಸಿದ್ದ 21 ವರ್ಷದ ರವಿಚಂದ್ರನ್ ಸ್ಮರಣ್, ದೇವದತ್ ಪಡಿಕ್ಕಲ್ ಅವರನ್ನು ಸೇರಿಕೊಂಡರು.
2020ರ ಫೆಬ್ರುವರಿಯಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಬಂಗಾಳದ ವಿರುದ್ಧ ರಾಹುಲ್ ಆಡಿದ್ದರು. ಆ ಪಂದ್ಯದಲ್ಲಿ ಅವರು 26 ಮತ್ತು 0 ಗಳಿಸಿದ್ದರು. ಕರ್ನಾಟಕ 174 ರನ್‌ಗಳಿಂದ ಸೋಲು ಕಂಡಿತ್ತು. ಅದಾದ ಬಳಿಕ ರಾಹುಲ್ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎಲ್ಲ ಐದು ಟೆಸ್ಟ್‌ಗಳಲ್ಲಿ ಆಡಿದ್ದ ವಿಕೆಟ್‌ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಅವರ ಮೊಣಕೈಗೆ ಗಾಯವಾಗಿತ್ತು. ಹೀಗಾಗಿ, ರಾಹುಲ್ ಅವರನ್ನು ಜನವರಿ 23ರಿಂದ ಆರಂಭವಾಗಿದ್ದ ಪಂಜಾಬ್ ವಿರುದ್ಧದ ಎಲೈಟ್ ‘ಸಿ’ ಗುಂಪಿನ ಪಂದ್ಯದಿಂದ ಹೊರಗಿಡಲಾಗಿತ್ತು.
ಕರ್ನಾಟಕವು ಸಿ ಗುಂಪಿನಲ್ಲಿ 19 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಹರಿಯಾಣ 26 ಅಂಕಗಳೊಂದಿಗೆ ಮೊದಲ ಸ್ಥಾನ ಮತ್ತು ಕೇರಳ 21 ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ನಾಕೌಟ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಕರ್ನಾಟಕವು ಬೋನಸ್ ಅಂಕದೊಂದಿಗೆ ಈ ಪಂದ್ಯವನ್ನು ಗೆಲ್ಲಲೇ ಬೇಕಿರುವ ಅನಿವಾರ್ಯತೆಗೆ ಸಿಲುಕಿದೆ.
ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಬಿಹಾರದ ವಿರುದ್ಧ ಆಡುತ್ತಿರುವ ಕೇರಳ ಸೋತರೆ, ಕರ್ನಾಟಕ ಮುಂದಿನ ಸುತ್ತು ಪ್ರವೇಶಿಸಲು ಸಹಾಯವಾಗಲಿದೆ.
Advertisement