
ಈ ವರ್ಷದ ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ, ಸದ್ಯ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ವಿರುಷ್ಕಾ ದಂಪತಿಯು ಶಾಂತ, ಹೆಚ್ಚು ಖಾಸಗಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವತ್ತ ಯಾವಾಗಲೂ ಗಮನಹರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಭಾರತ ತಂಡ ಹೋರಾಡುತ್ತಿದ್ದು, ಕೊಹ್ಲಿ ಕೂಡ ಲಂಡನ್‌ನಲ್ಲಿಯೇ ಇದ್ದಾರೆ. ಸದ್ಯ ಪತ್ನಿ ಅನುಷ್ಕಾ ಶರ್ಮಾ ಮತ್ತು ಅವರ ಇಬ್ಬರು ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದಾರೆ.
ಲಂಡನ್‌ನ ಬೀದಿಯಲ್ಲಿ ದಂಪತಿ ನಡೆದು ಹೋಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ವೇಳೆ ಕೊಹ್ಲಿ ಕ್ಯಾಮೆರಾದತ್ತ ದಿಟ್ಟಿಸಿ ನೋಡುತ್ತಿರುವುದು ಕಂಡುಬಂದಿದೆ. ದಂಪತಿ ಲಂಡನ್‌ಗೆ ಸ್ಥಳಾಂತರಗೊಂಡಾಗಿನಿಂದ, ಅಭಿಮಾನಿಗಳು ಈ ಜೋಡಿಯ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ವಿಡಿಯೋ ಅಥವಾ ಫೋಟೊಗಳನ್ನು ತೆಗೆಯಲು ಪ್ರಯತ್ನಿಸುತ್ತಿರುತ್ತಾರೆ.
ವಿರಾಟ್ ಕೊಹ್ಲಿ ಕೊನೆಯ ಬಾರಿಗೆ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜೂನ್ 4 ರಂದು ಪ್ರಶಸ್ತಿಯನ್ನು ಎತ್ತಿಹಿಡಿದ ವೇಳೆ ಕೊಹ್ಲಿ ಮೈದಾನದಲ್ಲಿಯೇ ಭಾವುಕರಾಗಿದ್ದರು.
ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಸದ್ಯ ಏಕದಿನ ಪಂದ್ಯಗಳಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಆಗಸ್ಟ್‌ನಲ್ಲಿ ಭಾರತವು ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ಆತಿಥ್ಯ ವಹಿಸಲಿದ್ದು, ಆಗ ಕೊಹ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಕಳೆದ ವರ್ಷ ಬಾರ್ಬಡೋಸ್‌ನಲ್ಲಿ ಭಾರತ T20 ವಿಶ್ವಕಪ್ ಗೆದ್ದ ನಂತರ ಅವರು T20I ಗಳಿಂದ ನಿವೃತ್ತರಾದರು.
Advertisement