
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಬ್ಯುಸಿನೆಸ್ ವ್ಯಾಲ್ಯು ಶೇ 12.9 ರಷ್ಟು ಏರಿಕೆಯಾಗಿದ್ದು, 18.5 ಬಿಲಿಯನ್ ಯುಎಸ್ ಡಾಲರ್‌ಗಳಿಗೆ ತಲುಪಿದೆ ಎಂದು ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕೆ ವರದಿ ತಿಳಿಸಿದೆ. ಕಳೆದ ವರ್ಷದಲ್ಲಿ ಐಪಿಎಲ್‌ನ ಬ್ರಾಂಡ್ ಮೌಲ್ಯವು ಶೇ 13.8 ರಷ್ಟು ಹೆಚ್ಚಾಗಿ 3.9 ಬಿಲಿಯನ್ ಯುಎಸ್ ಡಾಲರ್‌ಗಳಿಗೆ ತಲುಪಿದೆ ಎಂದು ವರದಿ ಹೇಳಿದೆ.
ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಾಲ್ಕು ಅಸೋಸಿಯೇಟ್ ಪ್ರಾಯೋಜಕತ್ವದ ಸ್ಲಾಟ್‌ಗಳನ್ನು My11Circle, Angel One, RuPay, ಮತ್ತು CEAT ಕಂಪನಿಗಳಿಗೆ ಮಾರಾಟ ಮಾಡಿತು ಮತ್ತು ಈ ಒಪ್ಪಂದಗಳಿಂದ 1,485 ಕೋಟಿ ರೂ. ಗಳಿಸಿತು. ಈ ಮೊತ್ತವು ಹಿಂದಿನ ಅವಧಿಯಲ್ಲಿ ಇದೇ ರೀತಿಯ ಪ್ರಾಯೋಜಕತ್ವಗಳಿಂದ ಗಳಿಸಿದ್ದಕ್ಕಿಂತ ಶೇ 25 ರಷ್ಟು ಹೆಚ್ಚಾಗಿದೆ. ಮತ್ತೊಂದೆಡೆ, ಪಂದ್ಯಾವಳಿಯು ಟಾಟಾ ಗ್ರೂಪ್‌ನೊಂದಿಗೆ ತನ್ನ ಟೈಟಲ್-ಪ್ರಾಯೋಜಕತ್ವ ಒಪ್ಪಂದವನ್ನು ನವೀಕರಿಸಿದ್ದು, 2028 ರವರೆಗೆ ವಿಸ್ತರಿಸಿದೆ. ಇದು ಐದು ವರ್ಷಗಳ ಒಪ್ಪಂದವಾಗಿದ್ದು, 300 ಮಿಲಿಯನ್ ಯುಎಸ್ ಡಾಲರ್ (ಸುಮಾರು ರೂ. 2,500 ಕೋಟಿ) ಮೌಲ್ಯದ್ದಾಗಿದೆ.
ಐಪಿಎಲ್ ಫ್ರಾಂಚೈಸಿಗಳ ವಿಷಯಕ್ಕೆ ಬಂದರೆ, 2025ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 269 ಮಿಲಿಯನ್ ಅಮೆರಿಕನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ ಅಗ್ರ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ 227 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯವಿತ್ತು.
ಎರಡನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ (MI) 2024ರಲ್ಲಿ 204 ಮಿಲಿಯನ್ ಅಮೆರಿಕನ್ ಡಾಲರ್‌ಗಳಿಂದ ಈ ವರ್ಷ 242 ಮಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ಏರಿದೆ.
ವರದಿಯ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ (CSK) 235 ಮಿಲಿಯನ್ USD ಬ್ರಾಂಡ್ ಮೌಲ್ಯದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಪಂಜಾಬ್ ಕಿಂಗ್ಸ್ (PBKS) ತಂಡವು ಕಳೆದ ವರ್ಷಕ್ಕೆ ಹೋಲಿಸಿದರೆ ಅತಿದೊಡ್ಡ ಬೆಳವಣಿಗೆಯನ್ನು ಕಂಡಿದೆ. 2024ರಲ್ಲಿ ತಂಡದ ಬ್ರಾಂಡ್ ಮೌಲ್ಯವು ಶೇ 39.6 ರಷ್ಟು ಹೆಚ್ಚಾಗಿದೆ.
ವೀಕ್ಷಕರ ವಿಚಾರಕ್ಕೆ ಬಂದರೆ, ಐಪಿಎಲ್ 2025ರ ಫೈನಲ್ ಪಂದ್ಯವನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ 67.8 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಇದು 2025ರ ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಗಿಂತಲೂ ಹೆಚ್ಚಿನದಾಗಿದೆ.
ಐಪಿಎಲ್ ಕ್ರೀಡಾ ವ್ಯವಹಾರ ಜಗತ್ತಿನಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ ಮತ್ತು ಮುಂಚೂಣಿಯಲ್ಲಿದೆ. ಫ್ರಾಂಚೈಸಿಗಳು ಮೌಲ್ಯವು ತೀವ್ರವಾಗಿ ಏರಿದೆ, ಮಾಧ್ಯಮ ಹಕ್ಕುಗಳ (ಟಿವಿ ಮತ್ತು ಸ್ಟ್ರೀಮಿಂಗ್‌ನಂತಹ) ಒಪ್ಪಂದಗಳು ದಾಖಲೆಯ ಗರಿಷ್ಠ ಮಟ್ಟ ತಲುಪಿವೆ ಮತ್ತು ಲೀಗ್ ವ್ಯಾಪಕ ಶ್ರೇಣಿಯ ಬ್ರಾಂಡ್ ಪಾಲುದಾರಿಕೆಗಳನ್ನು ಆಕರ್ಷಿಸಿದೆ ಎಂದು ಹೌಲಿಹಾನ್ ಲೋಕೆಯಲ್ಲಿ ಹಣಕಾಸು ಮತ್ತು ಮೌಲ್ಯಮಾಪನ ಸಲಹಾ ನಿರ್ದೇಶಕ ಹರ್ಷ ತಾಳಿಕೋಟಿ ಹೇಳಿದ್ದಾರೆ.
Advertisement