
ಬರ್ಮಿಂಗ್‌ಹ್ಯಾಮ್: ಭಾರತದ ಆಟಗಾರರು ಹಿಂದೆ ಸರಿದ ಬೆನ್ನಲ್ಲೇ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2025 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನಡೆಯಬೇಕಿದ್ದ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ರದ್ದಾಗಿದೆ.
ಭಾರತ-ಪಾಕಿಸ್ತಾನದ ನಡುವಿನ ಪಂದ್ಯದ ಬಗ್ಗೆ ಹಲವು ಭಾರತೀಯರು ವಿರೋಧ ವ್ಯಕ್ತಪಡಿಸಿದ್ದರು. ಪಂದ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತಪಡಿಸಿದ್ದರು.
ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ ವಿಚಾರವನ್ನು ಪ್ರಸ್ತಾಪಿಸಿ ಪಾಕ್ ಜೊತೆ ಆಡುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದರು. ಜೊತೆಗೆ ಪಂದ್ಯವನ್ನು ಆಡಲು ಭಾರತ ಲೆಜೆಂಡ್ಸ್ ತಂಡದ ಹಲವಾರು ಆಟಗಾರರು ಹಿಂದೇಟು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ ಆಯೋಜಕರು ಸೋಷಿಯಲ್ ಮೀಡಿಯಾದಲ್ಲಿ ಇಂದು ನಡೆಯಲಿರುವ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ನಡುವಣ ಪಂದ್ಯವನ್ನು ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ.
ಈ ವರ್ಷ ಪಾಕಿಸ್ತಾನ ಹಾಕಿ ತಂಡ ಭಾರತಕ್ಕೆ ಬರಲಿದೆ ಎಂಬ ಸುದ್ದಿ ಹಾಗೂ ಇತ್ತೀಚೆಗೆ ನಡೆದ ಭಾರತ ಹಾಗೂ ಪಾಕಿಸ್ತಾನ ವಾಲಿಬಾಲ್ ಪಂದ್ಯ ಮತ್ತು ವಿವಿಧ ಕ್ರೀಡೆಗಳಲ್ಲಿ ಎರಡೂ ರಾಷ್ಟ್ರಗಳ ನಡುವೆ ಕೆಲವು ಇತರ ಪಂದ್ಯಗಳು ನಡೆದ ಹಿನ್ನೆಲೆಯಲ್ಲಿ, ಡಬ್ಲ್ಯೂಸಿಎಲ್ನಲ್ಲಿ ಭಾರತ ಹಾಗೂ ಪಾಕ್ ಪಂದ್ಯ ಆಯೋಜನೆಗೆ ನಾವು ಯೋಚಿಸಿದ್ದೆವು.
ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ಕೆಲ ಸಂತಸದ ನೆನಪುಗಳನ್ನು ಸೃಷ್ಟಿಸಲು ಯತ್ನಿಸಿದ್ದೆವು. ಆದರೆ ಇದರಿಂದ ನಾವು ಅನೇಕರ ಭಾವನೆಗಳನ್ನು ನೋಯಿಸಿದ ಹಾಗೂ ಭಾವನೆಗಳನ್ನು ಕಲಕಿದ್ದೇವೆ ಎಂದನಿಸುತ್ತದೆ. ಅಲ್ಲದೆ, ನಮ್ಮ ಭಾರತೀಯ ಕ್ರಿಕೆಟ್ ದಂತಕಥೆಗಳಿಗೆ ನಾವು ಉದ್ದೇಶಪೂರ್ವಕವಾಗಿ ಸಮಸ್ಯೆ ಉಂಟು ಮಾಡಿದಂತಾಗಿದೆ.
ಆಟದ ಮೇಲಿನ ಪ್ರೀತಿಯಿಂದ ನಮ್ಮನ್ನು ಬೆಂಬಲಿಸಿದ ಬ್ರ್ಯಾಂಡ್‌ಗಳ ಮೇಲೆಯೂ ಪರಿಣಾಮವಾಗಿದೆ. ಆದ್ದರಿಂದ, ನಾವು ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ನಾವು ಮತ್ತೊಮ್ಮೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಅಭಿಮಾನಿಗಳಿಗೆ ಕೆಲವು ಸಂತೋಷದ ಕ್ಷಣಗಳನ್ನು ನೀಡುವ ಉದ್ದೇಶ ನಮ್ಮದಾಗಿತ್ತು, ಅದನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ'' ಎಂದು ಡಬ್ಲ್ಯೂಸಿಎಲ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಕ್ರೀಡಾಂಗಣ ಮುಚ್ಚಲಾಗಿರುವುದರಿಂದ ದಯವಿಟ್ಟು ಯಾರೂ ಹಾಜರಾಗಬೇಡಿ. ಟಿಕೆಟ್ ಖರೀದಿಸಿದ ಎಲ್ಲಾ ಪ್ರೇಕ್ಷಕರಿಗೆ ಪೂರ್ಣ ಮರುಪಾವತಿ ಮಾಡಲಾಗುವುದು ಎಂದು ತಿಳಿಸಿದೆ.
ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ ಆರಂಭಗೊಂಡಿತ್ತು. ಫೈನಲಿನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ 5 ವಿಕೆಟ್ ಜಯ ಸಾಧಿಸಿ ಕಪ್ ಗೆದ್ದಿತ್ತು.
Advertisement