
ಅಹ್ಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ತಂಡದ ಈ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಗಳ ಅಂತರದಲ್ಲಿ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 190 ರನ್ ಕಲೆಹಾಕಿತ್ತು. ಅಂತೆಯೇ ಪಂಜಾಬ್ ಗೆ ಗೆಲ್ಲಲು 191 ರನ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಲಷ್ಟೇ ಶಕ್ತವಾಯಿತು.
ಆ ಮೂಲಕ ಕೇವಲ 6 ರನ್ ಅಂತರದಲ್ಲಿ ವಿರೋಚಿತ ಗೆಲುವು ಕಂಡಿತು. ಈ ಮೂಲಕ ಐಪಿಎಲ್ ಟೂರ್ನಿ ಆರಂಭವಾದ 18 ವರ್ಷಗಳ ಬಳಿಕ ಆರ್ ಸಿಬಿ ಚಾಂಪಿಯನ್ ಪಟ್ಟಕ್ಕೇರಿದೆ.
ಆರ್ ಸಿಬಿ ಅಭಿನಂದನೆಗಳ ಮಹಾಪೂರ
ಇನ್ನು 18 ವರ್ಷಗಳ ಬಳಿಕ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್ ಸಿಬಿ ತಂಡಕ್ಕೆ ಕ್ರಿಕೆಟ್ ವಲಯದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ಕುರಿತು ಖ್ಯಾತ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಆರ್ ಸಿಬಿ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್, ಅನಿಲ್ ಕುಂಭ್ಳೆ ಸೇರಿದಂತೆ ಹಲವರು ಶುಭ ಕೋರಿದರು.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, 'ಮೊದಲ ಐಪಿಎಲ್ ಪ್ರಶಸ್ತಿ ಗೆದ್ದ ಆರ್ ಸಿಬಿ ತಂಡಕ್ಕೆ ಅಭಿನಂದನೆಗಳು. 18ನೇ ಸಂಖ್ಯೆಯ ಜೆರ್ಸಿ 18ನೇ ಆವೃತ್ತಿಯಲ್ಲಿ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಚೆನ್ನಾಗಿ ಆಡಿದ್ದೀರಿ ಮತ್ತು ಈ ಗೆಲುವಿಗೆ ನೀವು ಅರ್ಹರು! ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಪಂಜಾಬ್ ತಂಡದ ಹೋರಾಟವನ್ನೂ ನೆಚ್ಚಿಕೊಂಡಿರುವ ಸಚಿನ್, ಪಂಜಾಬ್ ನೀವೂ ಚೆನ್ನಾಗಿ ಆಡಿದ್ದೀರಿ, ಜೊತೆಗೆ ಇದು ನಿಮ್ಮ ಉತ್ತಮ ಹೋರಾಟದ ಋತುವಾಗಿತ್ತು ಎಂದು ಶ್ಲಾಘಿಸಿದ್ದಾರೆ.
ಸುರೇಶ್ ರೈನಾ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, 'ಈ ಸಲಾ ಕಪ್ ನಮ್ದೇ ಅಲ್ಲ.. ಈ ಸಲಾ ಕಪ್ ನಮ್ದು.. ನಿಮ್ಮ ಮೊದಲ ಐಪಿಎಲ್ ಪ್ರಶಸ್ತಿಗಾಗಿ ಆರ್‌ಸಿಬಿಗೆ ಅಭಿನಂದನೆಗಳು. GOAT (Greatest of All Time) ವಿರಾಟ್ ಕೊಹ್ಲಿಗೆ ತುಂಬಾ ಸಂತೋಷವಾಗಿದೆ. ಜೀವಮಾನವಿಡೀ ಅವರೊಂದಿಗೆ ಉಳಿಯುವ ಒಂದು ಗೆಲುವು ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರ್ ಸಿಬಿ ಗೆಲುವಿಗೆ ಕೇವಲ ಕ್ರಿಕೆಟಿಗರು ಮಾತ್ರವಲ್ಲ ಕರ್ನಾಟಕ ಪ್ರಮುಖ ರಾಜಕಾರಣಿಗಳೂ ಶುಭ ಕೋರಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಕೂಡ ಶುಭ ಕೋರಿದ್ದಾರೆ.
ಉಳಿದಂತೆ ತೆಲುಗು ನಟ ಅಲ್ಲು ಅರ್ಜುನ್, ಬಾಲಿವುಡ್ ನಟ ಸೋನು ಸೂದ್, ತೆಲುಗು ನಟ ಕಿರಣ್ ಅಬ್ಬವರಂ, ಕನ್ನಡದ ಖ್ಯಾತ ನಟ ಕಿಚ್ಚಾ ಸುದೀಪ್ ಕೂಡ ಆರ್ ಸಿಬಿ ಗೆ ಶುಭ ಕೋರಿದ್ದು, 'ದೀರ್ಘ ಕಾಯುವಿಕೆ ಕೊನೆಗೂ ಮುಗಿದಿದೆ. ವರ್ಷಗಳ ಉತ್ಸಾಹ, ಪರಿಶ್ರಮ ಮತ್ತು ನಂಬಿಕೆಯ ನಂತರ ಆರ್‌ಸಿಬಿ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದೆ! ಪ್ರತಿಯೊಬ್ಬ ಆರ್‌ಸಿಬಿ ಅಭಿಮಾನಿಗೂ ಇದು ಅದ್ಭುತ ಕ್ಷಣ.. ಈ ಸಲ ಕಪ್ ನಮ್ಮದು… ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
Advertisement