
ಅಹ್ಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ತಂಡದ ಈ ಸಾಧನೆ ಕುರಿತು ಮಾಜಿ ಮಾಲೀಕ ವಿಜಯ್ ಮಲ್ಯ ತಂಡಕ್ಕೆ ಮಹತ್ವದ ಸಂದೇಶ ರವಾನಿಸಿದ್ದಾರೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಗಳ ಅಂತರದಲ್ಲಿ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 190 ರನ್ ಕಲೆಹಾಕಿತ್ತು. ಅಂತೆಯೇ ಪಂಜಾಬ್ ಗೆ ಗೆಲ್ಲಲು 191 ರನ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಕೇವಲ 6 ರನ್ ಅಂತರದಲ್ಲಿ ವಿರೋಚಿತ ಗೆಲುವು ಕಂಡಿತು.
ಈ ಮೂಲಕ ಐಪಿಎಲ್ ಟೂರ್ನಿ ಆರಂಭವಾದ 18 ವರ್ಷಗಳ ಬಳಿಕ ಆರ್ ಸಿಬಿ ಚಾಂಪಿಯನ್ ಪಟ್ಟಕ್ಕೇರಿದೆ.
ಮಾಜಿ ಓನರ್ Vijay Mallya ಹೇಳಿದ್ದೇನು?
ಇನ್ನು ಆರ್ ಸಿಬಿ 18 ವರ್ಷಗಳ ಬಳಿಕ ಚಾಂಪಿಯನ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಆಟಗಾರರಿಗೆ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಮಹತ್ವದ ಸಂದೇಶ ರವಾನಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ವಿಜಯ್ ಮಲ್ಯ, '18 ವರ್ಷಗಳ ನಂತರ ಆರ್‌ಸಿಬಿ ಅಂತಿಮವಾಗಿ ಐಪಿಎಲ್ ಚಾಂಪಿಯನ್ ಆಗಿದೆ. 2025 ರ ಪಂದ್ಯಾವಳಿಯಾದ್ಯಂತ ಅದ್ಭುತ ಅಭಿಯಾನ. ಅತ್ಯುತ್ತಮ ತರಬೇತಿ ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಉತ್ತಮ ಸಮತೋಲನ ಹೊಂದಿರುವ ತಂಡ. ಅನೇಕ ಅಭಿನಂದನೆಗಳು! ಈ ಸಲ ಕಪ್ ನಮ್ದೆ !! ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ, 'ನಾನು ಆರ್‌ಸಿಬಿಯನ್ನು ಸ್ಥಾಪಿಸಿದಾಗ ಬೆಂಗಳೂರಿಗೆ ಐಪಿಎಲ್ ಟ್ರೋಫಿ ಬರಬೇಕು ಎಂಬುದು ನನ್ನ ಕನಸಾಗಿತ್ತು. ಯುವಕನಾಗಿದ್ದಾಗ ದಂತಕಥೆಯ ಕಿಂಗ್ ಕೊಹ್ಲಿಯನ್ನು ಆಯ್ಕೆ ಮಾಡುವ ಸೌಭಾಗ್ಯ ನನಗಿತ್ತು ಮತ್ತು ಅವರು 18 ವರ್ಷಗಳ ಕಾಲ ಆರ್‌ಸಿಬಿಯೊಂದಿಗೆ ಇದ್ದಾರೆ ಎಂಬುದು ಗಮನಾರ್ಹ.
ಆರ್‌ಸಿಬಿ ಇತಿಹಾಸದ ಅಳಿಸಲಾಗದ ಭಾಗವಾಗಿ ಉಳಿದಿರುವ ಕ್ರಿಸ್ ಗೇಲ್ ಮತ್ತು ಮಿಸ್ಟರ್ 360 ಎಬಿ ಡಿವಿಲ್ಲರ್ಸ್ ಅವರನ್ನು ಆಯ್ಕೆ ಮಾಡುವ ಗೌರವವೂ ನನಗೆ ಸಿಕ್ಕಿತು. ಅಂತಿಮವಾಗಿ, ಐಪಿಎಲ್ ಟ್ರೋಫಿ ಬೆಂಗಳೂರಿಗೆ ಆಗಮಿಸುತ್ತಿದೆ. ನನ್ನ ಕನಸನ್ನು ನನಸಾಗಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ಮತ್ತೊಮ್ಮೆ ಧನ್ಯವಾದಗಳು. ಆರ್‌ಸಿಬಿ ಅಭಿಮಾನಿಗಳು ಅತ್ಯುತ್ತಮರು ಮತ್ತು ಅವರು ಐಪಿಎಲ್ ಟ್ರೋಫಿಗೆ ಅರ್ಹರು. ಈ ಸಲಾ ಕಪ್ ಬೆಂಗಳೂರಿಗೆ ಬರುತೆ! ಎಂದು ಟ್ವೀಟ್ ಮಾಡಿದ್ದಾರೆ.
ಬ್ಯಾಂಕ್ ವಂಚನೆ ಪ್ರಕರಣದಲ್ಲಿ ದೇಶದಿಂದ ಪರಾರಿಯಾಗಿರುವ ವಿಜಯ್ ಮಲ್ಯ
ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್ ಗಳಿಂದ ಪಡೆದ ಸಾಲ ಮರು ಪಾವತಿಸಲಾಗದೇ ವಿಜಯ್ ಮಲ್ಯ ಲಂಡನ್ ಗೆ ಪರಾರಿಯಾಗಿದ್ದು, ಅವರ ವಿರುದ್ಧ ಭಾರತದಲ್ಲಿ ತನಿಖೆ ನಡೆಯುತ್ತಿದೆ.
ಇದೇ ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಸಾಲದಾತರಿಗೆ ಪಾವತಿಸಬೇಕಿರುವ 1.10 ಲಕ್ಷ ಕೋಟಿ (1.28 ಬಿಲಿಯನ್ ಡಾಲರ್) ಸಾಲಕ್ಕೆ ಸಂಬಂಧಿಸಿ ಲಂಡನ್ ಹೈಕೋರ್ಟ್ ನೀಡಿರುವ ದಿವಾಳಿತನ ಕುರಿತ ಆದೇಶದ ವಿರುದ್ಧ ಭಾರತೀಯ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಮೇಲ್ಮನವಿ ವಜಾಗೊಂಡಿದೆ.
Advertisement