
ಮುಂಬೈ: ಇತ್ತೀಚೆಗೆ ಮುಕ್ತಾಯಗೊಂಡ 18ನೇ ಆವೃತ್ತಿಯ ಐಪಿಎಲ್ ಟೂರ್ನಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದು, ಈ ಹಿಂದಿನ ಐಪಿಎಲ್ ಟೂರ್ನಿಗಳ ದಾಖಲೆಗಳನ್ನೆಲ್ಲಾ ಪುಡಿಗಟ್ಟಿದೆ.
ಹೌದು.. ಕ್ರಿಕೆಟ್ ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಎಂದೇ ಖ್ಯಾತಿ ಗಳಿಸಿರುವ ಐಪಿಎಲ್ ಹಾಲಿ ವರ್ಷದ ಟೂರ್ನಿ ಮೂಲಕ ಮತ್ತೊಂದು ಐತಿಹಾಸಿಕ ದಾಖಲೆಗೆ ಪಾತ್ರವಾಗಿದ್ದು, T20 ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದ ಟೂರ್ನಿ ಎಂಬ ಕೀರ್ತಿಗೆ ಭಾಜನವಾಗಿದೆ.
ಪ್ರಮುಖವಾಗಿ 18ನೇ ಆವೃತ್ತಿಯ ಪಂದ್ಯಾವಳಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವಿನ ಫೈನಲ್ ಪಂದ್ಯ ಇತಿಹಾಸದಲ್ಲಿ ಅತ್ಯಂತ ಪ್ರತಿಷ್ಠಿತ ಪಂದ್ಯಗಳಲ್ಲಿ ಒಂದಾಗಿ ಸ್ಮರಣೀಯವಾಗಿದೆ.
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಚೊಚ್ಚಲ ಟ್ರೋಫಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು 6 ರನ್ ರೋಚಕ ಜಯ ಸಾಧಿಸಿತ್ತು.
ಆ ಮೂಲಕ 18 ವರ್ಷಗಳಿಂದ ಪ್ರಶಸ್ತಿಗಾಗಿ ಸೆಣಸುತ್ತಿದ್ದ ವಿರಾಟ್ ಕೊಹ್ಲಿ ಮತ್ತು ಆರ್ ಸಿಬಿ ತಂಡದ ಬಹು ವರ್ಷಗಳ ಕನಸು ನನಸಾಗಿಸಿದ ಟೂರ್ನಿ ಇದಾಗಿದ್ದು, ಬರೊಬ್ಬರಿ 18 ವರ್ಷಗಳ ಬಳಿಕ ಆರ್ ಸಿಬಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿಗ ಅವಿಸ್ಮರಣೀಯ ಟೂರ್ನಿಯಾಗಿದೆ.
ವೀಕ್ಷಣೆಯಲ್ಲಿ ಐತಿಹಾಸಿಕ ದಾಖಲೆ
ಈ ಪಂದ್ಯ ಐಪಿಎಲ್ ಇತಿಹಾಸದಲ್ಲಿಯೇ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದು ಈ ವಿಚಾರ ಕೊಂಚ ತಡವಾಗಿ ಬೆಳಕಿಗೆ ಬಂದಿದೆ. ಈ ಐಪಿಎಲ್ ಫೈನಲ್ ಪಂದ್ಯವು ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಅತಿಹೆಚ್ಚು ವೀಕ್ಷಣೆಗೊಳಪಟ್ಟ ಪಂದ್ಯ ಎನ್ನುವ ಇತಿಹಾಸ ನಿರ್ಮಿಸಿದೆ. ಟಿವಿ ಹಾಗೂ ಡಿಜಿಟಲ್ ಫ್ಲಾಟ್‌ಫಾರಂ ಮೂಲಕ ಬರೋಬ್ಬರಿ 840 ನಿಮಿಷಕ್ಕೂ ಅಧಿಕ ಕಾಲ ವೀಕ್ಷಣೆಗೊಳಗಾದ ಪಂದ್ಯ ಎನಿಸಿಕೊಂಡಿದೆ. ಆ ಮೂಲಕ ಲೀನಿಯರ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಫೈನಲ್ ಪಂದ್ಯವು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಜಿಯೋ ಹಾಟ್ ಸ್ಟಾರ್ ಮಾಹಿತಿ
ಇನ್ನು 2025ರ ಐಪಿಎಲ್‌ನ ಅಧಿಕೃತ ಬ್ರಾಡ್‌ಕಾಸ್ಟರ್ ಜಿಯೋ ಸ್ಟಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಕುರಿತಂತೆ ಮಹತ್ವದ ಅಪ್‌ಡೇಟ್ ನೀಡಿದ್ದು, ಈ ಫೈನಲ್ ಪಂದ್ಯವು ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಅತಿಹೆಚ್ಚು ವೀಕ್ಷಣೆಗೊಳಗಾದ ಪಂದ್ಯ ಎನಿಸಿಕೊಂಡಿದೆ. ಎಲ್ಲಾ ಪ್ಲಾಟ್‌ಫಾರಂ ಸೇರಿದಂತೆ ಈ ಪಂದ್ಯದ ವಾಚಿಂಗ್ ಟೈಮ್ 31.7 ಬಿಲಿಯನ್ ಮಿನಿಟ್ಸ್‌ಗಳಾಗಿವೆ.
ಇನ್ನು ಡಿಜಿಟಲ್ ಪ್ಲಾಟ್‌ಫಾರಂನಲ್ಲಿ ಆರ್‌ಸಿಬಿ-ಪಂಜಾಬ್ ನಡುವಿನ ಐಪಿಎಲ್ ಫೈನಲ್ ಪಂದ್ಯವು ಹಿಂದೆಂದೂ ಕಂಡು ಕೇಳರಿಯದ ದಾಖಲೆ ನಿರ್ಮಿಸಿದೆ. ಡಿಜಿಟಲ್ ಫ್ಲಾಟ್‌ಫಾರಂನಲ್ಲಿ ಆರ್‌ಸಿಬಿ-ಪಂಜಾಬ್ ನಡುವಿನ ಫೈನಲ್ ಪಂದ್ಯವನ್ನು 892 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ ಎಂದು ಹೇಳಿದೆ.
ದಾಖಲೆ ಬರೆದ ಇಡೀ ಟೂರ್ನಿ
ಕೇವಲ ಫೈನಲ್ ಪಂದ್ಯ ಮಾತ್ರವಲ್ಲದೆ ಬಹುನಿರೀಕ್ಷಿತ 18 ನೇ ಆವೃತ್ತಿಯು ವೀಕ್ಷಣೆಯಲ್ಲಿ ಹೊಸ ಎತ್ತರ ತಲುಪಿದೆ. 840 ಶತಕೋಟಿ ನಿಮಿಷಗಳಿಗಿಂತ ಹೆಚ್ಚಿನ ಸಂಚಿತ ವೀಕ್ಷಣಾ ಸಮಯವನ್ನು ಐಪಿಎಲ್ 2025 ದಾಖಲಿಸಿದೆ. ಐಪಿಎಲ್ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕನ್ನು ಜಿಯೋ ಹಾಟ್‌ಸ್ಟಾರ್ ಪಡೆದುಕೊಂಡಿದ್ದು, ಕಳೆದ ವರ್ಷದ ಐಪಿಎಲ್ ಸೀಸನ್‌ಗೆ ಹೋಲಿಸಿದರೆ, ವೀವರ್‌ಶಿಪ್‌ನಲ್ಲಿ ಈ ಬಾರಿ 29% ಲಾಭ ಗಳಿಸಿದೆ.
ಟಿವಿಯ ಐಪಿಎಲ್ ಸ್ಟ್ರೀಮಿಂಗ್ ಡಿಜಿಟಲ್ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಪಡೆದುಕೊಂಡಿತ್ತು. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ 456 ಬಿಲಿಯನ್ ಮಿನಿಟ್ ಲೈವ್ ಕವರೇಜ್ ಅನ್ನು ವೀಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಕೂಡಾ ಯಾವುದೇ ಟೂರ್ನಮೆಂಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಎನಿಸಿಕೊಂಡಿದೆ. ಡಿಜಿಟಲ್‌ನಲ್ಲಿ ಜಿಯೋಹಾಟ್‌ಸ್ಟಾರ್ 23.1 ಶತಕೋಟಿಗೂ ಹೆಚ್ಚು ವೀಕ್ಷಣೆಗಳು ಮತ್ತು 384.6 ಶತಕೋಟಿ ನಿಮಿಷಗಳ ವೀಕ್ಷಣೆಯೊಂದಿಗೆ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ.
ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ 169 ಮಿಲಿಯನ್ ವೀಕ್ಷಕರು ಫೈನಲ್ ಪಂದ್ಯ ವೀಕ್ಷಿಸಿದ್ದಾರೆ. 15 ಬಿಲಿಯನ್ ನಿಮಿಷಗಳ ವೀಕ್ಷಣೆಯೊಂದಿಗೆ ಟಿ20 ಇತಿಹಾಸಲ್ಲಿ ದಾಖಲೆ ಬರೆದಿದೆ. ಓಟಿಟಿ ವೇದಿಕೆಯಾದ ಜಿಯೋ ಹಾಟ್‌ಸ್ಟಾರ್‌ನಲ್ಲಿ, ಪಂದ್ಯವು ಡಿಜಿಟಲ್ ಇತಿಹಾಸವನ್ನು ಪುನಃ ಬರೆದಿದೆ. 892 ಮಿಲಿಯನ್ ವೀಡಿಯೊ ವೀಕ್ಷಣೆಗಳು ಮತ್ತು 16.74 ಬಿಲಿಯನ್ ನಿಮಿಷಗಳ ವೀಕ್ಷಣೆಯೊಂದಿಗೆ ಇದುವರೆಗಿನ ಅತಿದೊಡ್ಡ T20 ಪಂದ್ಯವಾಗಿ ಹೊರಹೊಮ್ಮಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಯೋ ಸ್ಟಾರ್‌ನ ಸ್ಪೋರ್ಟ್ಸ್ ಅಂಡ್ ಲೈವ್ ಎಕ್ಸ್‌ಫೀರಿಯನ್ಸ್ ಸಿಇಒ ಸಂಜೋಗ್ ಗುಪ್ತಾ, 'ಇದೊಂದು ಅವಿಸ್ಮರಣೀಯ ವೀವರ್‌ಶಿಪ್ ನಂಬರ್ಸ್, ನಮಗೆ ಈ ಐಪಿಎಲ್ ಜನರಿಗೆ ಎಷ್ಟು ಪ್ರೀತಿಪಾತ್ರವಾಗಿದೆ ಎನ್ನುವುದನ್ನು ತೋರಿಸುತ್ತದೆ. ಈ ಸೀಸನ್ ವೀಕ್ಷಕರಿಗೆ ಹೊಸ ಅನುಭವ ನೀಡಲು ಪ್ರಯತ್ನಿಸಿದೆವು ಎಂದು ಹೇಳಿದ್ದಾರೆ.
ಅವಿಸ್ಮರಣೀಯ ಸರಣಿ
ಇನ್ನು ಆರ್‌ಸಿಬಿಯ ಪ್ರಶಸ್ತಿ ಗೆಲುವಿನ ಜೊತೆಗೆ, ಹಾಲಿ ಐಪಿಎಲ್ ಟೂರ್ನಿ ಸಾಕಷ್ಟು ವಿಚಾರಗಳಲ್ಲಿ ಅವಿಸ್ಮರಣೀಯ ಸರಣಿಯಾಗಿದೆ. ಪಂಜಾಬ್ ಕಿಂಗ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆದು 11 ವರ್ಷಗಳ ನಂತರ ಫೈನಲ್ ಪಂದ್ಯದಲ್ಲಿ ಆಡಿತು. ಪಂಜಾಬ್ ತಂಡ ಕೊನೆಯ ಬಾರಿಗೆ 2014 ರಲ್ಲಿ ಪ್ಲೇಆಫ್‌ಗೆ ಪ್ರವೇಶಿಸಿತ್ತು. ಅಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಫೈನಲ್‌ನಲ್ಲಿ ಸೋತಿತ್ತು.
ಅಂತೆಯೇ ಪಂಜಾಬ್ ತಂಡದ ಅರ್ಹತೆಯೊಂದಿಗೆ, ಶ್ರೇಯಸ್ ಅಯ್ಯರ್ ಐಪಿಎಲ್ ಫೈನಲ್‌ಗೆ ಮೂರು ವಿಭಿನ್ನ ಫ್ರಾಂಚೈಸಿಗಳನ್ನು ಮುನ್ನಡೆಸಿದ ಏಕೈಕ ನಾಯಕರಾದರು. ಅವರು ಕ್ರಮವಾಗಿ 2020, 2024 ಮತ್ತು 2025 ರಲ್ಲಿ ದೆಹಲಿ ಕ್ಯಾಪಿಟಲ್ಸ್, ಕೆಕೆಆರ್ ಮತ್ತು ಪಿಬಿಕೆಎಸ್ ಅನ್ನು ಟೂರ್ನಮೆಂಟ್‌ನ ಪ್ರಶಸ್ತಿ ಸುತ್ತಿಗೆ ತಂಡ ಮುನ್ನಡೆಸಿದ ಏಕೈಕ ನಾಯಕ ಎಂಬ ಕೀರ್ತಿಗೆ ಭಾಜನರಾದರು.
ಅಂತೆಯೇ ರಾಜಸ್ತಾನ ರಾಯಲ್ಸ್ ತಂಡದ 14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದ ಎರಡನೇ ವೇಗದ ಶತಕ ಸಿಡಿಸಿದರೆ, ಮತ್ತೊಂದೆಡೆ ಇದೇ ಸೂರ್ಯವಂಶಿ ಟಿ20 ಕ್ರಿಕೆಟ್ ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. ಐಪಿಎಲ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದರು.
Advertisement