
ಲೀಡ್ಸ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಅಂಪೈರ್ ತೀರ್ಪಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರಿಗೆ ಐಸಿಸಿ ಛೀಮಾರಿ ಹಾಕಿದೆ.
ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸುವ ಮೂಲಕ ಅಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದ್ದ ಪಂತ್, ಇಂಗ್ಲೆಂಡ್‌ನ ಮೊದಲ ಇನಿಂಗ್ಸ್ ವೇಳೆ ಮೈದಾನದಲ್ಲಿ ತೋರಿದ ವರ್ತನೆಗೆ ಐಸಿಸಿ ಛೀಮಾರಿ ಹಾಕಿದೆ.
27 ವರ್ಷದ ಆಟಗಾರ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.
'ಪಂತ್ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.8 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಇದು ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅಂಪೈರ್ ನಿರ್ಧಾರಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಸಂಬಂಧಿಸಿದೆ' ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಇದರ ಜೊತೆಗೆ, ಪಂತ್ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಕಳೆದ 24 ತಿಂಗಳಲ್ಲಿ ಅವರ ಮೇಲಿರುವ ಮೊದಲ ಅಪರಾಧ ಇದಾಗಿದೆ.
ಇಂಗ್ಲೆಂಡ್ ಇನಿಂಗ್ಸ್‌ನ 61 ನೇ ಓವರ್‌ನಲ್ಲಿ ಹ್ಯಾರಿ ಬ್ರೂಕ್ ಮತ್ತು ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಚೆಂಡಿನ ಸ್ಥಿತಿಯ ಬಗ್ಗೆ ಪಂತ್ ಅಂಪೈರ್ ಜೊತೆಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಬಾಲ್ ಗೇಜ್ ಮೂಲಕ ಚೆಂಡನ್ನು ಪರಿಶೀಲಿಸಿದ ನಂತರ ಅಂಪೈರ್‌ಗಳು ಚೆಂಡನ್ನು ಬದಲಾಯಿಸಲು ನಿರಾಕರಿಸಿದಾಗ, ವಿಕೆಟ್-ಕೀಪರ್ ಅಂಪೈರ್ ಮುಂದೆ ಚೆಂಡನ್ನು ನೆಲಕ್ಕೆ ಎಸೆಯುವ ಮೂಲಕ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರು.
ಪಂತ್ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಐಸಿಸಿ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಪ್ರಸ್ತಾಪಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.
ಆನ್-ಫೀಲ್ಡ್ ಅಂಪೈರ್‌ಗಳಾದ ಕ್ರಿಸ್ ಗಫಾನಿ ಮತ್ತು ಪಾಲ್ ರೀಫೆಲ್, ಮೂರನೇ ಅಂಪೈರ್ ಶರ್ಫುದ್ದೌಲಾ ಇಬ್ನೆ ಶಾಹಿದ್ ಮತ್ತು ನಾಲ್ಕನೇ ಅಂಪೈರ್ ಮೈಕ್ ಬರ್ನ್ಸ್ ಅವರು ಪಂತ್ ಮೇಲೆ ಆರೋಪಗಳನ್ನು ಹೊರಿಸಿದ್ದರು.
ಲೆವೆಲ್ 1 ಉಲ್ಲಂಘನೆಗಳಿಗೆ ಕನಿಷ್ಠ ದಂಡ, ಆಟಗಾರನ ಪಂದ್ಯ ಶುಲ್ಕದ ಗರಿಷ್ಠ ಶೇ 50 ರಷ್ಟು ದಂಡ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳು ಸೇರಿವೆ.
Advertisement