
ಐಪಿಎಲ್ 2024ನೇ ಆವೃತ್ತಿಯಿಂದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ನಾಯಕನ ಸ್ಥಾನದಿಂದ ಎಂಎಸ್ ಧೋನಿ ಕೆಳಗಿಳಿದಿದ್ದರು. ತಾನು ತಂಡವನ್ನು ಮುನ್ನಡೆಸುವುದಿಲ್ಲ ಎಂದು ಧೋನಿ ಘೋಷಿಸಿದ ಕ್ಷಣವನ್ನು ರುತುರಾಜ್ ನೆನಪಿಸಿಕೊಂಡಿದ್ದಾರೆ. 2024ರ ಐಪಿಎಲ್ ಆವೃತ್ತಿ ಆರಂಭಕ್ಕೂ ಮುನ್ನ, ಸಿಎಸ್‌ಕೆ ತಂಡದ ನಾಯಕತ್ವದಿಂದ ಕೆಳಗಿಳಿದ ಧೋನಿ, ಆರಂಭಿಕ ಬ್ಯಾಟ್ಸಮನ್ ರುತುರಾಜ್ ಗಾಯಕ್ವಾಡ್ ಅವರಿಗೆ ನಾಯಕತ್ವ ವಹಿಸಿದರು. 2019 ರಿಂದ ರುತುರಾಜ್ ಈ ಫ್ರಾಂಚೈಸಿಯ ಭಾಗವಾಗಿದ್ದಾರೆ.
ಐಪಿಎಲ್‌ನಲ್ಲಿ ಧೋನಿ 212 ಪಂದ್ಯಗಳಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸಿದ್ದಾರೆ. 2008ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಅವರ ನಾಯಕತ್ವದಲ್ಲಿ ಸಿಎಸ್‌ಕೆ 128 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ ಮತ್ತು 82 ಪಂದ್ಯಗಳಲ್ಲಿ ಸೋಲು ಕಂಡಿದೆ. ಸ್ಪಾಟ್ ಫಿಕ್ಸಿಂಗ್ ಹಗರಣದಿಂದಾಗಿ ಫ್ರಾಂಚೈಸಿ ಎರಡು ವರ್ಷ ಅಮಾನತುಗೊಂಡಿತ್ತು. 2022ರ ಆವೃತ್ತಿಯ ಆರಂಭದಲ್ಲಿ, ರವೀಂದ್ರ ಜಡೇಜಾ ಅವರು ಸಿಎಸ್‌ಕೆ ನಾಯಕತ್ವ ವಹಿಸಿಕೊಂಡಿದ್ದರು. ಬಳಿಕ ಎಂಟು ಪಂದ್ಯಗಳ ನಂತರ ಧೋನಿ ಮತ್ತೆ ನಾಯಕನಾದರು.
'ಕಳೆದ ವರ್ಷ ಟೂರ್ನಮೆಂಟ್‌ಗೆ ಕೇವಲ ಒಂದು ವಾರವಿರುವಾಗ ಎಂಎಸ್ ಧೋನಿ ನನ್ನ ಬಳಿಗೆ ಬಂದು, 'ಈ ವರ್ಷ ನಾನು ತಂಡವನ್ನು ಮುನ್ನಡೆಸುತ್ತಿಲ್ಲ- ನೀವು ಮುನ್ನಡೆಸುತ್ತಿದ್ದೀರಿ' ಎಂದು ಹೇಳಿದರು. ನಾನು ಆಶ್ಚರ್ಯಚಕಿತನಾದೆ, 'ಮೊದಲ ಪಂದ್ಯದಿಂದ? ಇದು ಖಚಿತವೇ?' ಎಂದು ಕೇಳಿದೆ. ತಯಾರಿ ನಡೆಸಲು ಕೆಲವೇ ದಿನಗಳು ಬಾಕಿ ಇದ್ದಾಗ, ಆ ಜವಾಬ್ದಾರಿ ಅಗಾಧವಾಗಿತ್ತು' ಎಂದು ರುತುರಾಜ್ ಹೇಳಿದ್ದಾರೆ.
'ಆದರೆ, 'ಇದು ನಿಮ್ಮ ತಂಡ. ನೀವೇ ನಿರ್ಧಾರಗಳನ್ನು ತೆಗೆದುಕೊಳ್ಳಿ. ಫೀಲ್ಡ್ ಪ್ಲೇಸ್‌ಮೆಂಟ್ಸ್ 50-50 ಕರೆಯಾಗಿರುವಾಗ ಹೊರತುಪಡಿಸಿ ನಾನು ಯಾವ ವಿಚಾರದಲ್ಲಿಯೂ ಮಧ್ಯೆ ಪ್ರವೇಶಿಸುವುದಿಲ್ಲ. ಆಗಲೂ, ನನ್ನ ಸಲಹೆಯನ್ನು ಅನುಸರಿಸುವುದು ಕಡ್ಡಾಯವಲ್ಲ' ಎಂದಿದ್ದರು. ಆ ಮಾತು ನನಗೆ ಬಹಳಷ್ಟು ಅರ್ಥಪೂರ್ಣವಾಗಿತ್ತು' ಎಂದು ಜಿಯೋಹಾಟ್‌ಸ್ಟಾರ್‌ನಲ್ಲಿ ಹೇಳಿದ್ದಾರೆ.
ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಐದು ಬಾರಿ ಐಪಿಎಲ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಫ್ರಾಂಚೈಸಿಯನ್ನು 2016 ಮತ್ತು 2017 ರಲ್ಲಿ ಅಮಾನತುಗೊಳಿಸಿದ್ದ ಆವೃತ್ತಿಗಳನ್ನು ಹೊರತುಪಡಿಸಿ, ಅವರು ತಮ್ಮ ಸಂಪೂರ್ಣ ವೃತ್ತಿಜೀವನವನ್ನು ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಕಳೆದಿದ್ದಾರೆ.
'ಒಬ್ಬ ಅನುಭವಿ ನಾಯಕ ಇನ್ನೂ ತಂಡದಲ್ಲಿರುವಾಗ, ಅವರ ಉಪಸ್ಥಿತಿಯು ಒಂದು ಆಸ್ತಿಯಾಗಿರಬಹುದು ಅಥವಾ ಅಗಾಧವಾಗಿರಬಹುದು. ನಾನು ನಿಜವಾಗಿಯೂ ತಂಡವನ್ನು ಮುನ್ನಡೆಸುತ್ತಿದ್ದೇನೆಯೇ ಅಥವಾ ಮಾಜಿ ನಾಯಕನೇ ಮುನ್ನಡೆಸುತ್ತಿದ್ದಾನೆಯೇ ಎಂದು ಕೆಲವು ಆಟಗಾರರು ಆಶ್ಚರ್ಯ ವ್ಯಕ್ತಪಡಿಸಬಹುದು. ಆದರೆ, ಧೋನಿ ಅವರ ವ್ಯಕ್ತಿತ್ವ ಅಸಾಧಾರಣವಾಗಿದೆ. ಹೊಸ ನಾಯಕನ ಮೇಲೆ ಯಾವುದೇ ಪ್ರಭಾವ ಬೀರದೆಯೇ ತಂಡವು ಯಶಸ್ವಿಯಾಗಿ ಮುನ್ನಡೆಯುವಂತೆ ಮಾಡುತ್ತಾರೆ' ಎಂದು ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಹೇಳಿದ್ದಾರೆ.
ರುತುರಾಜ್ ನಾಯಕತ್ವದಲ್ಲಿ ಸಿಎಸ್‌ಕೆ ಕಳೆದ ಆವೃತ್ತಿಯಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡಿತು. ಚೆನ್ನೈ ತಂಡ ಆಡಿರುವ 14 ಪಂದ್ಯಗಳಲ್ಲಿ ತಲಾ ಏಳು ಗೆಲುವುಗಳು ಮತ್ತು ಸೋಲುಗಳನ್ನು ಕಂಡಿದೆ.
ಧೋನಿ ಮುಂಬರುವ ಆವೃತ್ತಿಯಲ್ಲಿ ಸಿಎಸ್‌ಕೆ ಪರವಾಗಿ ಕಣಕ್ಕಿಳಿಯಲಿದ್ದಾರೆ. ಇದುವರೆಗೆ 264 ಪಂದ್ಯಗಳನ್ನು ಆಡಿರುವ ಅವರು 24 ಅರ್ಧಶತಕಗಳೊಂದಿಗೆ 5234 ರನ್ ಗಳಿಸಿದ್ದಾರೆ.
Advertisement