
ಲಖನೌ: ಇಲ್ಲಿನ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಅಂಪೈರ್ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಶುಕ್ರವಾರ ಪಂದ್ಯ ಶುಲ್ಕದ ಶೇ 10ರಷ್ಟು ದಂಡ ವಿಧಿಸಲಾಗಿದೆ.
ಯುಪಿ ವಾರಿಯರ್ಸ್ ಇನಿಂಗ್ಸ್‌ನ 19ನೇ ಓವರ್‌ನ ಕೊನೆಯಲ್ಲಿ ಅಂಪೈರ್ ಅಜಿತೇಶ್ ಅರ್ಗಲ್ ನಿಧಾನಗತಿಯ ಓವರ್ ರೇಟ್‌ನಿಂದಾಗಿ ಅಂತಿಮ ಓವರ್‌ನಲ್ಲಿ ಕೇವಲ ಮೂವರು ಫೀಲ್ಡರ್‌ಗಳು ಮೈದಾನದಲ್ಲಿ ಇರಲು ಸಾಧ್ಯ ಎಂದು ಅಂಪೈರ್ ಅಜಿತೇಶ್ ಅರ್ಗಲ್ ಹರ್ಮನ್‌ಪ್ರೀತ್‌ಗೆ ತಿಳಿಸಿದರು.
ಇದರಿಂದ ಅತೃಪ್ತರಾದ ಹರ್ಮನ್‌ಪ್ರೀತ್ ಅಂಪೈರ್ ಜೊತೆ ಕೆಲಕಾಲ ವಾಗ್ವಾದ ನಡೆಸಿದ್ದು ಕಂಡುಬಂತು. ತಂಡದ ಸಹ ಆಟಗಾರ್ತಿ ಅಮೆಲಿಯಾ ಕೆರ್ ಕೂಡ ಈ ಚರ್ಚೆಯಲ್ಲಿ ಭಾಗವಹಿಸಿದರು.
'ಹರ್ಮನ್‌ಪ್ರೀತ್ ಕೌರ್ ಪಂದ್ಯದ ಸಮಯದಲ್ಲಿ ಅಂಪೈರ್ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಆರ್ಟಿಕಲ್ 2.8 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಮಾಡಿದ್ದಾರೆ. ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ, ಪಂದ್ಯ ಶುಲ್ಕದ ಶೇ 10ರಷ್ಟು ದಂಡ ವಿಧಿಸಲಾಗಿದೆ' ಎಂದು WPL ಪ್ರಕಟಣೆಯಲ್ಲಿ ತಿಳಿಸಿದೆ.
ಪಂದ್ಯದ ಸಮಯದಲ್ಲಿ ಹರ್ಮನ್‌ಪ್ರೀತ್ ಕೌರ್ ಅವರು ಯುಪಿ ವಾರಿಯರ್ಸ್ ತಂಡದ ಸೋಫಿ ಎಕಲ್‌ಸ್ಟನ್ ಅವರೊಂದಿಗೂ ಜಗಳವಾಡಿದರು.
Advertisement