ದ್ರಾವಿಡ್, ರವಿ ಶಾಸ್ತ್ರಿ ಕೂಡ ಮಾಡದ ಟಾಸ್ಕ್ ಗೆ Gautam Gambhir ನಿಯೋಜನೆ; IPL ಅವಧಿಯಲ್ಲಿ ನೂತನ ಸಾಹಸ! ಹೊಸ ಟ್ರೆಂಡ್!
ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಬಳಿಕ ಸ್ವದೇಶಕ್ಕೆ ಮರಳಿರುವ ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಅದಾಗಲೇ ಮತ್ತೊಂದು ಹೊಸ ಟಾಸ್ಕ್ ಸಿದ್ಧರಾಗುತ್ತಿದ್ದು, ಮಾಜಿ ಕೋಚ್ ಗಳಾದ ರಾಹುಲ್ ದ್ರಾವಿಡ್ ಮತ್ತು ರವಿಶಾಸ್ತ್ರಿ ಅವರೂ ಕೂಡ ಮಾಡದ ಹೊಸ ಸಾಹಸಕ್ಕೆ ಗಂಭೀರ್ ಮುಂದಾಗಿದ್ದಾರೆ.
ಹೌದು.. ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು 2ನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. ಆಟಗಾರರೆಲ್ಲರೂ ಇದೀಗ ಭಾರತಕ್ಕೆ ಮರಳಿದ್ದು, ಇದೇ ತಿಂಗಳ ಅಂತ್ಯದಲ್ಲಿ ಐಪಿಎಲ್ ಟೂರ್ನಿ ಆರಂಭವಾಗಲಿದೆ. ಹೀಗಾಗಿ ಟೀಂ ಇಂಡಿಯಾದ ಎಲ್ಲ ಆಟಗಾರರೂ ಐಪಿಎಲ್ ನಲ್ಲಿ ಮಗ್ನರಾಗಲಿದ್ದು, ಇನ್ನೆರಡು ತಿಂಗಳಕಾಲ ಸತತ ಚುಟುಕು ಪಂದ್ಯಗಳನ್ನಾಡಲಿದ್ದಾರೆ.
ಹೀಗಾಗಿ ಕೋಚ್ ಗೌತಮ್ ಗಂಭೀರ್ ಇನ್ನೆರಡು ತಿಂಗಳಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಗೌತಮ್ ಗಂಭೀರ್ ಗೆ ಬಿಸಿಸಿಐ ಹೊಸ ಟಾಸ್ಕ್ ನೀಡಿದ್ದು, ಮುಂಬರುವ ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ತಂಡ ಸಿದ್ಧಪಡಿಸುವ ಹೊಸ ಟಾಸ್ಕ್ ನೀಡಿದೆ.
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಇಂಡಿಯಾ ಎ ತಂಡದ ಜೊತೆ ಗಂಭೀರ್ ಪಯಣ
ಮುಂಬರುವ ಜೂನ್ ನಲ್ಲಿ ಭಾರತ ಪುರುಷರ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುನ್ನ ಮುಖ್ಯ ಕೋಚ್ ಗೌತಮ್ ಗಂಭೀರ್ ಹೊಸ ಟಾಸ್ಕ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜೂನ್‌ನಲ್ಲಿ ಇಂಗ್ಲೆಂಡ್‌ಗೆ ಹಿರಿಯರ ತಂಡದ ಪ್ರವಾಸಕ್ಕೆ ಮುಂಚಿತವಾಗಿ ಭಾರತ 'ಎ' ತಂಡದೊಂದಿಗೆ ಗಂಭೀರ್ ವಿದೇಶ ಪ್ರಯಾಣ ಕೈಗೊಳ್ಳಲ್ಲಿದ್ದಾರೆ.
ದ್ರಾವಿಡ್, ರವಿ ಶಾಸ್ತ್ರಿ ಕೂಡ ಮಾಡದ ಕಾರ್ಯ
ಇನ್ನು ಈ ಮೂಲಕ ಗೌತಮ್ ಗಂಭೀರ್ ಮಾಜಿ ಕೋಚ್ ಗಳಾದ ರಾಹುಲ್ ದ್ರಾವಿಡ್ ಮತ್ತು ರವಿಶಾಸ್ತ್ರಿ ಕೂಡ ಮಾಡದ ಕಾರ್ಯಕ್ಕೆ ಕೈಹಾಕಿದ್ದು, ಭಾರತ ಎ ತಂಡದೊಂದಿಗೆ ವಿದೇಶ ಪ್ರವಾಸ ಕೈಗೊಂಡ ಭಾರತದ ಮೊದಲ ಮುಖ್ಯ ಕೋಚ್ ಎಂಬ ಕೀರ್ತಿಗೂ ಭಾಜನರಾಗಲಿದ್ದಾರೆ.
ಈ ಹಿಂದೆ ಅಂದರೆ ಕಳೆದ ಕೆಲವು ವರ್ಷಗಳಿಂದ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ತರಬೇತುದಾರರನ್ನು ಭಾರತ ಎ ಮತ್ತು ಅಂಡರ್ 19 ತಂಡಗಳೊಂದಿಗೆ ನಿಯೋಜನೆ ಮಾಡುತ್ತಿತ್ತು. ಈ ಹಿಂದೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಭಾರತ ಎ ತಂಡ ಅಥವಾ ಅಂಡರ್ 19 ತಂಡದ ಜೊತೆ ಪ್ರಯಾಣ ಬೆಳೆಸಿದ್ದರು.
ದ್ರಾವಿಡ್ ಟೀಮ್ ಇಂಡಿಯಾದ ಮುಖ್ಯ ತರಬೇತುದಾರರಾದ ನಂತರ, ಭಾರತ ಎ ಮತ್ತು ಅಂಡರ್ 19 ತಂಡಗಳ ಜವಾಬ್ದಾರಿಗಳನ್ನು ಲಕ್ಷ್ಮಣ್ ಮತ್ತು ಇತರ ತರಬೇತುದಾರರಿಗೆ ವಹಿಸಲಾಗಿತ್ತು.
ಗೌತಮ್ ಗಂಭೀರ್ ಹೊಸ ಟ್ರೆಂಡ್
ಕೋಚ್ ಆಗಿ ನೇಮಕಗೊಂಡ ಆರಂಭದಿಂದಲೂ ಟೀಂ ಇಂಡಿಯಾದಲ್ಲಿ ಒಂದಲ್ಲಾ ಒಂದು ಟ್ರೆಂಡ್ ಸೃಷ್ಟಿಸುತ್ತಿರುವ ಗೌತಮ್ ಗಂಭೀರ್ ಈ ಬಾರಿ ಭಾರತ ಎ ತಂಡದೊಂದಿಗೆ ಪ್ರಯಾಣಿಸುವ ಮೂಲಕ ಮತ್ತೊಂದು ದಾಖಲೆ ಸೃಷ್ಟಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ