
ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಮುಕ್ತಾಯವಾಗಿದ್ದು, ನ್ಯೂಜಿಲೆಂಡ್ ತಂಡವನ್ನು ಫೈನಲ್ ನಲ್ಲಿ ಸೋಲಿಸಿದ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಾ ತಮ್ಮ ಒಂದೇ ಒಂದು ಫೋಟೋ ಮೂಲಕ ದಾಖಲೆಯನ್ನೇ ಸೃಷ್ಟಿಸಿದ್ದಾರೆ.
ಹೌದು.. ಕಳೆದ ಭಾನುವಾರ ಅಂದರೆ ಮಾರ್ಚ್ 9ರಂದು ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಮೂರನೇ ಬಾರಿಗೆ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿಯಿತು.
2017ರಲ್ಲಿಯೂ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲು ಕಂಡಿತು. ಆ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೂಡ ತಂಡದ ಸದಸ್ಯರಾಗಿದ್ದರು. ಈಗ ವಿಜೇತ ತಂಡದ ಸದಸ್ಯರೂ ಆಗಿದ್ದಾರೆ.
ಹಾರ್ದಿಕ್ ಪಾಂಡ್ಯಾ ಫೋಟೋ ದಾಖಲೆ
ಚಾಂಪಿಯನ್ಸ್ ಟ್ರೋಫಿ ಜಯಿಸಿದ ಬೆನ್ನಲ್ಲೇ ಕಪ್ ಪಡೆದ ಟೀಮ್ ಇಂಡಿಯಾ ಮೈದಾನದಲ್ಲಿ ಸಂಭ್ರಮಿಸಿದರು. ಒಬ್ಬೊಬ್ಬ ಆಟಗಾರರೂ ಕಪ್ ನೊಂದಿಗೆ ಒಂದೊಂದು ಪೋಸ್ ನೀಡಿದ್ದರು. ಅದೇ ರೀತಿ ಚಾಂಪಿಯನ್ಸ್ ಟ್ರೋಫಿಯೊಂದಿಗೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಪೋಸ್ ನೀಡಿದ್ದರು. ಅವರದ್ದೇ ಆದ ಧಾಟಿಯಲ್ಲಿ ವಿಶೇಷವಾಗಿ ಹಾರ್ದಿಕ್ ಪಾಂಡ್ಯ ಪೋಸ್ ನೀಡಿ ಆ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗೆ ಅಪ್ಲೋಡ್ ಮಾಡಿದ್ದರು. ಇದೀಗ ಇದೇ ಫೋಟೋ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ. ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಾಖಲೆ ಬರೆದ ಫೋಟೋ, 6 ನಿಮಿಷದಲ್ಲಿ 1 ಮಿಲಿಯನ್ ಲೈಕ್ಸ್
2024ರ ಟಿ20 ವಿಶ್ವಕಪ್ ಗೆದ್ದ ನಂತರ ಹಾರ್ದಿಕ್ ಟ್ರೋಫಿಯೊಂದಿಗೆ ಹೇಗೆ ಪೋಸ್ ನೀಡಿದ್ದರೋ, ಅದೇ ರೀತಿ ಚಾಂಪಿಯನ್ಸ್ ಟ್ರೋಫಿಯೊಂದಿಗೆ ಹಾರ್ದಿಕ್ ಪೋಸ್ ನೀಡಿದ್ದರು. ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಷ್ಟರಮಟ್ಟಿಗೆ ಅಂದರೆ ವಿರಾಟ್ ಕೊಹ್ಲಿ ದಾಖಲೆಯನ್ನೇ ಮುರಿದಿದ್ದಾರೆ. ಆ ಫೋಟೋಗೆ ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್ ಲೈಕ್ಸ್ ಬಂದಿವೆ. ಅತಿ ವೇಗವಾಗಿ ಒಂದು ಮಿಲಿಯನ್ಸ್ ಲೈಕ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಈ ಹಿಂದೆ ಆ ದಾಖಲೆಯನ್ನು ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹೊಂದಿದ್ದರು. 2024ರ ಟಿ20 ವಿಶ್ವಕಪ್ ನಂತರ, ಕೊಹ್ಲಿ ಟ್ರೋಫಿಯೊಂದಿಗೆ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಆಗ ಕೇವಲ ಏಳು ನಿಮಿಷಗಳಲ್ಲಿ 1 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿತು. ಈಗ, ಹಾರ್ದಿಕ್ ಅವರ ಫೋಟೋ ಕೇವಲ ಆರು ನಿಮಿಷಗಳಲ್ಲಿ 1 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ. ಪ್ರಸ್ತುತ, ಈ ಫೋಟೋ 1.66 ಕೋಟಿಗೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.
ಟಿಕ್ ಟಾಕರ್ ನಿಂದ ಸ್ಪೂರ್ತಿ
ಹಾರ್ದಿಕ್ ಪಾಂಡ್ಯಾ ನೀಡಿದ್ದ ಆ ಪೋಸ್ ಖ್ಯಾತ ಟಿಕ್ ಟಾಕರ್ ಖ್ಯಾಬೆ ಲಾಮೆಯಿಂದ ಸ್ಪೂರ್ತಿ ಪಡೆದಿತ್ತು. ಒಂದೇ ಒಂದು ಮಾತನಾಡದೇ ಕೇವಲ ತನ್ನ ಕೈ ಸನ್ನೆಯಿಂದಲೇ ತ್ವರಿತವಾಗಿ ಮತ್ತು ಸುಲಭವಾಗಿ ಕೆಲಸಗಳನ್ನು ಹೇಗೆ ಮಾಡಬೇಕೆಂದು ತೋರಿಸುವುದರಲ್ಲಿ ಖ್ಯಾಬೆ ಲಾಮೆ ಅವರು ವಿಶ್ವಪ್ರಸಿದ್ದರಾಗಿದ್ದಾರೆ. ಅವರ ಸಿಗ್ನೆಚರ್ ಪೋಸ್ ಅನ್ನೇ ಹಾರ್ದಿಕ್ ಪಾಂಡ್ಯ ಅವರು ಕಾಪಿ ಮಾಡಿ, ಚಾಂಪಿಯನ್ಸ್ ಟ್ರೋಫಿಯೊಂದಿಗೆ ಪೋಸ್ ನೀಡಿದ್ದರು.
Advertisement