
2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್ ಜಯ ಸಾಧಿಸುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಈ ಅದ್ಭುತ ಗೆಲುವಿನ ನಂತರ ಇಂಗ್ಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಅವರೇ ನಾಯಕನಾಗಿ ಉಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಜನವರಿಯಲ್ಲಿ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 3 ಪಂದ್ಯಗಳಲ್ಲಿ ಕೇವಲ 31 ರನ್ ಗಳಿಸಿದ ನಂತರ, ರೋಹಿತ್ ಅವರು ನಾಯಕನಾಗಿ ಉಳಿಯುವ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಆದರೂ, ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ರೋಹಿತ್ ಅವರಿಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗಿತ್ತು. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ನಾಯಕತ್ವದ ವಿಷಯಕ್ಕೆ ಬಂದಾಗ ಅವರಿಗೆ ಬಿಸಿಸಿಐ ಬೆಂಬಲವಿದೆ ಎಂದು ವರದಿಯಾಗಿದೆ.
'ರೋಹಿತ್ ಶರ್ಮಾ ಅವರು ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಮುನ್ನಡೆಸಲು ಅವರು ಸರಿಯಾದ ಅಭ್ಯರ್ಥಿ ಎಂದು ಪ್ರತಿಯೊಬ್ಬ ಆಟಗಾರರೂ ಭಾವಿಸುತ್ತಾರೆ. ರೋಹಿತ್ ಕೂಡ ರೆಡ್-ಬಾಲ್ ಕ್ರಿಕೆಟ್ ಆಡುವುದನ್ನು ಮುಂದುವರಿಸುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ' ಎಂದು ಮೂಲಗಳು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.
ಐಸಿಸಿ ಅಧಿಕೃತ ವೆಬ್‌ಸೈಟ್ ಪ್ರಕಾರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅನುಭವವು ಭಾರತದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಯಶಸ್ಸಿಗೆ ಬೆನ್ನೆಲುಬಾಗಿದ್ದರೂ, ತಂಡಕ್ಕೆ ಆಲ್‌ರೌಂಡರ್‌ಗಳಿಂದ ಅತ್ಯುನ್ನತ ಬೆಂಬಲ ಸಿಕ್ಕಿತು. ಟೂರ್ನಮೆಂಟ್‌ನಾದ್ಯಂತ ಅವರ ಆಲ್‌ರೌಂಡರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದರು ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಐದು ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಮೂವರು ಆಲ್‌ರೌಂಡರ್‌ಗಳು ಆರಂಭಿಕರಾಗಿ ಆಡಿದ್ದರಿಂದ, ಭಾರತವು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತು ಮತ್ತು ಬೌಲಿಂಗ್ ವಿಭಾಗದಲ್ಲೂ ಹಲವಾರು ಆಯ್ಕೆಗಳನ್ನು ಹೊಂದಿತ್ತು.
Advertisement