
ಐಪಿಎಲ್ 2025 ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ (ಎಂಐ) ತಂಡದ ನಾಯಕತ್ವದ ಬಗ್ಗೆ ಟೀಕೆ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿವಾದವೊಂದನ್ನು ಹುಟ್ಟುಹಾಕಿದೆ. ಕಳೆದ ವರ್ಷ ಫಾಫ್ ಡು ಪ್ಲೆಸಿಸ್ ಅವರನ್ನು ತಂಡದಿಂದ ಕೈಬಿಟ್ಟ ನಂತರ ಐಪಿಎಲ್ 2025ನೇ ಆವೃತ್ತಿಗೆ ಆರ್‌ಸಿಬಿ ರಜತ್ ಪಾಟೀದಾರ್ ಅವರನ್ನು ನಾಯಕನನ್ನಾಗಿ ನೇಮಿಸಿದೆ. ಆರ್‌ಸಿಬಿಯ 'ಮಿಸ್ಟರ್ ನಾಗ್ಸ್' ಸರಣಿಯಲ್ಲಿ ಎಂಐ ನಾಯಕತ್ವ ಬದಲಾವಣೆ ಕುರಿತು ಟೀಕಿಸಲಾಗಿದೆ.
ಕಳೆದ ವರ್ಷ ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದ ಹಾರ್ದಿಕ್ ಪಾಂಡ್ಯ ಅವರು ಫ್ರಾಂಚೈಸಿಯ ನಾಯಕನಾಗಿ ನೇಮಕಗೊಂಡರು. ಇದರ ಪರಿಣಾಮವಾಗಿ, ದೀರ್ಘಕಾಲದಿಂದ ಪ್ರಾಂಚೈಸಿಯ ನಾಯಕನಾಗಿದ್ದ ರೋಹಿತ್ ಶರ್ಮಾ ಅವರು ಕೆಳಗಿಳಿಯಬೇಕಾಯಿತು. ಈ ನಿರ್ಧಾರವನ್ನು ಬಹುತೇಕ ಅಭಿಮಾನಿಗಳು ತೀವ್ರವಾಗಿ ಟೀಕಿಸಿದರು. ಹಾರ್ದಿಕ್ ವಿರುದ್ಧವೂ ಕೆಂಡಕಾರಿದರು.
ನಾಯಕತ್ವ ವಿಚಾರವಾಗಿ ಹಾರ್ದಿಕ್ ಮತ್ತು ರೋಹಿತ್ ನಡುವೆ ಬಿರುಕು ಉಂಟಾಗಿ ಡ್ರೆಸ್ಸಿಂಗ್ ರೂಂನಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂಬ ವರದಿಗಳೂ ಇದ್ದವು. ಅಲ್ಲದೆ 2025ನೇ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಮುಂಬೈ ತಂಡದಲ್ಲಿ ಉಳಿಯುವ ಬಗ್ಗೆಯೇ ಅನುಮಾನಗಳು ವ್ಯಕ್ತವಾಗಿದ್ದವು.
ಇದೀಗ ಆರ್‌ಸಿಬಿ ಹಂಚಿಕೊಂಡ ವಿಡಿಯೋದಲ್ಲಿ, ನಾಗ್ಸ್ ಪಾಟಿದಾರ್ ಅವರನ್ನು 'ರಜತ್, ನೀವು ನಾಯಕರಾದಿರಿ, ಎಲ್ಲ ಮಾಜಿ ಆರ್‌ಸಿಬಿ ನಾಯಕರು ನಿಮಗೆ ಅನುಮೋದನೆ ನೀಡಿದ್ದಾರೆ. ವಿರಾಟ್ ನಿಮಗೆ ಸಂದೇಶ ಕಳುಹಿಸಿದಂತೆ, ಫಾಫ್ ನಿಮಗೆ ಸಂದೇಶ ಕಳುಹಿಸಿದ್ದಾರೆ. ಹಾಗಾದರೆ, ಹೊಸ ನಾಯಕನನ್ನು ಘೋಷಿಸುವಾಗ ಇತರ ತಂಡಗಳು ಸಹ ಇದೇ ರೀತಿಯ ತಂತ್ರವನ್ನು ಅನುಸರಿಸಬೇಕಿತ್ತು ಎಂದು ನೀವು ಭಾವಿಸುತ್ತೀರಾ?' ಎಂದು ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪಾಟೀದಾರ್, 'ಕ್ಷಮಿಸಿ, ಏನು ನಡೆಯುತ್ತಿದೆ ಮತ್ತು ಏನು ನಡೆಯುತ್ತಿಲ್ಲ ಎಂಬುದನ್ನು ನಾನು ಎಂದಿಗೂ ಅನುಸರಿಸಲಿಲ್ಲ' ಎಂದು ಹೇಳುತ್ತಾರೆ.
ಅದಕ್ಕೆ ನಾಗ್ಸ್, 'ಓಹ್, ನೀವು ತುಂಬಾ ಮುಗ್ಧ ರಜತ್. ನಿಮಗೆ ನಿಜವಾಗಿಯೂ ತಿಳಿದಿಲ್ಲವೇ? ಎನ್ನುತ್ತಾರೆ. ನಿಜವಾಗಿಯೂ, ನನಗೆ ತಿಳಿದಿಲ್ಲ ಎಂದು ರಜತ್ ಹೇಳುತ್ತಾರೆ. ಹಾಗಾದರೆ ನೀವು ಯಾಕೆ ನಗುತ್ತಿದ್ದೀರಿ? ಎಂದು ನಾಗ್ಸ್ ಪ್ರಶ್ನಿಸುತ್ತಾರೆ. ನೋಡಿ, ಮೂಲತಃ, ಅವರು 'ಮೈ ನಹಿ ಜಾನ್ತಾ 'ಮಿ' ('MI nahi janta 'MI') ಎಂದು ಹೇಳಿದರು ಎಂದು ನಾಗ್ಸ್ ಹೇಳುತ್ತಾರೆ.
ನಾಗ್ಸ್ ಮತ್ತು ಪಾಟಿದಾರ್ ನಡುವಿನ ಸಂವಾದವು ಸಾಮಾಜಿಕ ಮಾಧ್ಯಮದಲ್ಲಿ ಮೀಮ್‌ಗಳ ಸುರಿಮಳೆಗೆ ಕಾರಣವಾಯಿತು.
Advertisement