
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ನಿರೀಕ್ಷೆಯಂತೆಯೇ ಹಲವು ನಾಯಟಕೀಯ ತಿರುವುಗಳನ್ನು ಪಡೆಯಿತು.
ಹೌದು.. ನಿನ್ನೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
ಆದರೆ ಈ ಪಂದ್ಯದ ಆರ್ ಸಿಬಿ ಇನ್ನಿಂಗ್ಸ್ ವೇಳೆ ಕೆಲ ನಾಟಕೀಯ ಘಟನೆಗಳು ನಡೆಯಿತು. ಆರ್ ಸಿಬಿ ನಾಯಕ ರಜತ್ ಪಾಟಿದಾರ್ ರ ಸತತ ಕ್ಯಾಚ್ ಬಿಟ್ಟ ಪ್ರಕರಣ ಒಂದೆಡೆಯಾದರೆ, ಇತ್ತ ವಿರಾಟ್ ಕೊಹ್ಲಿ ಚೆನ್ನೈ ಬೌಲರ್ ಗಳ ವಿರುದ್ಧ ಆಕ್ರೋಶಗೊಂಡ ಘಟನೆ ಕೂಡ ನಡೆಯಿತು.
Virat Kohli ಹೆಲ್ಮೆಟ್ ಗೆ ಬಡಿದ ಚೆಂಡು
ಆರ್ ಸಿಬಿ ಇನ್ನಿಂಗ್ಸ್ ನ 11ನೇ ಓವರ್ ವೇಳೆ ಚೆನ್ನೈ ವೇಗಿ ಎಸೆದ ಬೌನ್ಸರ್ ನೇರವಾಗಿ ಕೊಹ್ಲಿ ತಲೆಗೆ ಬಡಿಯಿತು. ಅದೃಷ್ಟವಶಾತ್ ಕೊಹ್ಲಿ ಹೆಲ್ಮೆಟ್ ಧರಿಸಿದ್ದರಿಂದ ಚೆಂಡು ಹೆಲ್ಮೆಟ್ ಬಡಿಯಿತು. ಚೆನ್ನೈ ವೇಗಿ ಮತೀಶಾ ಪತಿರಾಣಾ ಎಸೆದ 11 ಓವರ್ ನ ಮೊದಲ ಎಸೆತ ಬೌನ್ಸರ್ ಆಗಿತ್ತು. ಈ ಬೌನ್ಸರ್ ನೇರವಾಗಿ ಕೊಹ್ಲಿ ಹೆಲ್ಮೆಟ್ ಗೆ ಬಡಿಯಿತು. ಇದರಿಂದ ಮೈದಾನದಲ್ಲಿ ಕೆಲಕ್ಷಣಗಳ ಕಾಲ ಗೊಂದಲ ಉಂಟಾಯಿತು. ಗಂಟೆಗೆ 142 ಕಿಮೀ ವೇಗದಲ್ಲಿ ಬಂದ ಚೆಂಡು ಕೊಹ್ಲಿ ಹೆಲ್ಮೆಟ್ ಗೆ ಬಡಿಯಿತು.
ಓಡೋಡಿ ಬಂದ ವೈದ್ಯರು
ಅತ್ತ ಕೊಹ್ಲಿ ತಲೆಗೆ ಚೆಂಡು ಬಡಿಯುತ್ತಲೇ ಡಗೌಟ್ ನಲ್ಲಿದ್ದ ವೈದ್ಯರು ಮತ್ತು ಫಿಸಿಯೋ ಓಡೋಡಿ ಬಂದು ಕೊಹ್ಲಿಯನ್ನು ಪರೀಕ್ಷಿಸಿದರು. ಈ ವೇಳೆ ಕೊಹ್ಲಿ ತಮಗೇನೂ ಆಗಿಲ್ಲ ಎಂದು ಸೂಚಿಸಿ ಅವರನ್ನು ವಾಪಸ್ ಕಳುಹಿಸಿದರು. ಆದರೆ ಬಳಿಕ ಕೊಹ್ಲಿ ಚಿಕಿತ್ಸೆ ನೀಡಿದ್ದು ಮಾತ್ರ ಚೆನ್ನೈ ಬೌಲರ್ ಗೆ..
CSK ಬೌಲರ್ ಗೆ ಟ್ರೀಟ್ ಮೆಂಟ್
ಮೊದಲ ಎಸೆತದಲ್ಲೇ ಕೊಹ್ಲಿಗೆ ಆಘಾತಕಾರಿ ಬೌನ್ಸರ್ ಹಾಕಿದ ಪತಿರಾಣಾಗೆ ಕೊಹ್ಲಿ ಕೂಡ ತಮ್ಮ ಬ್ಯಾಟ್ ನಿಂದಲೇ ಟ್ರೀಟ್ ಮೆಂಟ್ ನೀಡಿದರು. 11ನೇ ಓವರ್ ನ 2ನೇ ಎಸೆತವನ್ನೂ ಬೌನ್ಸರ್ ಹಾಕಿದ ಪತಿರಾಣಾಗೆ ಕೊಹ್ಲಿ ಸಿಕ್ಸರ್ ಭಾರಿಸುವ ಮೂಲಕ ಉತ್ತರ ನೀಡಿದರು. ಅಷ್ಟು ಮಾತ್ರವಲ್ಲದೇ ನಂತರದ ಎಸೆತವನ್ನೂ ಬೌಂಡರಿಗೆ ಅಟ್ಟಿದರು.
ಬಳಿಕ 1 ರನ್ ಪಡೆದು ಪಾಟಿದಾರ್ ಗೆ ಕ್ರೀಸ್ ಬಿಟ್ಟು ಕೊಟ್ಟು ತಮ್ಮ ಸೇಡು ತೀರಿಸಿಕೊಂಡರು. ಅತ್ತ ಪಾಟಿದಾರ್ ಕೂಡ ಪತಿರಾಣಾಗೆ ಮತ್ತೆ ಬೆಲ್ಟ್ ಟ್ರೀಟ್ ಮೆಂಟ್ ಕೊಟ್ಟರು. ಅವರೂ ಕೂಡ ನಂತರದ ಎಸೆತವನ್ನು ಬೌಂಡರಿಗೆ ಅಟ್ಟಿದರು. ಇದು ಪತಿರಾಣಾಗೆ ಕೊಂಚ ಮುಜುಗರ ಏರ್ಪಡುವಂತೆ ಮಾಡಿತು. ಆ ಓವರ್ ನಲ್ಲಿ ಪತಿರಾಣಾ ಬರೊಬ್ಬರಿ 16 ರನ್ ನೀಡಿದರು. ಇದು ಪಂದ್ಯದ ದುಬಾರಿ ಓವರ್ ಕೂಡ ಆಯಿತು.
Advertisement