
ಚೆನ್ನೈ: ಐಪಿಎಲ್ ಪ್ರಾರಂಭವಾದ ಮೊದಲ ವರ್ಷ 2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಗೆಲುವು ಸಾಧಿಸಿತ್ತು. ಆ ನಂತರ ಆ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ವಿರುದ್ಧದ ಯಾವೊಂದು ಪಂದ್ಯವನ್ನು ಗೆಲ್ಲಲು ಆರ್ ಸಿಬಿಗೆ ಸಾಧ್ಯವಾಗಿರಲಿಲ್ಲ. ಆದರೆ ಈ ಸೋಲಿನ ಸರಣಿಯನ್ನು ನಿನ್ನೆ ನಡೆದ ಪಂದ್ಯದಲ್ಲಿ ಆರ್ ಸಿಬಿ ಮುರಿದಿದೆ. 17 ವರ್ಷಗಳ ಬಳಿಕ ಸಿಎಸ್ ಕೆ ಭದ್ರಕೋಟೆ ಚೆಪಾಕ್ ಕ್ರೀಡಾಂಗಣದಲ್ಲಿ ಆರ್ ಸಿಬಿ ತಂಡ ಜಯಭೇರಿ ಬಾರಿಸಿತ್ತು.
ಹೌದು.. ನಿನ್ನೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್ ಗಳ ಭರ್ಜರಿ ಜಯ ದಾಖಲಿಸಿತು.
ಬ್ಯಾಟಿಂಗ್ ನಲ್ಲಿ RCB ಬ್ಯಾಟರ್ ಗಳ ಅಬ್ಬರ
ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಬ್ಯಾಟರ್ ಗಳು ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದ್ದರು. ಆರ್ ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೋಡಿ ಮೊದಲ ವಿಕೆಟ್ ಗೆ 45 ರನ್ ಚಚ್ಚಿದರು. ಪ್ರಮುಖವಾಗಿ ಸ್ಫೋಟಕ ಆರಂಭ ನೀಡಿದ ಫಿಲಿಪ್ ಸಾಲ್ಟ್ ಕೇವಲ 16 ಎಸೆತಗಳಲ್ಲಿ 1 ಸಿಕ್ಸರ್, 5 ಬೌಂಡರಿ ಸಹಿತ 32 ರನ್ ಕಲೆ ಹಾಕಿ ಆರ್ ಸಿಬಿಗೆ ಭರ್ಜರಿ ಆರಂಭ ನೀಡಿದರು. ಫಿಲ್ ಸಾಲ್ಟ್ ಔಟಾದ ನಂತರ ಬಂದ ದೇವದತ್ ಪಡಿಕ್ಕಲ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 14 ಎಸೆತಗಳನ್ನು ಎದುರಿಸಿ 2 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ 27 ರನ್ ಗಳಿಸಿದರು. ಬಳಿಕ ವಿರಾಟ್ ಕೊಹ್ಲಿ 31 ಸಿಡಿಸಿ ಔಟಾದರೆ ನಾಯಕ ರಜತ್ ಪಾಟಿದರ್ 32 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 51 ರನ್ ಗಳಿಸಿದರು. ಇದು ತಂಡದ ಮೊತ್ತ 190ರ ಗಡಿ ದಾಟಲು ನೆರವಾಯಿತು.
ಬೌಲಿಂಗ್ ನಲ್ಲಿ ಆರ್ ಸಿಬಿ ಅತ್ಯುತ್ತಮ ಪ್ರದರ್ಶನ
ಸ್ಪರ್ಧಾತ್ಮಕ ಮೊತ್ತವನ್ನು ಸೆಟ್ ಮಾಡಿದ್ದ ಆರ್ ಸಿಬಿ ನಂತರ ಬೌಲಿಂಗ್ ವಿಭಾಗದಲ್ಲೂ ಆಕ್ರಮಣಕಾರಿ ಪ್ರದರ್ಶನ ಮುಂದುವರೆಸಿತು. ಜೋಶ್ ಹೇಜಲ್ವುಡ್ ತಮ್ಮ ಮೊದಲ ಓವರ್ ನಲ್ಲೇ ರಾಹುಲ್ ತ್ರಿಪಾಠಿ ಮತ್ತು ರುತುರಾಜ್ ಗಾಯಕವಾಡ್ ಅವರನ್ನು ಔಟ್ ಮಾಡಿದ್ದು ಚೆನ್ನೈಗೆ ಬೆನ್ನು ಮೂಳೆ ಮುರಿದಂತೆ ಆಗಿತ್ತು. ಇನ್ನು ಜೋಶ್ ಹೇಜಲ್ವುಡ್ ಒಟ್ಟಾರೆ 3 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಯಶ್ ದಯಾಳ್ ಮತ್ತು ಲಿವಿಂಗ್ಸ್ಟೋನ್ ತಲಾ ಎರಡು ವಿಕೆಟ್ ಪಡೆದು ತಂಡಕ್ಕೆ ನೆರವಾದರು. ಈ ಬಾರಿ ಆರ್ ಸಿಬಿ ಬೌಲಿಂಗ್ ವಿಭಾಗ ತಕ್ಕ ಮಟ್ಟಿಗೆ ಬಲಿಷ್ಠವಾಗಿ ಕಾಣುತ್ತಿದೆ. ಅದಕ್ಕೆ ಕಾರಣ ಭುವನೇಶ್ವರ್ ಕುಮಾರ್.
ಸಿಎಸ್ ಕೆ ಕಳಪೆ ಫೀಲ್ಡಿಂಗ್
ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಸಿಎಸ್ ಕೆಗೆ ಕಳಪೆ ಫೀಲ್ಡಿಂಗ್ ಹೆಚ್ಚು ಹಿನ್ನಡೆಗೆ ಕಾರಣವಾಯಿತು. ಹೌದು... ಆರ್ ಸಿಬಿ ತಂಡದ ನಾಯಕ ರಜತ್ ಪಾಟಿದರ್ ಅವರಿಗೆ ನಾಲ್ಕು ಜೀವದಾನ ಸಿಕ್ಕಿತ್ತು. ಇದನ್ನು ಬಳಸಿಕೊಂಡ ಪಾಟಿದಾರ್ ಅರ್ಧಶತಕ ಸಿಡಿಸಿದರು.
ರನ್ ಹೊಡೆಯಲು CSK ಬ್ಯಾಟರ್ ಗಳ ಪರದಾಟ
ಆರ್ ಸಿಬಿ ನೀಡಿದ 197 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಸಿಎಸ್ ಕೆ ಗೆ ಆರ್ ಸಿಬಿ ಬೌಲರ್ ಗಳು ಸಿಂಹಸ್ವಪ್ನದಂತೆ ಕಾಡಿದರು. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ ತ್ರಿಪಾಠಿಯನ್ನು 5 ರನ್ ಗಳಿಸಿದ್ದಾಗ ಜೋಶ್ ಹೇಜಲ್ವುಡ್ ಔಟ್ ಮಾಡಿದರು. ಅದೇ ಓವರ್ ನಲ್ಲಿ ಸಿಎಸ್ ಕೆ ನಾಯಕ ರುತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿದರು. ಇದು ಚೆನ್ನೈ ತಂಡದ ಬ್ಯಾಟರ್ ಗಳನ್ನು ಮೇಲೆ ಹೆಚ್ಚು ಒತ್ತಡಕ್ಕೆ ಸಿಲುಕಿಸಿತ್ತು. ಹೀಗಾಗಿ ರಚಿನ್ ರವೀಂದ್ರ ತಾಳ್ಮೆಯ ಆಟವಾಡಲು ಶುರು ಮಾಡಿದ್ದು 41 ರನ್ ಪೇರಿಸಿದರು. ಇನ್ನುಳಿದಂತೆ ದೀಪಕ್ ಹೂಡಾ 4, ಸ್ಯಾಮ್ ಕುರಾನ್ 8, ಶಿವಂ ದುಬೆ 19 ರನ್ ಗಳಿಸಿ ಔಟಾದರು. ಕೊನೆಯದಾಗಿ ರವೀಂದ್ರ ಜಡೇಜಾ ಸ್ವಲ್ಪ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಕೊನೆಯದಾಗಿ ಎಂಎಸ್ ಧೋನಿ 16 ಎಸೆತಗಳಲ್ಲಿ ಅಜೇಯ 30 ರನ್ ಪೇರಿಸಿದರು. ಕೊನೆಯ ಓವರ್ ನಲ್ಲಿ ಎರಡು ಸಿಕ್ಸರ್ ಸಿಡಿಸಿದ್ದು ಅವರ ಅಭಿಮಾನಿಗಳ ಖುಷಿಗೆ ಕಾರಣವಾಯಿತು. ಒಟ್ಟಿನಲ್ಲಿ ಸಿಎಸ್ ಕೆ 50 ರನ್ ಗಳಿಂದ ಹೀನಾಯ ಸೋಲು ಕಂಡಿತು.
Advertisement