
ಚೆನ್ನೈ: ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯ ಗೆದ್ದು ಬಳಿಕ ಸತತ 2 ಪಂದ್ಯಗಳಲ್ಲಿ ಸೋತು ಸುಣ್ಣವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾಜಿ ನಾಯಕ ಎಂಎಸ್ ಧೋನಿ ಬ್ಯಾಟಿಂಗ್ ಕ್ರಮಾಂಕದ್ದೇ ದೊಡ್ಡ ತಲೆನೋವಾಗಿದೆ.
ಹೌದು.. ಹಾಲಿ ಐಪಿಎಲ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭ ಅಷ್ಟೇನೂ ಉತ್ತಮವಾಗಿಲ್ಲ. ಮೊದಲ ಪಂದ್ಯ ಗೆದ್ದು ಆತ್ಮ ವಿಶ್ವಾಸದಲ್ಲಿದ್ದ ಚೆನ್ನೈ ತಂಡ ನಂತರದ ಆರ್ ಸಿಬಿ ಮತ್ತು ರಾಜಸ್ತಾನ ವಿರುದ್ಧದ 2 ಪಂದ್ಯಗಳನ್ನು ಸೋತು ಕಂಗೆಟ್ಟಿದೆ. ಭಾನುವಾರ ರಾಜಸ್ಥಾನ ರಾಯಲ್ಸ್ (RR) ವಿರುದ್ಧದ ಪಂದ್ಯದಲ್ಲೂ ಚೆನ್ನೈ 6 ರನ್‌ಗಳ ವಿರೋಚಿತ ಸೋಲು ಕಂಡಿತು.
ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಧೋನಿ, ವ್ಯಾಪಕ ಟೀಕೆಗೆ ತುತ್ತಾಗಿದ್ದರು. ಆದರೆ ರಾಜಸ್ತಾನದ ವಿರುದ್ಧದ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದರಾದರೂ ತಂಡವನ್ನು ಸೋಲಿನ ದವಡೆಯಿಂದ ಪಾರುಮಾಡಲು ಸಾಧ್ಯವಾಗಲಿಲ್ಲ. ಸಿಎಸ್ ಕೆ ಕೇವಲ 6 ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ಧೋನಿ ಬ್ಯಾಟಿಂಗ್ ಕ್ರಮಾಂಕದ ನಿಗೂಢತೆ ಬಿಚ್ಚಿಟ್ಟ ಕೋಚ್
ಪಂದ್ಯ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಸ್ ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್, 'ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಮತ್ತು ಹಿರಿಯ ಆಟಗಾರರಾಗಿದ್ದು, ಅವರು ಯಾವ ಕ್ರಮಾಂಕದಲ್ಲಿ ಆಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಅವರ ದೇಹ ಪರಿಸ್ಥಿತಿ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದರು.
ಧೋನಿ ಮೊಣಕಾಲಿನಲ್ಲಿ ಸಮಸ್ಯೆ
ಇದೇ ವೇಳೆ ಧೋನಿ ಫಿಟ್ನೆಸ್ ಕುರಿತು ಮಾತನಾಡಿದ ಫ್ಲೆಮಿಂಗ್, 'ಧೋನಿ ಅವರ ಮೊಣಕಾಲುಗಳು ಮೊದಲಿನಂತೆ ಇಲ್ಲ. ಅವರು ಚೆನ್ನಾಗಿ ಚಲಿಸುತ್ತಿದ್ದಾರೆಯಾದರೂ, ಅದರಲ್ಲಿ ಇನ್ನೂ ಒಂದು ಕ್ಷೀಣತೆಯ ಅಂಶವಿದೆ. ಧೋನಿ ಬ್ಯಾಟ್ ಸಹಿತ 10 ಓವರ್ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಆಯಾ ದಿನದ ಪರಿಸ್ಥಿತಿಗೆ ಅನುಗುಣವಾಗಿ ಧೋನಿ ತಮ್ಮ ಪಾತ್ರದ ಕುರಿತು ನಿರ್ಣಯಿಸುತ್ತಾರೆ. ಅವರು ನಮಗೆ ಏನು ನೀಡಬಹುದು ಎಂಬುದನ್ನು ಆ ದಿನ ಅಳೆಯುತ್ತಾರೆ. ಹಿಂದಿನಂತೆ ಆಟ ಸಮತೋಲನದಲ್ಲಿದ್ದರೆ, ಅವರು ಸ್ವಲ್ಪ ಮುಂಚಿತವಾಗಿಯೇ ಬ್ಯಾಟಿಂಗ್ ಆಡುತ್ತಾರೆ ಮತ್ತು ಇತರ ಅವಕಾಶಗಳು ಬಂದಾಗ ಅವರು ಇತರ ಆಟಗಾರರನ್ನು ಬೆಂಬಲಿಸುತ್ತಾರೆ. ಆದ್ದರಿಂದ ಅವರು ಅದನ್ನು ಸಮತೋಲನಗೊಳಿಸುತ್ತಿದ್ದಾರೆ ಎಂದು ಹೇಳಿದರು.
ನನ್ನ ಪ್ರಕಾರ ಧೋನಿ ಬ್ಯಾಟಿಂಗ್ ಮಾಡಲು ಸೂಕ್ತ ಸಮಯ ಎಂದರೆ ಅದು 13 ಅಥವಾ 14 ನೇ ಓವರ್ ನಂತರ, ಅದು ಕೂಡ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ನಾನು ಕಳೆದ ವರ್ಷವೂ ಹೇಳಿದ್ದೆ, ಅವರು ನಮಗೆ ತುಂಬಾ ಅಮೂಲ್ಯರು. ಧೋನಿ ಬ್ಯಾಟ್ಸ್‌ಮನ್ ಆಗಿ ನೀಡುವ ಪ್ರದರ್ಶನಕ್ಕಿಂತ 2025 ರ ಐಪಿಎಲ್‌ನಲ್ಲಿ ಸೂಪರ್ ಕಿಂಗ್ಸ್‌ಗೆ ನಾಯಕ ಮತ್ತು ವಿಕೆಟ್ ಕೀಪರ್ ಆಗಿ ಅವರ ಕೌಶಲ್ಯಗಳು ಹೆಚ್ಚು ಮುಖ್ಯ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
Advertisement