IPL 2025: ಧೋನಿ ಔಟ್ ಆಗುತ್ತಿದ್ದಂತೆ ಕ್ರೀಡಾಂಗಣ ಸ್ತಬ್ಧ; ಫ್ಯಾನ್ ಗರ್ಲ್ ಪ್ರತಿಕ್ರಿಯೆ ವೈರಲ್, ಮೀಮ್ಸ್‌ಗಳ ಸುರಿಮಳೆ!
ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ 'ಥಲಾ' ಎಂಎಸ್ ಧೋನಿ ಮತ್ತೊಂದು ಅಭೂತಪೂರ್ವ ಪ್ರದರ್ಶನ ನೀಡಿದರು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಧೋನಿ, 11 ಎಸೆತಗಳಲ್ಲಿ 16 ರನ್ ಗಳಿಸಿ ಸಂದೀಪ್ ಶರ್ಮಾ ಬೌಲಿಂಗ್‌ನಲ್ಲಿ ಶಿಮ್ರಾನ್ ಹೆಟ್ಮೇಯರ್‌ಗೆ ಕ್ಯಾಚ್ ನೀಡಿದರು.
ಧೋನಿ ಔಟ್ ಆಗುತ್ತಿದ್ದಂತೆ ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣ ಸ್ತಬ್ಧವಾಯಿತು. ಅಭಿಮಾನಿಗಳು ಧೋನಿ ಅವರ ಬ್ಯಾಟ್‌ನಿಂದ ಯಶಸ್ವಿ ಚೇಸಿಂಗ್ ಅನ್ನು ನಿರೀಕ್ಷಿಸಿದ್ದರು. ಹೆಟ್ಮೇಯರ್ ಡೀಪ್ ಮಿಡ್-ವಿಕೆಟ್‌ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಧೋನಿ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಅಂತಿಮ ಓವರ್‌ನಲ್ಲಿ 20 ರನ್‌ಗಳನ್ನು ಬೆನ್ನಟ್ಟಬೇಕಾದ ಸಿಎಸ್‌ಕೆಗೆ ಧೋನಿ ಅವರು ಕ್ರೀಸ್‌ನಲ್ಲಿ ಉಳಿಯುವುದು ಮುಖ್ಯವಾಗಿತ್ತು. ಆದರೆ, ಕೊನೆಯಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ 6 ರನ್‌ಗಳ ರೋಚಕ ಸೋಲು ಕಂಡಿತು.
ಧೋನಿ ಔಟ್ ಆಗುತ್ತಿದ್ದಂತೆ, ಕ್ರೀಡಾಂಗಣದಲ್ಲಿದ್ದ ಮಹಿಳಾ ಅಭಿಮಾನಿಯೊಬ್ಬರು ನೀಡಿದ ಪ್ರತಿಕ್ರಿಯೆ ಇದೀಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. ಹೆಟ್ಮೇಯರ್ ಧೋನಿ ಅವರ ಕ್ಯಾಚ್ ಹಿಡಿದಾಗ ಅಭಿಮಾನಿಯ ಮುಖಭಾವ ಅಂತರ್ಜಾಲದಲ್ಲಿ ಮೀಮ್ಸ್‌ಗೆ ಆಹಾರವಾಯಿತು.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಂಡಿರುವ ಸಿಎಸ್‌ಕೆ ಇದೀಗ ಸತತ 2 ಪಂದ್ಯಗಳನ್ನು ಸೋತಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಮೊದಲ ಪಂದ್ಯವನ್ನು ಮಾತ್ರ ಗೆದ್ದಿದೆ. ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಎದುರು ನಿರಾಶಾದಾಯಕ ಪ್ರದರ್ಶನ ನೀಡಿ ಸೋಲಿನ ರುಚಿ ನೋಡಿದೆ.
ಈ ಐಪಿಎಲ್‌ನಲ್ಲಿ ಧೋನಿಯ ಬ್ಯಾಟಿಂಗ್ ಸ್ಥಾನದ ಸುತ್ತ ಚರ್ಚೆ ನಡೆಯುತ್ತಿದೆ. ಟೀಂ ಇಂಡಿಯಾದ ಮಾಜಿ ನಾಯಕ 7, 8 ಅಥವಾ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದಾಗ್ಯೂ, ರಾಜಸ್ಥಾನ ವಿರುದ್ಧದ ಪಂದ್ಯದ ನಂತರ, ಚೆನ್ನೈ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ಧೋನಿಯವರ ಮೊಣಕಾಲುಗಳು 3-4 ವರ್ಷಗಳ ಹಿಂದಿನಂತೆ ಫಿಟ್ ಆಗಿಲ್ಲ. ಆದ್ದರಿಂದ, ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅವರನ್ನು ಮೊದಲಿನಂತೆ 10-12 ಓವರ್‌ಗಳಿಗೆ ಬ್ಯಾಟಿಂಗ್ ಮಾಡಲು ಕೇಳಲು ಸಾಧ್ಯವಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ