
ಭಾರತದ ಮುಂದಿನ ಟೆಸ್ಟ್ ನಾಯಕನ ಆಯ್ಕೆಯ ಕುರಿತು ಪರ ಮತ್ತು ವಿರೋಧ ಚರ್ಚೆಗಳು ಮುಂದುವರಿದಿರುವಂತೆಯೇ, ಭಾರತದ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 2024ರ ಕೊನೆಯಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾದ ಅಶ್ವಿನ್, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಖಾಲಿಯಾಗಿರುವ ನಾಯಕನ ಸ್ಥಾನದ ಬಗ್ಗೆ ಮಾತನಾಡಿದ್ದಾರೆ.
ಮೂಲಗಳ ಪ್ರಕಾರ, 25 ವರ್ಷದ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅವರನ್ನು ಭಾರತದ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ನಾಯಕನನ್ನಾಗಿ ಮಾಡಲಾಗುವುದು. ರೋಹಿತ್ ನಾಯಕನಾಗಿದ್ದಾಗ ಉಪನಾಯಕನಾಗಿದ್ದ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ನಾಯಕನ ಸ್ಥಾನಕ್ಕೆ ಕೈಬಿಡಲಾಗಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಬುಮ್ರಾ ಅವರ ವಯಸ್ಸು ಮತ್ತು ಫಿಟ್ನೆಸ್ ಸಮಸ್ಯೆಗಳಿಂದಾಗಿ ಗಿಲ್ ಅವರನ್ನು ನಾಯಕನ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ.
'ಜಸ್ಪ್ರೀತ್ ಬುಮ್ರಾ ಅವರಿಗೆ (ಭಾರತದ) ನಾಯಕತ್ವ ಸಿಗದಿರುವುದು ನನಗೆ ತುಂಬಾ ಬೇಸರ ತಂದಿದೆ ಮತ್ತು ನಿರಾಶೆ ಮೂಡಿಸಿದೆ. ಅವರು ರಾಷ್ಟ್ರೀಯ ನಿಧಿ ಎಂದೇ ನಾನು ಭಾವಿಸುತ್ತೇನೆ. ಅವರು ನಾಯಕನಾದಾಗ ನನಗೆ ತುಂಬಾ ಸಂತೋಷವಾಯಿತು. ಆದರೆ, ಆದರೆ, ಈಗ ಆ ಭರವಸೆ ಕಳೆದುಹೋಗಿದೆ ಎಂದು ಭಾವಿಸುತ್ತಿದ್ದೇನೆ' ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ 'ಆಶ್ ಕಿ ಬಾತ್' ನಲ್ಲಿ ಮಾತನಾಡುತ್ತಾ ಹೇಳಿದರು.
ಬುಮ್ರಾ ಈ ಹಿಂದೆ ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಆ ಪೈಕಿ ಒಂದರಲ್ಲಿ ಗೆಲುವು ಸಾಧಿಸಿದ್ದಾರೆ. 2024-25ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಬುಮ್ರಾ ನಾಯಕರಾಗಿದ್ದ ವೇಳೆ ಟೀಂ ಇಂಡಿಯಾ ಏಕೈಕ ಪಂದ್ಯದಲ್ಲಿ ಗೆಲುವು ಕಂಡಿತ್ತು.
'ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾವಾಗಲೂ ಇರುವ ವ್ಯಕ್ತಿಯೇ ನಾಯಕನಾಗಿರಬೇಕು. ಸ್ಪಷ್ಟ ಆಯ್ಕೆಗಳಿವೆ. ಆದರೆ, ನಾನು ಇನ್ನೊಂದು ಹೆಸರನ್ನು ಕೂಡ ಸೇರಿಸಲು ಬಯಸುತ್ತೇನೆ. ಅದು ರವೀಂದ್ರ ಜಡೇಜಾ' ಎಂದು ಅಶ್ವಿನ್ ಹೇಳಿದರು.
'ಯಾರನ್ನು ನಾಯಕ ಅಥವಾ ಉಪನಾಯಕರನ್ನಾಗಿ ಮಾಡಲಾಗುವುದು ಎಂಬ ಸುದ್ದಿ ಯಾವಾಗಲೂ ಇರುತ್ತದೆ. ಆದರೆ, ಅವರ ಹೆಸರು ಮೊದಲು ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿರಬೇಕು. ಅವರು ಸ್ವಯಂಚಾಲಿತ ಆಯ್ಕೆಯಾಗಿರಬೇಕು' ಎಂದು ಅಶ್ವಿನ್ ಹೇಳಿದರು.
ಶುಬ್‌ಮನ್ ಗಿಲ್ ಅವರನ್ನು 2024ರಲ್ಲಿ ಕೆಲವು ಸರಣಿಗಳಲ್ಲಿ ವೈಟ್-ಬಾಲ್ ಮಾದರಿಗಳಲ್ಲಿ ಭಾರತದ ಉಪನಾಯಕನನ್ನಾಗಿ ಮಾಡಲಾಯಿತು. ಆದರೆ ಗಿಲ್‌ಗೆ ಈ ಹಿಂದೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕತ್ವದ ಪಾತ್ರವನ್ನು ನೀಡಲಾಗಿಲ್ಲ. ಬುಮ್ರಾ ಮೈದಾನಕ್ಕೆ ಇಳಿಯಲು ಸಾಧ್ಯವಾಗದಿದ್ದಾಗ ಮತ್ತು ಆಸ್ಟ್ರೇಲಿಯಾ ವಿರುದ್ಧದ ಭಾರತದ ಅಂತಿಮ ಟೆಸ್ಟ್‌ನಲ್ಲಿ ರೋಹಿತ್ ಪ್ಲೇಯಿಂಗ್ ತಂಡದಿಂದ ಹೊರಗುಳಿದಿದ್ದ ವೇಳೆ, ಸ್ಟ್ಯಾಂಡ್-ಇನ್ ನಾಯಕನಾಗಿ ಅಧಿಕಾರ ವಹಿಸಿಕೊಂಡದ್ದು ವಿರಾಟ್ ಕೊಹ್ಲಿ, ಗಿಲ್ ಅಲ್ಲ.
Advertisement