
ಮುಂಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಮಹತ್ವದ ಅಂಕಿಅಂಶ ಹಂಚಿಕೊಂಡಿದ್ದು, ಭಾರತ ತಂಡ ಚಾಂಪಿಯನ್ ಆದ ಈ ಟೂರ್ನಿ ಐಸಿಸಿ ಈವೆಂಟ್ ಗಳಲ್ಲೇ ಅತೀ ಹೆಚ್ಚು ವೀಕ್ಷಣೆ ಪಡೆದ ಟೂರ್ನಿಯಾಗಿದೆ.
ಹೌದು.. 2025 ರ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy 2025) ಕ್ರಿಕೆಟ್ ಇತಿಹಾಸದ ಅಪರೂಪದ ದಾಖಲೆಗೆ ಪಾತ್ರವಾಗಿದೆ. ಈ ಟೂರ್ನಿ ಐಸಿಸಿ ಈವೆಂಟ್ ಗಳಲ್ಲೇ ಅತೀ ಹೆಚ್ಚು ವೀಕ್ಷಣೆ ಪಡೆದ ಟೂರ್ನಿಯಾಗಿ ಹೊಸ ದಾಖಲೆ ನಿರ್ಮಿಸಿದೆ.
ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು. ಆಲ್ಲದೆ 2013 ರ ಬಳಿಕ 2ನೇ ಬಾರಿಗೆ ಈ ಟ್ರೋಫಿ ಗೆದ್ದ ದಾಖಲೆ ಬರೆದಿತ್ತು. ಇದೀಗ ಇಡೀ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ವೀಕ್ಷಣೆಯ ವಿಚಾರದಲ್ಲಿ ದಾಖಲೆ ಬರೆದಿದ್ದು, ಇದುವರೆಗೆ ನಡೆದಿರುವ ಐಸಿಸಿ (ICC) ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಪಂದ್ಯಾವಳಿ ಎಂಬ ಹೊಸ ದಾಖಲೆ ಬರೆದಿದೆ.
ಈ ಬಗ್ಗೆ ಐಸಿಸಿ ಮಾಹಿತಿ ನೀಡಿದ್ದು, '2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯು 368 ಬಿಲಿಯನ್ ನಿಮಿಷಗಳ ಜಾಗತಿಕ ವೀಕ್ಷಣೆಯನ್ನು ಕಂಡಿದ್ದು, ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐಸಿಸಿ ಪಂದ್ಯಾವಳಿ ಎಂಬ ದಾಖಲೆಗೆ ಪಾತ್ರವಾಗಿದೆ. ಅಲ್ಲದೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಫೈನಲ್ ಪಂದ್ಯವೂ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಚಾಂಪಿಯನ್ಸ್ ಟ್ರೋಫಿ ಪಂದ್ಯ ಎಂಬ ದಾಖಲೆಯನ್ನೂ ನಿರ್ಮಿಸಿದೆ' ಎಂದು ಮಾಹಿತಿ ನೀಡಿದೆ.
ಜಯ್ ಶಾ ಟ್ವೀಟ್
ಈ ಬಗ್ಗೆ ಟ್ವೀಟ್ ಮಾಡಿರುವ ಐಸಿಸಿ ಅಧ್ಯಕ್ಷ ಜಯ್ ಶಾ, 'Champions Trophy 2025 ಈವೆಂಟ್ ಐಸಿಸಿ ಇತಿಹಾಸದ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಆವೃತ್ತಿಯಾಗಿದೆ ಎಂದು ದೃಢಪಡಿಸಲು ಖುಷಿಯಾಗುತ್ತಿದೆ. ಇದು 368 ಬಿಲಿಯನ್ ಜಾಗತಿಕ ವೀಕ್ಷಣಾ ನಿಮಿಷಗಳೊಂದಿಗೆ, 2017 ಕ್ಕಿಂತ ಶೇ.19% ಹೆಚ್ಚಾಗಿದೆ. ಭಾರತ-ನ್ಯೂಜಿಲೆಂಡ್ ಫೈನಲ್ ಪಂದ್ಯ 65.3 ಬಿಲಿಯನ್ ಜಾಗತಿಕ ನೇರ ವೀಕ್ಷಣಾ ನಿಮಿಷಗಳ ದಾಖಲೆ ಮಾಡಿದ್ದು, ಇದೂ ಸಹ 2017 ರ ಫೈನಲ್‌ನಲ್ಲಿ ಸಿಕ್ಕಿದ್ದ ವೀಕ್ಷಣೆಗಿಂತ ಶೇ.52.1% ರಷ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.
2025ರ ಚಾಂಪಿಯನ್ಸ್ ಟ್ರೋಫಿ ಬರೋಬ್ಬರಿ 368 ಬಿಲಿಯನ್ ನಿಮಿಷಗಳ ಜಾಗತಿಕ ವೀಕ್ಷಣೆ ಕಂಡಿದೆ. ಇದು 2017ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ವೀಕ್ಷಣೆಗಿಂತ ಶೇಕಡಾ 19 ರಷ್ಟು ಹೆಚ್ಚಳವಾಗಿದೆ. ಈ ಮೂಲಕ ಇದುವರೆಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಕೂಡ ಆಗಿದೆ.
ಇದಲ್ಲದೆ, ಈ ಟೂರ್ನಿ ಪ್ರತಿ ಓವರ್‌ಗೆ 308ಮಿಲಿಯನ್ ನಿಮಿಷಗಳ ಜಾಗತಿಕ ವೀಕ್ಷಣೆ ಪಡೆಯುವ ಮೂಲಕ ಐಸಿಸಿ ಈವೆಂಟ್ವೊಂದು ಅತ್ಯಧಿಕ ವೀಕ್ಷಣೆ ಪಡೆದ ದಾಖಲೆಯನ್ನು ಬರೆದಿದೆ. ಹಾಗೆಯೇ ದುಬೈನಲ್ಲಿ ಮಾರ್ಚ್ 9 ರಂದು ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯ ವಿಶ್ವದಾದ್ಯಂತ 65.3 ಬಿಲಿಯನ್ ನಿಮಿಷಗಳ ಲೈವ್ ವೀಕ್ಷಣೆ ಕಂಡಿದ್ದು, ಈ ಮೂಲಕ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಚಾಂಪಿಯನ್ಸ್ ಟ್ರೋಫಿ ಪಂದ್ಯ ಎನಿಸಿಕೊಂಡಿದೆ. ಇದರೊಂದಿಗೆ 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನಿರ್ಮಿಸಲಾದ ದಾಖಲೆಯನ್ನು ಸಹ ಮುರಿದಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ
Advertisement